SHIVAMOGGA| MALENADUTODAY NEWS | ಮಲೆನಾಡು ಟುಡೆ Mar 5, 2025
ಶಿವಮೊಗ್ಗದ ವಿವಿಧ ಸುದ್ದಿಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಮಲೆನಾಡು ಟುಡೆಯ ಇವತ್ತಿನ ಚಟಪಟ್ ಸುದ್ದಿ ಕಾಲಂ ವಿವರ ಹೀಗಿದೆ.
ಸುದ್ದಿ 1 : ಕೋಳಿಜ್ವರಕ್ಕೂ ಮೊಟ್ಟೆಗೂ ಸಂಬಂಧ ಇಲ್ಲ
ಕೋಳಿ ಜ್ವರಕ್ಕೂ ಶಾಲೆಗಳಲ್ಲಿ ವಿತರಿಸುತ್ತಿರುವ ಮೊಟ್ಟೆಗೂ ಸಂಬಂಧ ಇಲ್ಲ. ಮೊದಲಿಂದಲೂ ಮೊಟ್ಟೆ ಹಂಚಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆಯವರ ಜತೆ ಚರ್ಚೆ ಮಾಡಿ ನಿರ್ಧರಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಅವರು ಕನ್ನಡ ಭಾಷೆಯ ಕುರಿತಂತೆ ಕನ್ನಡಕ್ಕೆ ಆಧ್ಯತೆ ನೀಡಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಸುದ್ದಿ 2 : ಚಂದ್ರಗುತ್ತಿಯಲ್ಲಿ ವಿಶೇಷ ಬಾವಿ ಪತ್ತೆ
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಚಂದ್ರಗುತ್ತಿ ದೇವಾಲಯದ ಕೋಟೆಯಲ್ಲಿ ಇಂಡೋ ಇಸ್ಲಾಮಿಕ್ ಶೈಲಿಯ ದ್ವಾರವಿರುವ ಮುಸುಕಿನ ಬಾವಿಯೊಂದು ಇದೀಗ ನಾಗರಿಕರ ಕಣ್ಣಿಗೆ ಬಿದ್ದಿದೆ. ನಿಗೂಢವಾಗಿದ್ದ ಬಾವಿಯನ್ನು ಇಲ್ಲಿನ ಯುವಕರ ತಂಡ ಪತ್ತೆ ಮಾಡಿದ್ದು, ಬಾವಿಯು ತನ್ನದೆ ಆದ ಕಲಾತ್ಮಕ ರಚನೆಯನ್ನು ಹೊಂದಿದೆ. ಈ ಬಾವಿಯಲ್ಲಿ ನೀರು ಸಹ ಇದ್ದು, ಬಾವಿಯನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದರು.

ಸುದ್ದಿ 3 : ಶಿರಾಳಕೊಪ್ಪ ಪುರಸಭೆಗೆ 3 ಸ್ಟಾರ್ ರೇಟಿಂಗ್
ಶಿರಾಳಕೊಪ್ಪ ಪಟ್ಟಣ ಬಯಲು ಶೌಚಮುಕ್ತ ಮತ್ತು ಗಾರ್ಬೆಜ್ ಫ್ರೀ ಸಿಟಿ ರೇಟಿಂಗ್‌ನಲ್ಲಿ ಜಿಎಫ್‌ಸಿ 3 ಸ್ಟಾರ್ ಪಡೆದುಕೊಂಡಿದೆ. ಸ್ವಚ್ಚ ಭಾರತ್ ಮಿಷನ್ ಮಾರ್ಗಸೂಚಿಯ ಅಡಿಯಲ್ಲಿ ಈ ರೇಟಿಂಗ್ ಪಡೆದುಕೊಂಡಿದೆ. ಶಿರಾಳಕೊಪ್ಪ ಪಟ್ಟಣವನ್ನು ಬಯಲುಶೌಚ ಮುಕ್ತ ಪ್ಲಸ್ ಮರುಪ್ರಮಾಣೀಕರಣ ಮತ್ತು ಗಾರ್ಬೇಜ್‌ಫ್ರೀ ಸಿಟಿ ರೇಟಿಂಗ್‌ನಲ್ಲಿ ಜಿಎಫ್‌ಸಿ 3 ಸ್ಟಾರ್ ಪಟ್ಟಣವೆಂದು ಈ ಮೂಲಕ ಘೋಷಿಸಿದೆ ಎಂದು ಶಿರಾಳಕೊಪ್ಪ ಪುರಸಭೆ ತಿಳಿಸಿದೆ.
ಸುದ್ದಿ 4 : ನೀಚಡಿಯಲ್ಲಿ ಅಡಿಕೆ ಕಳವು
ಸಾಗರ ತಾಲೂಕು ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀಚಡಿಯಲ್ಲಿ ಅಂಗಳದಲ್ಲಿ ಒಣಗಿಸಿದ್ದ 8 ಕ್ವಿಂಟಾಲ ಅಡಿಕೆಯನ್ನು ಕಳ್ಳತನ ಮಾಡಲಾಗಿದೆ. ಇಲ್ಲಿನ ನಿವಾಸಿ ಗುರುಮೂರ್ತಿ ಭಟ್ ಎಂಬುವವರಿಗೆ ಸೇರಿದ ಅಡಕೆ ಕಳವಾಗಿದ್ದು, ಆನಂದಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸುದ್ದಿ 5 : ಗ್ರಾಮ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ
ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಒನ್ ಕೇಂದ್ರಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಒಂದೇ ಸೂರಿನಡಿ ಒದಗಿಸಲು ಗ್ರಾ.ಪಂ ಮಟ್ಟದಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಮೂಲಕ ಗ್ರಾಮೀಣ ಭಾಗದ ಜನರಿಗೆ ತಮ್ಮ ಸಮೀಪದಲ್ಲಿ ಸರ್ಕಾರದ ಹಲವು ಸೇವೆಗಳು ತಮ್ಮ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನೂತನ ಯೋಜನೆಗಳನ್ನು ಸೇವಾಸಿಂಧು ಪೋರ್ಟಲ್ ಮೂಲಕ ಅನುಷ್ಟಾನಗೊಳಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಒನ್ ಕೇಂದ್ರಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿವುಳ್ಳವರು https://www.karnatakaone.gov.in/Public/GramOneFranchiseeTerms ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಮಾ.15 ಕಡೆಯ ದಿನವಾಗಿದೆ. ಶಿವಮೊಗ್ಗ ತಾಲ್ಲೂಕಿನ ಅಗಸವಳ್ಳಿಯಲ್ಲಿ 01, ಭದ್ರಾವತಿ ತಾಲ್ಲೂಕಿನ ಮಾವಿನಕೆರೆ 01, ಕೊಮ್ಮಾರನಹಳ್ಳಿ 01, ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು 01, ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು 01, ಹೊಸನಗರ ತಾಲ್ಲೂಕಿನ ತ್ರಿಣಿವೆ 01 ಮತ್ತು ಮುಂಬಾರುವಿನಲ್ಲಿ 01 ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸಬಹುದೆಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ತಿಳಿಸಿದ್ದಾರೆ.