ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗ ನಗರದ ದುರ್ಗಿಗುಡಿ ಪಾರ್ಕ್ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವು ಆಗಸ್ಟ್ 29, 30 ಮತ್ತು 31ರಂದುತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿಯ ಆಡಳಿತ ಮಂಡಳಿ ತಿಳಿಸಿದೆ.
ಆಗಸ್ಟ್ 29ರ ಶನಿವಾರದಂದು ಪೂರ್ವಾರಾಧನೆ, ಆಗಸ್ಟ್ 30ರ ಭಾನುವಾರ ಶ್ರೀ ಗುರುಗಳ ಪುಣ್ಯದಿನ (ಮಧ್ಯಾರಾಧನೆ) ಹಾಗೂ ಆಗಸ್ಟ್ 31ರ ಸೋಮವಾರದಂದು ಉತ್ತರಾರಾಧನೆ ಕಾರ್ಯಕ್ರಮಗಳು ಜರುಗಲಿವೆ. ಉತ್ತರಾರಾಧನೆಯ ದಿನವಾದ ಆಗಸ್ಟ್ 31ರ ಸೋಮವಾರ ಬೆಳಿಗ್ಗೆ 11-30ಕ್ಕೆ ಶ್ರೀ ರಾಯರ ಮಹಾರಥೋತ್ಸವವು ವೈಭವದಿಂದ ನಡೆಯಲಿದೆ.
ಮೂರು ದಿನಗಳ ಈ ಆರಾಧನಾ ಮಹೋತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ ವಿಶೇಷ ಅಭಿಷೇಕ, ಸರ್ವಸೇವೆ, ಪೂಜೆ ಹಾಗೂ ಸಂಜೆ ರಜತ ರಥೋತ್ಸವ, ಉಯ್ಯಾಲೆ ಸೇವೆ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನೆರವೇರಲಿವೆ.
ಆಗಸ್ಟ್ 28ರ ಶುಕ್ರವಾರ ಹುಣ್ಣಿಮೆಯಂದು ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದ್ದು, ಸಂಜೆ ಧ್ವಜಾರೋಹಣ, ಗೋಪೂಜೆ, ಲಕ್ಷ್ಮಿ ಪೂಜೆ ಹಾಗೂ ಧಾನ್ಯಪೂಜೆ ನೆರವೇರಲಿದೆ.
ನಗರ ಹಾಗೂ ಸುತ್ತಮುತ್ತಲಿನ ಎಲ್ಲಾ ಶ್ರೀರಾಯರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರದ್ಧಾಭಕ್ತಿಯಿಂದ ಈ ಆರಾಧನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಶ್ರೀ ಗುರುರಾಯರ ಕೃಪೆಗೆ ಪಾತ್ರರಾಗಬೇಕೆಂದು ಸೇವಾ ಸಮಿತಿಯ ಆಡಳಿತ ಮಂಡಳಿ ವಿನಂತಿಸಿಕೊಂಡಿದೆ.
