lokayukta raid shivamogga palike
ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ಮುಖ್ಯ ಕಚೇರಿಗೆ ಇಂದು ಮಧ್ಯಾಹ್ನದ ನಂತರ ಲೋಕಾಯುಕ್ತ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಸುಮಾರು 4:45ರ ಸುಮಾರಿಗೆ ಪಾಲಿಕೆಯ ಕಂದಾಯ ವಿಭಾಗಕ್ಕೆ ಪ್ರವೇಶಿಸಿದ ಲೋಕಾಯುಕ್ತ ಅಧಿಕಾರಿಗಳು, ಅಲ್ಲಿನ ಕಡತಗಳನ್ನು ಪರಿಶೀಲಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.ಈ ದಿಢೀರ್ ಕಾರ್ಯಾಚರಣೆಯ ಹಿಂದಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ, ಕಂದಾಯ ವಿಭಾಗದ ಎಲ್ಲಾ ಕಡತಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಕಾರ್ಯಾಚರಣೆ ನಡೆಯುವ ವೇಳೆ ಕಚೇರಿಯಲ್ಲಿ ಹಾಜರಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲದೆ, ಡೇಟಾ ಆಪರೇಟರ್‌ಗಳನ್ನೂ ಸಹ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಇದಲ್ಲದೆ, ಹೊರಗಡೆ ಹೋಗಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ತಕ್ಷಣ ಕಚೇರಿಗೆ ಹಾಜರಾಗುವಂತೆ ಲೋಕಾಯುಕ್ತರು ಸೂಚಿಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳ ದಾಳಿಯ ನಂತರ, ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಕೂಡ ಕಂದಾಯ ವಿಭಾಗಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಈ ಕಾರ್ಯಾಚರಣೆಯ ಹಿಂದಿನ ಪ್ರಮುಖ ಕಾರಣಗಳು ಮತ್ತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ. ಲೋಕಾಯುಕ್ತರ ಈ ದಿಢೀರ್ ಭೇಟಿ ಪಾಲಿಕೆಯ ಆಡಳಿತದಲ್ಲಿ ಸಂಚಲನ ಮೂಡಿಸಿದೆ.
lokayukta raid shivamogga palike
