jp story ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿನ ಸಾಕಾನೆಗಳ ಜೀವಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಈಗ ಗಂಭೀರವಾಗಿ ಉದ್ಭವಿಸಿದೆ. ಆರೋಗ್ಯವಂತ ಮತ್ತು ಸದೃಢವಾಗಿದ್ದ ಸಾಕಾನೆಗಳು ಈಗ ರೋಗಕ್ಕೆ ತುತ್ತಾಗಿ, ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದೆ ಸಾವಿನ ದವಡೆಗೆ ಸಿಲುಕುವಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಸೂಕ್ತ ವೈದ್ಯಕೀಯ ಚಿಕಿತ್ಸೆಯ ಕೊರತೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೌದು, ಸಕ್ರೆಬೈಲಿನಲ್ಲಿರುವ ಶೆಟ್ಟಿಹಳ್ಳಿ ಕ್ರಾಲ್‌ನಲ್ಲಿನ ಮೂರು ಸಾಕಾನೆಗಳ ಆರೋಗ್ಯದಲ್ಲಿ ಗಣನೀಯ ಏರುಪೇರಾಗಿದ್ದು, ಅವು ಬಳಲುತ್ತಿವೆ.
Jp story ಕಾಡಾನೆ ಕಾರ್ಯಾಚರಣೆಯ ನಾಯಕ ಬಾಲಣ್ಣನ ಕಿವಿಗೆ ಗಾಯ
ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದ ‘ಕ್ಯಾಪ್ಟನ್’ ಬಾಲಣ್ಣ ಎಂಬ ಆನೆಯ ಪರಿಸ್ಥಿತಿ ಮುಂದೊಂದು ದಿನ ಹೀಗಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸದೃಢ ದೇಹವನ್ನು ಹೊಂದಿದ್ದ ಬಾಲಣ್ಣ ಆನೆ ಕಿವಿಯಾಡಿಸುತ್ತಿದ್ದರೆ, ಪಕ್ಕದಲ್ಲಿ ನಿಂತಿದ್ದವರಿಗೆ ಹವಾನಿಯಂತ್ರಕ (AC) ಗಾಳಿಯಂತೆ ಅನುಭವವಾಗುತ್ತಿತ್ತು. ತನ್ನ ಸುಂದರವಾದ ಕಿವಿ ಮತ್ತು ದಂತದಿಂದ ಎಲ್ಲರನ್ನು ಆಕರ್ಷಿಸಿದ್ದ ಬಾಲಣ್ಣನ ಬಲ ಕಿವಿ ಈಗ ಗ್ಯಾಂಗ್ರೀನ್‌ನಂತೆ ಭಾಸವಾಗುವ ಮಟ್ಟಿಗೆ ಕಪ್ಪಾಗಿ ಹೋಗಿದೆ. ದಿನಗಳು ಕಳೆದಂತೆ ಗಾಯವು ವಾಸಿಯಾಗುವ ಬದಲು ಕೊಳೆಯುತ್ತಿದೆಯೇ ವಿನಃ ಮಾಗುತ್ತಿಲ್ಲ. ದಸರಾ ಉತ್ಸವದಿಂದ ಶಿಬಿರಕ್ಕೆ ಮರಳಿದಾಗಿನಿಂದ ಕಳೆದ ಏಳು ದಿನಗಳಿಂದ ಬಾಲಣ್ಣ ಆನೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಮೊದಲಿಗೆ, ನಿವೃತ್ತ ಪಶುವೈದ್ಯರಾದ ಡಾ. ಕಾಲಪ್ಪ ಅವರು ಎರಡು ದಿನಗಳ ಕಾಲ ಚಿಕಿತ್ಸೆ ನೀಡಿದ್ದರು. ಆದರೆ, ಆ ಚಿಕಿತ್ಸೆ ಯಶಸ್ವಿಯಾಗದೆ ಆನೆಯ ದೇಹದಲ್ಲಿ ಪ್ರತಿಕ್ರಿಯೆ (ರಿಯಾಕ್ಷನ್) ಉಂಟಾಯಿತು. ನಂತರ, ಹುಲಿ ಮತ್ತು ಸಿಂಹ ಸಫಾರಿಯ ಡಾ. ಮುರಳಿ ಅವರನ್ನು ಕರೆಸಲಾಯಿತು. ಆದರೆ, ಅವರು ನೀಡಿದ ಚಿಕಿತ್ಸೆಯ ಔಷಧದ ಪ್ರತಿಕ್ರಿಯೆಯಿಂದಾಗಿ ಬಾಲಣ್ಣಗೆ ತೀವ್ರವಾದ ಕಿವಿಯ ಸೋಂಕು ತಗುಲಿತು. ಇದು ನೋವಿನ ಊತ, ದ್ರವ ಮತ್ತು ಕೀವು ತುಂಬಿದ ಸ್ಥಿತಿಗೆ ಕಾರಣವಾಯಿತು. ಈ ಸೋಂಕು ಹಣೆಯ ಮತ್ತು ತಲೆಯ ಭಾಗಕ್ಕೆ ಸಂಪೂರ್ಣವಾಗಿ ಹರಡಿ, ಇನ್ನೊಂದು ಕಿವಿಯನ್ನೂ ಬಾಧಿಸಿದೆ. ವೈದ್ಯರು ಕಿವಿಯ ರಕ್ತನಾಳಗಳಿಗೆ ಸರಿಯಾದ ಔಷಧಗಳೊಂದಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿಲ್ಲ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತದೆಬಾಲಣ್ಣ ಆನೆಯ ಸ್ಥಿತಿ ಗಂಭೀರವಾದ ನಂತರ, ಡಿ.ಸಿ.ಎಫ್. (DCF) ಪ್ರಸನ್ನ ಪಾಟೇಗಾರ್ ಅವರು ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರನ್ನು ಚಿಕಿತ್ಸೆಗಾಗಿ ಕರೆಸಿದರು. ಅಲ್ಲಿನ ವೈದ್ಯರು ಬಾಲಣ್ಣ ಆನೆಗೆ ಚಿಕಿತ್ಸೆ ನೀಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಡಾ. ಕಾಲಪ್ಪ ಅವರು ಸಹ ಚಿಕಿತ್ಸೆ ನೀಡಲು ಮತ್ತು ಸೇವೆ ಸಲ್ಲಿಸಲು ಸಿದ್ಧರಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಲಯನ್ ಸಫಾರಿಯ ಡಾಕ್ಟರ್ ಮುರಳಿ ಅವರಿಗೆ ಆನೆಗಳ ನಿರ್ವಹಣೆ ಮತ್ತು ಚಿಕಿತ್ಸೆಯಲ್ಲಿ ಸಾಕಷ್ಟು ಅನುಭವ ಇಲ್ಲ.
ಶಿಬಿರದಲ್ಲಿ ಈಗಾಗಲೇ ವಿಕ್ರಾಂತ್ ಮತ್ತು ಅಡಕಬಡ್ಕ ಎಂಬ ಕಾಡಿನಿಂದ ಸೆರೆಹಿಡಿದ ಆನೆಗಳು ಅನಾರೋಗ್ಯದಿಂದ ಬಳಲುತ್ತಿದ್ದು, ಬಾಲಣ್ಣ ಶಿಬಿರದಲ್ಲಿ ಅನಾರೋಗ್ಯಕ್ಕೆ ತುತ್ತಾದ ಮೂರನೇ ಆನೆಯಾಗಿದೆ. ಈಗ ಸದೃಢವಾಗಿದ್ದ ಬಾಲಣ್ಣ ಆನೆ ತೀವ್ರವಾಗಿ ಬಳಲುತ್ತಿದ್ದು, ಒಂದು ಕಿವಿಯ ಸಂಪೂರ್ಣ ಭಾಗವನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಹಾಗಾದಲ್ಲಿ, ಆನೆಗೆ ತನ್ನ ದೇಹದ ಉಷ್ಣತೆಯನ್ನು ನಿಯಂತ್ರಿಸಲು (ಕಿವಿಯನ್ನು ಬಡಿಯುವುದರ ಮೂಲಕ ದೇಹವನ್ನು ತಂಪು ಮಾಡಿಕೊಳ್ಳಲು ಸಾಧ್ಯವಾಗದೆ) ಸಾಧ್ಯವಾಗುವುದಿಲ್ಲ. ಹೀಗಾಗಿ ಬಾಲಣ್ಣನ ಸ್ಥಿತಿ ಗಂಭೀರವಾಗಿದೆ.
Jp story ಪಳಗಿಸುವ ಭರದಲ್ಲಿ ವಿಕ್ರಾಂತ್ ಆನೆಗೆ ಹಿಂಸೆ ನೀಡಲಾಯಿತೇ?
ಮಾರ್ಚ್ 18 ರಂದು ಸಕಲೇಶಪುರದಲ್ಲಿ ಸೆರೆಸಿಕ್ಕ ವಿಕ್ರಾಂತ್ ಆನೆಯನ್ನು ಸಕ್ರೆಬೈಲು ಬಿಡಾರಕ್ಕೆ ಕರೆತಂದಾಗ ಅದು ಸಂಪೂರ್ಣ ಆರೋಗ್ಯವಾಗಿ ಮತ್ತು ಸದೃಢವಾಗಿತ್ತು. ಆದರೆ, ಕ್ರಾಲ್‌ಗೆ ಹಾಕಿದ ನಂತರ ವಿಕ್ರಾಂತ್‌ನ ಮುಂಭಾಗದ ಕಾಲಿನಲ್ಲಿ ಆಳವಾದ ಗಾಯವಾಗಿದೆ. ಕ್ರಾಲ್‌ನಿಂದ ಹೊರಗೆ ಬಂದಿರುವ ವಿಕ್ರಾಂತ್ ಜಿಗಿಯುತ್ತಾ ಸಾಗುತ್ತಿರುವುದನ್ನು ಗಮನಿಸಿದರೆ, ಅದಕ್ಕೆ ನೆಕ್ರೋಸಿಸ್ (ಕಣಕಟ್ಟುವಿಕೆ) ಅಥವಾ ಗ್ಯಾಂಗ್ರೀನ್ ಆದಂತೆ ಭಾಸವಾಗುತ್ತದೆ. ಇದನ್ನು ವನ್ಯಜೀವಿ ವೈದ್ಯರು ದೃಢೀಕರಿಸಬೇಕಿದೆ. ಸಾಮಾನ್ಯವಾಗಿ ಆನೆಗೆ ಕಾಲಿಗೆ ಗಾಯವಾದರೂ ನೆಲಕ್ಕೆ ಊರಿ ಸಾಗುತ್ತದೆ. ಆದರೆ ವಿಕ್ರಾಂತ್‌ನ ಈ ಸ್ಥಿತಿ ಕಂಡು ಅರಣ್ಯಾಧಿಕಾರಿಗಳು ಕಂಗಾಲಾಗಿದ್ದಾರೆ. ಕಾಡಾನೆಯನ್ನು ಪಳಗಿಸಿ ತರಬೇತಿ ನೀಡುವಾಗ ಹಿಂಸೆಯನ್ನು ಸಂಪೂರ್ಣವಾಗಿ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ವಿಕ್ರಾಂತ್‌ನ ಮುಂಗಾಲಿಗೆ ಆಗಿರುವ ಗಾಯವನ್ನು ನೋಡಿದಾಗ, ಈ ಪರಿಸರದಲ್ಲಿ ಗುಟ್ಟಾಗಿ ಏನೋ ನಡೆದಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಅಡಕಬಡ್ಕ ಆನೆಯ ಬದುಕು ದುಸ್ತರ
ಇತ್ತೀಚೆಗೆ ಎನ್.ಆರ್. ಪುರ ತಾಲೂಕಿನಲ್ಲಿ ಸೆರೆ ಹಿಡಿದ ಅಡಕಬಡ್ಕ ಎಂಬ ಪುಂಡಾನೆಯನ್ನು ಸಕ್ರೆಬೈಲು ಕ್ರಾಲ್‌ಗೆ ತಂದು ಪಳಗಿಸುವಾಗಲೂ ಅದರ ಮುಂಗಾಲಿಗೆ ಗಾಯಗಳಾಗಿವೆ. ಆನೆಯ ಕಾಲುಗಳಿಗೆ ಗಾಯವಾಗಲು ಯಾರು ಕಾರಣರು ಎಂಬ ಪ್ರಶ್ನೆ ಎದ್ದಿದೆ. ಅಡಕಬಡ್ಕ ಆನೆಯನ್ನು ನೋಡಿಕೊಳ್ಳುವ ಮಾವುತನಿಂದ ಆದ ಪ್ರಮಾದದಿಂದ ಕಾಡಾನೆ ಗಾಯಗೊಂಡಂತಿದೆ.
ಸಾಗರ್ ಆನೆಯ ಆರೋಗ್ಯದಲ್ಲಿ ವ್ಯತ್ಯಯ
ಶಿವಮೊಗ್ಗದ ಪ್ರತಿ ವರ್ಷದ ದಸರಾ ಉತ್ಸವದಲ್ಲಿ ಅಂಬಾರಿ ಹೊರುವ ಕ್ಯಾಪ್ಟನ್ ಸಾಗರ್ ಆನೆಯ ಆರೋಗ್ಯದಲ್ಲಿಯೂ ಏರುಪೇರಾಗಿದೆ. ಇಂಜೆಕ್ಷನ್ ರಿಯಾಕ್ಷನ್‌ನಿಂದ ಅದರ ಹಿಂಬದಿಯ ಬಲಗಾಲು ಗಾಯಗೊಂಡಿದೆ. ಬಲಗಾಲಿನ ಗಾಯದಲ್ಲಿ ಕೀವು ತುಂಬಿಕೊಂಡಿದ್ದು, ಸಾಗರ್ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ವರದಿಯಾಗಿದೆ.
Jp story ಧನುಷ್ ಆನೆ ಮರಿ ಕಣ್ಣು ಕುರುಡು
ಇತ್ತೀಚೆಗೆ ಸಕ್ರೆಬೈಲು ಬಿಡಾರದಲ್ಲಿಯೇ ಜನಿಸಿದ ಸುಮಾರು 10 ವರ್ಷ ಪ್ರಾಯದ ಧನುಷ್ ಎಂಬ ಮರಿಯಾನೆ ಬಾಲ್ಯದಲ್ಲಿಯೇ ಕಣ್ಣು ಕಳೆದುಕೊಳ್ಳುವಂತಾಗಿದೆ. ಇದಕ್ಕೆ ಪ್ರಮುಖ ಕಾರಣ, ಸೂಕ್ತ ಚಿಕಿತ್ಸೆಯು ಸಕಾಲಕ್ಕೆ ಲಭಿಸದೇ ಇರುವುದು. ಧನುಷ್‌ನ ಕಣ್ಣಿನಲ್ಲಿ ಸಮಸ್ಯೆ ಕಾಣಿಸಿಕೊಂಡಾಗಲೇ ನುರಿತ ವೈದ್ಯರಿಂದ ಸೂಕ್ತ ಚಿಕಿತ್ಸೆ ಸಿಕ್ಕಿದ್ದರೆ, ಧನುಷ್‌ನ ಬದುಕಿನಲ್ಲಿ ಕತ್ತಲು ಕವಿಯುತ್ತಿರಲಿಲ್ಲ.
ಮಾವುತ-ಕಾವಾಡಿಗಳಿಗೆ ನೋಟಿಸ್: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ
ಸಕ್ರೆಬೈಲಿನ ಕಾಡಿನ ಪರಿಸರದಲ್ಲಿ ಆನೆಗಳ ಆರೋಗ್ಯದಲ್ಲಿ ಆಗುತ್ತಿರುವ ಏರುಪೇರುಗಳಿಗೆ ನಿಜವಾಗಿ ಕಾರಣರಾದವರು ತೆರೆಮರೆಯಲ್ಲಿ ಉಳಿಯುತ್ತಿದ್ದಾರೆ. ಆನೆಗಳ ಲಾಲನೆ-ಪಾಲನೆ ಮಾಡುತ್ತಿರುವ ಸಿಬ್ಬಂದಿಗಳಿಗೆ ಮಾತ್ರ ಈಗ ನೋಟಿಸ್ ಜಾರಿ ಮಾಡಲಾಗಿದೆ. ಇದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತೆ ಆಗಿದೆ. ಆನೆಗಳ ದೈಹಿಕ ಪರಿಸ್ಥಿತಿಯನ್ನು ಪ್ರತಿದಿನವೂ ಅವಲೋಕಿಸುವುದು ಅರಣ್ಯಾಧಿಕಾರಿಗಳ ಆದ್ಯ ಕರ್ತವ್ಯ ಎಂಬುದನ್ನು ಮರೆತಂತಿದೆ.
ನುರಿತ ವೈದ್ಯರು ಬಿಡಾರಕ್ಕೆ ಬೇಕಿಲ್ಲವೇ?
ಆನೆಗಳ ಮೇಲೆ ಕರ್ತವ್ಯ ನಿರ್ವಹಿಸಿದ ಸಾಕಷ್ಟು ಅನುಭವ ಹೊಂದಿದ್ದ ಡಾಕ್ಟರ್ ವಿನಯ್ ಅವರನ್ನು ಸ್ಥಳಾಂತರಗೊಳಿಸಿ, ಬೇರೆಡೆ ವರ್ಗಾಯಿಸಲಾಗಿದೆ. ಸದ್ಯಕ್ಕೆ ಆನೆಗಳ ಚಿಕಿತ್ಸೆಗೆ ಮಲೆನಾಡಿನಲ್ಲಿ ನುರಿತ ವನ್ಯಜೀವಿ ವೈದ್ಯರಿದ್ದರೆ ಅದು ವಿನಯ್ ಮಾತ್ರ ಎಂಬುದು ನಿಸ್ಸಂದೇಹದ ವಿಚಾರ. ಆನೆ ಶಿಬಿರದಲ್ಲಿ ಡಾ. ವಿನಯ್ ಅವರ 10 ವರ್ಷಗಳ ಸೇವಾವಧಿಯಲ್ಲಿ ಯಾವುದೇ ಔಷಧಿಯ ಪ್ರತಿಕ್ರಿಯೆಗಳು ಅಥವಾ ತಪ್ಪು ರೀತಿಯ ಚಿಕಿತ್ಸೆಯನ್ನು ನೀಡಿದ ಉದಾಹರಣೆ ಇಲ್ಲ. ಇಷ್ಟೆಲ್ಲಾ ಸಕಾರಾತ್ಮಕ ಅಂಶಗಳ ನಡುವೆಯೂ, ವ್ಯವಸ್ಥೆಯೊಳಗಿನ ಲೋಪದಿಂದಾಗಿ ತನ್ನದಲ್ಲದ ತಪ್ಪಿಗೆ ಸಾಕಷ್ಟು ನಿಂದನೆ ಮತ್ತು ಅವಮಾನಕ್ಕೊಳಗಾದ ಡಾ. ವಿನಯ್ ಅವರು ಸದ್ಯಕ್ಕೆ ಬಿಡಾರದ ಕಡೆ ಮುಖ ಮಾಡಲು ಸುತಾರಾಂ ಇಷ್ಟವಿಲ್ಲ. ಹಾಲಿ ಅವರು ಶಿವಮೊಗ್ಗದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಮುಖ್ಯ ಕಚೇರಿಯಲ್ಲಿ ಸಹಾಯಕ ನಿರ್ದೇಶಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವನ್ಯಜೀವಿ ವೈದ್ಯರ ನೇರ ನೇಮಕಾತಿ ಆಗಲಿ
ಸದ್ಯಕ್ಕೆ ಅರಣ್ಯ ಇಲಾಖೆಯಲ್ಲಿ ವನ್ಯಜೀವಿ ವೈದ್ಯರನ್ನು ಇಲಾಖೆಯಿಂದ ನೇರವಾಗಿ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ವೈದ್ಯರನ್ನು ಪಶು ಸಂಗೋಪನಾ ಇಲಾಖೆಯಿಂದ ನಿಯೋಜಿಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ವೈದ್ಯರು ಅರಣ್ಯಾಧಿಕಾರಿಗಳ ಕೈಕೆಳಗೆ ಕೆಲಸ ಮಾಡಬೇಕಾಗುತ್ತದೆ. ಮಾತೃ ಇಲಾಖೆಯಲ್ಲಿ ಗೆಜೆಟೆಡ್ ಆಫೀಸರ್ ಸ್ಥಾನ ಹೊಂದಿರುವ ವೈದ್ಯರು, ಅರಣ್ಯ ಇಲಾಖೆಗೆ ನಿಯೋಜನೆಗೊಂಡಾಗ ಆರ್‌ಎಫ್‌ಒ (RFO) ಮಟ್ಟದ ಕೆಳಗೆ ಕರ್ತವ್ಯ ನಿರ್ವಹಿಸಬೇಕಾದ ಸಂಕಷ್ಟದ ಪರಿಸ್ಥಿತಿ ಎದುರಾಗುತ್ತದೆ. ಅದೇ ನೇರ ನೇಮಕಾತಿಯಾದಲ್ಲಿ ವೈದ್ಯರಿಗೆ ಸಿಗಬೇಕಾದ ಅಧಿಕಾರಸ್ಥ ಸವಲತ್ತುಗಳು ಮುಕ್ತವಾಗಿ ದೊರೆಯುತ್ತವೆ. ಇದು ಜಾರಿಯಾದರೆ ಮಾತ್ರ ಅರಣ್ಯ ಇಲಾಖೆಯಲ್ಲಿ ಮುಕ್ತವಾಗಿ ಕೆಲಸ ಮಾಡಲು ಪಶುವೈದ್ಯರು ಇಚ್ಛಿಸುತ್ತಾರೆ. ನಿಯೋಜನೆ ಮೇಲೆ ಕರ್ತವ್ಯಕ್ಕೆ ಬರುವವರ ಸಂಖ್ಯೆ ವಿರಳಾತಿ ವಿರಳವಾಗಿದೆ. ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ವನ್ಯಜೀವಿಗಳ ಉಳಿವಿಗಾದರೂ, ಇಲಾಖೆಯಲ್ಲಿ ವನ್ಯಜೀವಿ ವೈದ್ಯರನ್ನು ನೇರ ನೇಮಕಾತಿ ಮಾಡಿಕೊಳ್ಳುವ ತುರ್ತು ಅಗತ್ಯವಿದೆ.

