Sigandur chowdeshwari temple : ಶಿವಮೊಗ್ಗ: ನೂತನವಾಗಿ ನಿರ್ಮಿಸಿರುವ ಸಿಗಂದೂರು ಸೇತುವೆ ಉದ್ಘಾಟನೆಯಾದ ನಂತರ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಮತ್ತು ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಭಾನುವಾರ ರಜಾದಿನವಾಗಿದ್ದರಿಂದ ಸೇತುವೆ ಮತ್ತು ದೇವಸ್ಥಾನದ ಆಸುಪಾಸಿನಲ್ಲಿ ಸಂಚಾರ ದಟ್ಟಣೆ ಉಂಟಾಗಿ, ವಾಹನಗಳು ಸಾಲುಗಟ್ಟಿ ನಿಂತಿದ್ದವು.
ದೇವಿಯ ದರ್ಶನಕ್ಕಾಗಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು, ನೂತನ ಸೇತುವೆಯನ್ನು ಕಣ್ತುಂಬಿಕೊಂಡು ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ದೇವಸ್ಥಾನದ ಆವರಣದಲ್ಲಿ ವಾಹನ ನಿಲುಗಡೆಗೆ ಜಾಗವಿಲ್ಲದೆ, ಪಾರ್ಕಿಂಗ್ ಸಮಸ್ಯೆ ತಲೆದೋರಿತ್ತು. ದೇವಸ್ಥಾನಕ್ಕೆ ನೇರವಾಗಿ ಬರುವ ಭಕ್ತರ ಸಂಖ್ಯೆ ಒಂದು ಕಡೆಯಾದರೆ, ಸೇತುವೆ ವೀಕ್ಷಿಸಲು ಬರುವ ಪ್ರವಾಸಿಗರಿಂದಾಗಿಯೂ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ.
Sigandur chowdeshwari temple ದರ್ಶನ ಸಮಯ ವಿಸ್ತರಣೆ ಮತ್ತು ಬಸ್ ಸೇವೆ
ಇಷ್ಟು ವರ್ಷಗಳ ಕಾಲ ಸಂಜೆ 7:30ರವರೆಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶವಿತ್ತು. ರಾತ್ರಿ ವೇಳೆ ಲಾಂಚ್ ಸೇವೆ ಇರದ ಕಾರಣ ಭಕ್ತರಿಗೆ ರಾತ್ರಿ ದರ್ಶನ ಭಾಗ್ಯವಿರಲಿಲ್ಲ. ಆದರೆ, ಸೇತುವೆ ನಿರ್ಮಾಣದ ನಂತರ, ದೇವಸ್ಥಾನ ಆಡಳಿತ ಮಂಡಳಿಯು ಚೌಡೇಶ್ವರಿ ದರ್ಶನ ಸಮಯವನ್ನು ರಾತ್ರಿ 9 ಗಂಟೆಯವರೆಗೆ ವಿಸ್ತರಿಸಿದೆ. ಇದರಿಂದ ದೂರದ ಊರುಗಳಿಂದ ಬರುವ ಭಕ್ತರಿಗೆ ಅನುಕೂಲವಾಗಿದೆ.

ಇದಲ್ಲದೆ, ಇಷ್ಟು ವರ್ಷ ಸಿಗಂದೂರಿಗೆ ನೇರ ಬಸ್ ವ್ಯವಸ್ಥೆ ಇರಲಿಲ್ಲ. ಈಗ ಸೇತುವೆಯಾದ ನಂತರ ಸಾಗರದಿಂದ ಪ್ರತಿ ಅರ್ಧಗಂಟೆಗೊಮ್ಮೆ ಸಿಗಂದೂರಿಗೆ ಖಾಸಗಿ ಮತ್ತು ಸರ್ಕಾರಿ ಬಸ್ ಸೇವೆಗಳನ್ನು ಕಲ್ಪಿಸಲಾಗಿದೆ. ಇದರಿಂದ ಭಕ್ತರು ಈಗ ಅಲ್ಪ ಸಮಯದಲ್ಲಿ ನೇರವಾಗಿ ಸಿಗಂದೂರನ್ನು ತಲುಪಬಹುದಾಗಿದೆ. ಬಸ್ ಸೇವೆಯನ್ನು ಬಳಸಿಕೊಳ್ಳುವುದರಿಂದ ಹಣದ ಉಳಿತಾಯವೂ ಆಗಲಿದೆ. ಈ ಬೆಳವಣಿಗೆಗಳು ಸಿಗಂದೂರು ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿ ಮತ್ತಷ್ಟು ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿವೆ.
