Thirthahalli Police station : ತೀರ್ಥಹಳ್ಳಿ: ತಮ್ಮ ಅಂಗಡಿಯಲ್ಲಿ ಪಟಾಕಿ ಖರೀದಿಸದೆ ಪಕ್ಕದ ಅಂಗಡಿಯಲ್ಲಿ ಖರೀದಿಸಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ತೀರ್ಥಹಳ್ಳಿಯಲ್ಲಿ ನಡೆದಿದೆ. ಈ ಸಂಬಂಧ ಹಲ್ಲೆಗೊಳಗಾದ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತೀರ್ಥಹಳ್ಳಿ ಗ್ರಾಮವೊಂದರ ನಿವಾಸಿಯೊಬ್ಬರು ಅಕ್ಟೋಬರ್ 23 ರ ಸಂಜೆ ತೀರ್ಥಹಳ್ಳಿ ಸಾರ್ವಜನಿಕ ಕ್ರೀಡಾಂಗಣದಲ್ಲಿರುವ ಪಟಾಕಿ ಅಂಗಡಿಗೆ ಹೋಗಿ ಪಟಾಕಿ ಖರೀದಿಸಿದ್ದರು. ಇದೇ ಕ್ರೀಡಾಂಗಣದಲ್ಲಿ ದೂರುದಾರರ ಪರಿಚಯಸ್ಥರು ಸಹ ಮತ್ತೊಂದು ಪಟಾಕಿ ಅಂಗಡಿ ಹಾಕಿದ್ದರು.
ದೂರುದಾರರು ಬೇರೊಂದು ಅಂಗಡಿಯಲ್ಲಿ ಪಟಾಕಿ ತೆಗೆದುಕೊಂಡು ವಾಪಸ್ ಮನೆಗೆ ತೆರಳುತ್ತಿದ್ದಾಗ, ಪರಿಚಯಸ್ಥ ವ್ಯಕ್ತಿಗಳು ಅವರನ್ನು ಅಡ್ಡ ಹಾಕಿದ್ದಾರೆ ಎನ್ನಲಾಗಿದೆ. “ನೀನು ನನ್ನ ಅಂಗಡಿಯಲ್ಲಿ ಏಕೆ ಪಟಾಕಿ ತೆಗೆದುಕೊಂಡಿಲ್ಲ” ಎಂದು ದೂರುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಈ ಹಿನ್ನೆಲೆಯಲ್ಲಿ ಹಲ್ಲೆಗೊಳಗಾದ ವ್ಯಕ್ತಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಕೋರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

