Doddimatti Village ಶಿವಮೊಗ್ಗ: ಜಿಲ್ಲೆಯ ಸೌಲಭ್ಯವಂಚಿತ ದೊಡ್ಡಿಮಟ್ಟಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಹಾಗೂ ಅದನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ನಡೆಸುತ್ತಿರುವ ನಿರಂತರ ಹೋರಾಟಕ್ಕೆ ಕೊನೆಗೂ ಜಿಲ್ಲಾಡಳಿತ ಸ್ಪಂದಿಸಿದೆ. ನಾಗರಿಕರು ಮುಂಬರುವ ಚುನಾವಣೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸುವ ಕಠಿಣ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ, ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ನಿಯೋಗವು ನಿನ್ನೆ ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಿ ವಾಸ್ತವ ಸ್ಥಿತಿಯ ಪರಿಶೀಲನೆ ನಡೆಸಿದೆ.
ಶಿವಮೊಗ್ಗ : KSRTC ಬಸ್ನಲ್ಲಿ ಲಕ್ಷಾಂತರ ರೂಪಾಯಿ ಆಭರಣ ಕಳ್ಳತನ: ಮಹಿಳೆ ಸೇರಿ ಇಬ್ಬರು ಅರೆಸ್ಟ್
ಕಳೆದ ವಿಧಾನಸಭಾ ಚುನಾವಣೆಯ ವೇಳೆಯೂ ರಸ್ತೆ ಸೇರಿದಂತೆ ಕನಿಷ್ಠ ಸೌಲಭ್ಯಗಳಿಲ್ಲದ ಕಾರಣ ದೊಡ್ಡಿಮಟ್ಟಿ ನಿವಾಸಿಗಳು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದರು. ಆಗ ಸ್ಥಳಕ್ಕೆ ಧಾವಿಸಿದ್ದ ಅಂದಿನ ಉಪ ವಿಭಾಗಾಧಿಕಾರಿಗಳು, ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸುವ ಆಶ್ವಾಸನೆ ನೀಡಿ ಮತದಾನ ನಡೆಯುವಂತೆ ಮಾಡಿದ್ದರು. ಆದರೆ, ಆ ಭರವಸೆಗಳು ಕೇವಲ ಕಾಗದದ ಮೇಲೆಯೇ ಉಳಿದಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಎರಡು ತಿಂಗಳ ಹಿಂದಷ್ಟೇ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ರಸ್ತೆ ನಿರ್ಮಾಣಕ್ಕಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ತೀವ್ರ ಅಸಮಾಧಾನದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ನಿನ್ನೆ ಅಧಿಕಾರಿಗಳ ವಿಶೇಷ ಸಭೆ ಮತ್ತು ಭೇಟಿ ನಿಗದಿಯಾಗಿತ್ತು.
ನಿನ್ನೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್ ಕುಮಾರ್ ನೇತೃತ್ವದಲ್ಲಿ ಇಒ, ಡಿಡಿಪಿಐ, ಸಿಡಿಪಿಒ, ಉಪ ತಹಶೀಲ್ದಾರ್, ವಲಯ ಅರಣ್ಯಾಧಿಕಾರಿ (ಆರ್ ಎಫ್ ಒ), ಭೋವಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರನ್ನೊಳಗೊಂಡ ಬೃಹತ್ ತಂಡ ದೊಡ್ಡಿಮಟ್ಟಿಗೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಹಕ್ಕೊತ್ತಾಯಗಳ ಮನವಿಯನ್ನು ಸಲ್ಲಿಸಿದರು. ಮುಖ್ಯವಾಗಿ ಸೂಕ್ತ ರಸ್ತೆ ಸಂಪರ್ಕವಿಲ್ಲದೆ ನಿತ್ಯ ನರಕಯಾತನೆ ಅನುಭವಿಸುತ್ತಿರುವುದಾಗಿ ಮತ್ತು ಊರನ್ನು ಕಂದಾಯ ಗ್ರಾಮವನ್ನಾಗಿ ಮಾಡದ ಕಾರಣ ಅಧಿಕೃತ ಸರ್ಕಾರಿ ದಾಖಲೆಗಳಲ್ಲಿ ಗ್ರಾಮದ ಹೆಸರೇ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು. ಇದರಿಂದಾಗಿ ಜನರಿಗೆ ಜಾತಿ ಪ್ರಮಾಣಪತ್ರ ಸೇರಿದಂತೆ ಸರ್ಕಾರದ ಯಾವುದೇ ಯೋಜನೆಗಳು ಅಥವಾ ಹಕ್ಕುಪತ್ರಗಳು ಸಿಗುತ್ತಿಲ್ಲ ಎಂದು ಅಧಿಕಾರಿಗಳ ಮುಂದೆ ಅಸಹಾಯಕತೆ ವ್ಯಕ್ತಪಡಿಸಿದರು.
ಸ್ಥಳೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ವೀಕ್ಷಿಸಿದ ಹಿರಿಯ ಅಧಿಕಾರಿಗಳು, ಸಮಸ್ಯೆಗಳ ಗಂಭೀರತೆಯನ್ನು ಒಪ್ಪಿಕೊಂಡರಲ್ಲದೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು. ಇನ್ನು ಮುಂದೆ ವಿಳಂಬ ಮಾಡದೆ ಶೀಘ್ರದಲ್ಲೇ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ಆದಾಗ್ಯೂ, ಜಿಲ್ಲಾಡಳಿತ ಕೇವಲ ಮಾತಿಗೆ ಸೀಮಿತವಾಗದೆ ತಕ್ಷಣವೇ ರಸ್ತೆ ಕಾಮಗಾರಿ ಆರಂಭಿಸಬೇಕು, ಇಲ್ಲದಿದ್ದರೆ ಮುಂಬರುವ ಯಾವುದೇ ಚುನಾವಣೆಯಲ್ಲೂ ನಾವು ಒಂದು ಮತವನ್ನೂ ಚಲಾಯಿಸುವುದಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಕಠಿಣ ಸಂದೇಶ ರವಾನಿಸಿದ್ದಾರೆ.
