D,S Arun ಶಿವಮೊಗ್ಗ: ಸಾರ್ವಜನಿಕ ಸ್ಥಳಗಳಲ್ಲಿ ಆಜಾನ್ ಕೂಗುವಾಗ ಸರ್ಕಾರದ ಒಪ್ಪಿಗೆ ಮತ್ತು ನಿಯಮಗಳನ್ನು ಪಾಲಿಸುತ್ತಿಲ್ಲ. ಈ ಕುರಿತು ಮುಂದಿನ ದಿನಗಳಲ್ಲಿ ಮಾತನಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದ್ದಾರೆ.
ಇಂದು ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಸರ್ಕಾರಿ ಪ್ರದೇಶಗಳಲ್ಲಿ ಕಾರ್ಯಕ್ರಮ ನಡೆಸಲು ಸರ್ಕಾರದ ಒಪ್ಪಿಗೆ ಅಗತ್ಯ ಎಂದು ಹೇಳುತ್ತಿದೆ. ಆದರೆ, ಮುಸಲ್ಮಾನರು ಪ್ರತಿನಿತ್ಯ ಆಜಾನ್ ಕೂಗುತ್ತಿದ್ದಾರೆ. ಆಜಾನ್ ಕೂಗುವಾಗ ಅದರ ಶಬ್ದವು ಇಂತಿಷ್ಟು ಡೆಸಿಬಲ್ ಮೀರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಆ ನಿಯಮಗಳನ್ನು ಅವರು ಪಾಲಿಸುತ್ತಿಲ್ಲ. ಇದರಿಂದಾಗಿ ವಯಸ್ಸಾದವರು ಹಾಗೂ ಮಕ್ಕಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಈ ವಿಚಾರವಾಗಿ ನಾವು ಅನೇಕ ಬಾರಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ದೂರು ನೀಡಿದ್ದೇವೆ. ಆದರೆ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಶಿವಮೊಗ್ಗದಲ್ಲಿ 35 ಮಸೀದಿಗಳಿದ್ದು, ಇನ್ನು ಮುಂದೆ ನಾವೇ ಹೋಗಿ ಅವರ ಬಳಿ ಆಜಾನ್ ಶಬ್ದವನ್ನು ಕಡಿಮೆ ಮಾಡಿ ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಮಾತನಾಡುತ್ತೇವೆ ಎಂದು ಡಿ.ಎಸ್. ಅರುಣ್ ತಿಳಿಸಿದರು.
DS Arun ಡಿ.ಕೆ. ಶಿವಕುಮಾರ್ ಸಿಎಂ ಆಗಲು ಸಾಧ್ಯವಿಲ್ಲ
ನವೆಂಬರ್ ಕ್ರಾಂತಿ ವಿಚಾರವಾಗಿ ಮಾತನಾಡಿದ ಡಿ.ಎಸ್. ಅರುಣ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಇದುವರೆಗೂ ಎಲ್ಲಾ ಕ್ರಾಂತಿಗಳು ಕಾಂಗ್ರೆಸ್‌ನಲ್ಲಿಯೇ ನಡೆದಿದೆ ಎಂದರು.
ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಈಗಾಗಲೇ ಹೊಸ ವಿಚಾರವನ್ನು ಹೇಳಿದ್ದಾರೆ. ಅವರು ಸುಖ ಸುಮ್ಮನೆ ಈ ರೀತಿ ಹೇಳಿಕೆ ನೀಡಲು ಸಾಧ್ಯವಿಲ್ಲ. ಅವರ ಮನೆಯಲ್ಲಿ ಏನಾದರೂ ಚರ್ಚೆಯಾದಾಗ ಮಾತ್ರ ಯತೀಂದ್ರ ಈ ರೀತಿ ಹೇಳಲು ಸಾಧ್ಯ. ಡಿ.ಕೆ. ಶಿವಕುಮಾರ್ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಆಗಲ್ಲ. 10 ಜನ ಎಂ.ಎಲ್.ಎ. ಅವರ ಪರವಾಗಿದ್ದರೆ ಇಂದು ಅವರು ಸಿಎಂ ಆಗುತ್ತಿದ್ದರು. ಸುಮ್ಮನೆ ‘ಎಂ.ಎಲ್.ಎ ಗಳು ನನ್ನ ಪರವಾಗಿದ್ದಾರೆ’ ಎಂದು ಹೇಳುತ್ತಿದ್ದಾರೆ. ಅವರು ಖಂಡಿತವಾಗಿಯೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಎಂ.ಎಲ್.ಎ. ಮತ್ತು ಎಂ.ಎಲ್.ಸಿ ಗಳೇ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ ಎಂದು ಹೇಳುತ್ತಾರೆ. ಅದನ್ನು ಡೈವರ್ಟ್ ಮಾಡಲು ಅನಾವಶ್ಯಕ ವಿಚಾರಗಳ ಬಗ್ಗೆ ಕಾಂಗ್ರೆಸಿಗರು ಮಾತನಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

