Areca nut theft : ಶಿವಮೊಗ್ಗ: ಪ್ರಸ್ತುತ ಮಾರುಕಟ್ಟೆಯಲ್ಲಿ ಅಡಿಕೆಗೆ ಭಾರೀ ಬೆಲೆ ಇರುವ ಹಿನ್ನೆಲೆಯಲ್ಲಿ ಕಳ್ಳರ ಕಣ್ಣು ಅಡಿಕೆ ತೋಟಗಳತ್ತ ಬಿದ್ದಿದೆ. ಶಿವಮೊಗ್ಗ ತಾಲೂಕಿನ ಹಾರೋಬೆನಹಳ್ಳಿ ಗ್ರಾಮದಲ್ಲಿ ರಾತ್ರೋರಾತ್ರಿ ಅಡಿಕೆ ತೋಟಕ್ಕೆ ನುಗ್ಗಿದ ಕಳ್ಳರು, ಮರದಲ್ಲಿದ್ದ ಸಾವಿರಾರು ರೂಪಾಯಿ ಮೌಲ್ಯದ ಹಸಿ ಅಡಿಕೆ ಗೊನೆಗಳನ್ನು ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ.
ಹಾರೋಬೆನಹಳ್ಳಿಯ ನಿವಾಸಿಯೊಬ್ಬರಿಗೆ ಸೇರಿದ ಒಂದು ಎಕರೆ ಅಡಿಕೆ ತೋಟದಲ್ಲಿ ಈ ಕಳ್ಳತನ ನಡೆದಿದೆ. ದಿನಾಂಕ ಅಕ್ಟೋಬರ್ 22 ರ ರಾತ್ರಿ ವೇಳೆ ಯಾರೋ ಅಪರಿಚಿತ ಕಳ್ಳರು ತೋಟಕ್ಕೆ ನುಗ್ಗಿ, ಮರಗಳಲ್ಲಿದ್ದ ಹಸಿ ಅಡಿಕೆ ಗೊನೆಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಬೆಳಿಗ್ಗೆ ತೋಟದ ಮಾಲೀಕರು ತೋಟಕ್ಕೆ ಹೋಗಿ ನೋಡಿದಾಗ, ತೋಟದ ಹಾದಿಯಲ್ಲಿ ಅಡಿಕೆ ಕಾಯಿಗಳು ಉದುರಿರುವುದು ಕಂಡುಬಂದಿದೆ. ಇದರಿಂದ ಗಾಬರಿಗೊಂಡ ಅವರು, ಉದುರಿದ ಅಡಿಕೆಯನ್ನು ಹಿಂಬಾಲಿಸುತ್ತಾ ಹೋಗಿದ್ದಾರೆ. ಆಗ ದಾರಿಯಲ್ಲಿ ಪರಿಚಯಸ್ಥರೊಬ್ಬರ ಮನೆಯ ಬಳಿ ಅಡಿಕೆ ಪತ್ತೆಯಾಗಿದೆ.
ತೋಟದ ಮಾಲೀಕರು ಪರಿಚಯಸ್ಥರ ಮನೆಯಲ್ಲಿ ನೋಡಿದಾಗ, ಅವರು ಕಳ್ಳತನವಾದ ಅಡಿಕೆಯನ್ನು ಸುಲಿಯುತ್ತಿರುವುದು ಕಂಡುಬಂದಿದೆ. ವಿಚಾರಿಸಿದಾಗ, ಯಾರೋ ಮೂರು ಜನ ಯುವಕರು ನಮಗೆ ಈ ಅಡಿಕೆಯನ್ನು ತಂದುಕೊಟ್ಟಿದ್ದಾರೆ ಎಂದು ಪರಿಚಯಸ್ಥರು ತಿಳಿಸಿದ್ದಾರೆ ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆಯಲ್ಲಿ, ತಮ್ಮ ತೋಟದಿಂದ ಅಡಿಕೆ ಕಳ್ಳತನ ಮಾಡಿದ ಅಪರಿಚಿತ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತೋಟದ ಮಾಲೀಕರು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

