Cyber crime shivamogga : ಶಿವಮೊಗ್ಗ: ಫೇಸ್‌ಬುಕ್‌ನಲ್ಲಿ ಬಂದ ಲೋನ್ ಜಾಹೀರಾತಿಗೆ ಮರುಳಾಗಿ ಶಿವಮೊಗ್ಗದ ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ವರದಿಯಾಗಿದ್ದು, ಈ ಸಂಬಂಧ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಂಚಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 16 ರಂದು ದೂರುದಾರರು ಫೇಸ್‌ಬುಕ್ ಖಾತೆಯನ್ನು ನೋಡುತ್ತಿದ್ದಾಗ ಅಪರಿಚಿತ ಪೈನಾನ್ಸ್ ಹೆಸರಿನಲ್ಲಿ ಲೋನ್ ನೀಡುವ ಕುರಿತಾದ ಜಾಹೀರಾತನ್ನು ಕಂಡಿದ್ದಾರೆ. ಹಣದ ಅವಶ್ಯಕತೆ ಇದ್ದುದರಿಂದ ಅವರು ಆ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದ್ದಾರೆ. ನಂತರ, ಅಪರಿಚಿತ ವ್ಯಕ್ತಿಗಳು ದೂರುದಾರರ ವಾಟ್ಸಾಪ್‌ಗೆ ಸಂದೇಶ ಕಳುಹಿಸಿ, ಜಿ.ಎಸ್.ಟಿ ಕಾಪಿ, ಸಿಬಿಲ್ ಸ್ಕೋರ್, ಬ್ಯಾಂಕ್ ಸ್ಟೇಟ್‌ಮೆಂಟ್, ಇನ್ ಕಮ್ ಟ್ಯಾಕ್ಸ್ ರಿಟರ್ನ್, ಪಾನ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಕಳುಹಿಸಲು ಸೂಚಿಸಿದ್ದಾರೆ. ಈ ಮಾಹಿತಿಯನ್ನು ಪಡೆದ ನಂತರ, ಲೋನ್ ಪ್ರಕ್ರಿಯೆಗಾಗಿ ಬ್ಯಾಂಕ್ ಆಫ್ ಬರೋಡಾದಲ್ಲಿ ಹೊಸದಾಗಿ ಖಾತೆ ತೆರೆಯುವಂತೆ ಮತ್ತು ಮತ್ತಷ್ಟು ಸಂಪರ್ಕ ಸಂಖ್ಯೆಗಳಿಗೆ ಕರೆ ಮಾಡುವಂತೆ ತಿಳಿಸಿದ್ದಾರೆ.
ಅದರಂತೆ ದೂರುದಾರರು ಶಿವಮೊಗ್ಗದ ಬ್ಯಾಂಕ್ ಆಫ್ ಬರೋಡಾ ಶಾಖೆಯೊಂದರಲ್ಲಿ ಒಂದು ಕರೆಂಟ್ ಅಕೌಂಟ್ ಅನ್ನು ತೆರೆದು, ಅದರ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಅಪರಿಚಿತರೊಂದಿಗೆ ಹಂಚಿಕೊಂಡಿದ್ದಾರೆ. ಇದರ ಜೊತೆಗೆ, ಅಪರಿಚಿತರ ಸೂಚನೆಯಂತೆ ದೂರುದಾರರು ತಮ್ಮ ಮೊಬೈಲ್‌ನಲ್ಲಿ ‘Pushbullet’ ಎಂಬ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಅವರು ನೀಡಿದ ಇಮೇಲ್ ಐಡಿಯನ್ನು ಅದಕ್ಕೆ ಸೇರಿಸಿದ್ದಾರೆ. ಲೋನ್ ಶೀಘ್ರದಲ್ಲೇ ಆಗುತ್ತದೆ ಎಂದು ವಂಚಕರು ನಂಬಿಸಿದ್ದಾರೆ.
ಆದರೆ, ಅಕ್ಟೋಬರ್ 27 ರಂದು ದೂರುದಾರರು ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಅಕ್ಟೋಬರ್ 23 ಮತ್ತು 24 ರ ನಡುವಿನ ಅವಧಿಯಲ್ಲಿ, ದೂರುದಾರರ ಗಮನಕ್ಕೆ ಬಾರದೇ ಬ್ಯಾಂಕ್ ಆಫ್ ಬರೋಡಾದ ಕರೆಂಟ್ ಖಾತೆಗೆ ವಿವಿಧ ಖಾತೆಗಳಿಂದ ಒಟ್ಟು 74,61,000 ರೂಪಾಯಿಗಳು ಜಮೆಯಾಗಿ, ನಂತರ ಕೂಡಲೇ 74,53,385 ರೂಪಾಯಿಗಳು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆ ವಂಚಿಸಿ ಮೋಸ ಮಾಡಿದ ಲಕ್ಷಾಂತರ ರೂಪಾಯಿ ವಂಚಿಸಿದ ವಂಚಕರನ್ನು ಬಂಧಿಸುವಂತೆ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
Cyber crime shivamogga
 
 

 
  
  
  
 