Teachers day : ಗುರುಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ.
ಇಂದು, ಸೆಪ್ಟೆಂಬರ್ 5, ನಾವು ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ದೇಶ ಕಂಡ ಶ್ರೇಷ್ಠ ಶಿಕ್ಷಕ ಹಾಗೂ ಭಾರತದ ಮೊದಲ ಉಪರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತೇವೆ. ಈ ಹಿನ್ನೆಲೆಯಲ್ಲಿ, ನಮ್ಮ ಜೀವನದಲ್ಲಿ ಯಾವೆಲ್ಲಾ ರೀತಿಯ ಶಿಕ್ಷಕರು ಸಿಗುತ್ತಾರೆ ಎಂಬುದನ್ನು ನೋಡೋಣ.
Teachers day :ಶಿಕ್ಷಕರೆಂದರೆ ಯಾರು?
ಒಬ್ಬ ಅನಾಗರಿಕ ವ್ಯಕ್ತಿಗೆ ಉತ್ತಮ ಶಿಕ್ಷಣ ನೀಡಿ ನಾಗರಿಕನನ್ನಾಗಿ ಮಾಡುವವರನ್ನು ನಾವು ಶಿಕ್ಷಕರೆಂದು ಕರೆಯಬಹುದು. ಶಿಕ್ಷೆ ಕೊಡುವಾತನನ್ನು ಶಿಕ್ಷಕನೆಂದು ಭಾವಿಸದೆ, ಶಿಕ್ಷೆಯ ಜೊತೆಗೆ ಶಿಕ್ಷಣ ಹಾಗೂ ಶಿಸ್ತನ್ನು ಕಲಿಸುವಾತನೇ ನಿಜವಾದ ಶಿಕ್ಷಕ. ಇಂತಹ ಶಿಕ್ಷಕರು ಯಾವುದೇ ಭೇದಭಾವವಿಲ್ಲದೆ ತಾನು ಕಲಿತ ವಿದ್ಯೆಯನ್ನು ಸಮನಾಗಿ ಹಂಚುತ್ತಾರೆ. ಈ ರೀತಿಯ ಶಿಕ್ಷಕರು ನಮ್ಮ ಜೀವನದುದ್ದಕ್ಕೂ ಸಿಗುತ್ತಾರೆ.
Teachers day ಜೀವನದ ವಿವಿಧ ಹಂತಗಳಲ್ಲಿ ಸಿಗುವ ಗುರುಗಳು
ಒಳ್ಳೆಯ ಗುರುವಿನೊಂದಿಗೆ ಉತ್ತಮ ಗುರಿಯನ್ನಿಟ್ಟುಕೊಂಡರೆ ಜೀವನದಲ್ಲಿ ಯಾವುದನ್ನಾದರೂ ಸಾಧಿಸಬಹುದು. ಹುಟ್ಟಿದಾಗ ನಮಗೆ ಮೊದಲ ಗುರು ನಮ್ಮ ತಾಯಿ, ಮತ್ತು ಮನೆಯೇ ಮೊದಲ ಪಾಠಶಾಲೆ. ಆ ಸಮಯದಲ್ಲಿ, ಏನು ಮಾಡಬೇಕು ಮತ್ತು ಏನು ಮಾಡಬಾರದು, ಊಟ, ಆಟ ಎಲ್ಲವನ್ನೂ ತಾಯಿಯೇ ಹೇಳಿಕೊಡುತ್ತಾಳೆ.
ಹೀಗೆ ಬೆಳೆದು ಶಾಲೆಗೆ ಹೋದಾಗ ನಮಗೆ ಅನೇಕ ಗುರುಗಳು ಸಿಗುತ್ತಾರೆ. ಸಮಾಜದಲ್ಲಿ ಗೌರವಯುತವಾಗಿ ಬದುಕಲು ವಿದ್ಯೆ ಎಷ್ಟು ಮುಖ್ಯ ಮತ್ತು ವಿದ್ಯೆ ಕಲಿತರೆ ಸಮಾಜದಲ್ಲಿ ಸಿಗುವ ಗೌರವ ಎಂಥದ್ದು ಎಂಬುದನ್ನು ಅವರು ನಮಗೆ ಕಲಿಸುತ್ತಾರೆ. ಅವರಲ್ಲಿ ಕೆಲವರು ನಮಗೆ ಸ್ಫೂರ್ತಿಯಾಗಿ, ಜೀವನದಲ್ಲಿ ಯಶಸ್ಸು ಸಾಧಿಸಲು ಕಾರಣರಾಗುತ್ತಾರೆ. ಬಾಲ್ಯ ಮತ್ತು ಶಾಲಾ ಶಿಕ್ಷಣವು ಶಿಸ್ತು ಮತ್ತು ಜ್ಞಾನಕ್ಕೆ ಅಡಿಪಾಯ ಹಾಕಿದರೆ, ಮುಂದಿನ ಹಂತದ ಶಿಕ್ಷಣವು ಜೀವನಕ್ಕೆ ಹೆಚ್ಚು ಪ್ರಮುಖವಾಗುತ್ತದೆ.
Teachers day ಔದ್ಯೋಗಿಕ ಮತ್ತು ವೈಯಕ್ತಿಕ ಜೀವನದ ಗುರುಗಳು
ನಮ್ಮ ಔದ್ಯೋಗಿಕ ಜೀವನದಲ್ಲೂ ಅನೇಕ ಗುರುಗಳು ಸಿಗುತ್ತಾರೆ. ಇಲ್ಲಿಯೂ ಕೂಡ, ನಾವು ಬಾಲ್ಯದಲ್ಲಿ ತಾಯಿ ಕಲಿಸಿದ ಶಿಸ್ತು ಹಾಗೂ ಶಾಲೆಯಲ್ಲಿ ಶಿಕ್ಷಕರು ಕಲಿಸಿದ ವಿದ್ಯೆಯನ್ನು ಬಳಸಿಕೊಂಡು ಶ್ರಮ ಮತ್ತು ಜವಾಬ್ದಾರಿಯ ಬಗ್ಗೆ ಸ್ವತಃ ಅನುಭವಿಸುತ್ತೇವೆ. ಹೌದು, ನಮಗೆ ಉದ್ಯೋಗ ನೀಡುವವರೇ ಇಲ್ಲಿ ನಮ್ಮ ಗುರುಗಳು. ಅವರು ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡು, ನಾವು ಹೇಗೆ ಸ್ವಾವಲಂಬಿಯಾಗಿ ಬದುಕಬೇಕು ಮತ್ತು ಜವಾಬ್ದಾರಿ ಎಂದರೆ ಏನು ಎಂಬುದನ್ನು ಅರ್ಥ ಮಾಡಿಸುತ್ತಾರೆ.
ಇದಾದ ನಂತರ, ನಮ್ಮ ಜೀವನದಲ್ಲಿ ಮಡದಿ ಕೂಡ ಗುರುವಾಗಿ ಬರುತ್ತಾಳೆ. ಅವಳು ಹೆಚ್ಚಿನ ಜವಾಬ್ದಾರಿಗಳ ಬಗ್ಗೆ ತಿಳಿಸುತ್ತಾ, ಜೀವನದ ನಿಜವಾದ ಅರ್ಥ ಮತ್ತು ಕುಟುಂಬವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಮನದಟ್ಟು ಮಾಡಿಸುತ್ತಾಳೆ.
ಹೀಗೆ ನಮ್ಮ ಜೀವನದ ಪ್ರತಿ ಹಂತದಲ್ಲೂ, ಒಂದಲ್ಲ ಒಂದು ರೀತಿಯಲ್ಲಿ ಗುರುಗಳು ಸಿಗುತ್ತಾರೆ. ಹಾಗಾಗಿ ಈ ದಿನ, ನಮಗೆ ಜ್ಞಾನ ಮತ್ತು ಶಿಸ್ತು ಕಲಿಸಿದ ಎಲ್ಲ ಗುರುಗಳಿಗೂ ನಮ್ಮ ಕೃತಜ್ಞತೆಗಳನ್ನು ಸಲ್ಲಿಸೋಣ.
ವರದಿ: ಪ್ರತಾಪ್ ತೀರ್ಥಹಳ್ಳಿ
