ಶಿವಮೊಗ್ಗ: ಸಾಗರದಲ್ಲಿ ಬೀದಿ ನಾಯಿಗಳ ದಾಳಿಗೆ 6 ಸಾಕು ಕುರಿಗಳು ಬಲಿ – ನಗರಸಭೆ ವಿರುದ್ಧ ಹೋರಾಟದ ಎಚ್ಚರಿಕೆ

ಹಂಚಿಕೊಳ್ಳಿ
WhatsApp Facebook X Telegram
Sagara Dog Attack 6 Sheep Killed
Sagara Dog Attack 6 Sheep Killed

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಜಿಲ್ಲೆಯ ಸಾಗರ ನಗರದ ನೆಹರೂ ನಗರದಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ 6 ಸಾಕು ಕುರಿಗಳು ದಾರುಣವಾಗಿ ಮೃತಪಟ್ಟ ಘಟನೆ ಸಂಭವಿಸಿದೆ. ಸ್ಥಳೀಯ ನಿವಾಸಿ ಮನ್ಸೂರ್‌ ಅಲಿ ಖಾನ್‌ ಎಂಬುವವರಿಗೆ ಸೇರಿದ ಕುರಿಗಳ ಮೇಲೆ ನಾಯಿಗಳ ಹಿಂಡು ದಾಳಿ ಮಾಡಿದ್ದು, ಬೆಳಿಗ್ಗೆ ಮೇವು ಹಾಕಲು ಹೋದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಬೀದಿ ನಾಯಿಗಳು ಕುರಿಗಳನ್ನು ಕಡಿದು ಅರ್ಧಂಬರ್ಧ ತಿಂದು ಹಾಕಿದ್ದು, ಇದರಿಂದಾಗಿ ಕುರಿಗಳ ಮಾಲೀಕರಿಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟವಾಗಿದೆ.

ನೆಹರೂ ನಗರ ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಬೀದಿ ನಾಯಿಗಳ ಕಾಟ ಮಿತಿಮೀರಿದ್ದು, ರಾತ್ರಿಯಾಗುತ್ತಿದ್ದಂತೆ ಸಾರ್ವಜನಿಕರು ಹಾಗೂ ಹಿರಿಯ ನಾಗರಿಕರು ರಸ್ತೆಯಲ್ಲಿ ಸಂಚರಿಸಲು ಬೆಚ್ಚಿಬೀಳುವ ವಾತಾವರಣ ನಿರ್ಮಾಣವಾಗಿದೆ. ಮೂಕ ಪ್ರಾಣಿಗಳ ಜೀವ ತೆಗೆದಿರುವ ಈ ಶ್ವಾನಗಳ ಹಿಂಡಿನಿಂದಾಗಿ ಈಗ ಸಣ್ಣ ಮಕ್ಕಳು, ಮಹಿಳೆಯರು ಮತ್ತು ವೃದ್ಧರ ಪ್ರಾಣಕ್ಕೂ ನೇರ ಕಂಟಕ ಎದುರಾಗಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಭೀತಿಯಲ್ಲಿದ್ದಾರೆ.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದ ಸಾಗರ ನಗರಸಭೆಯ ಆಡಳಿತ ವೈಫಲ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಆಡಳಿತವು ಕೇವಲ ಭರವಸೆಗಳನ್ನು ನೀಡುತ್ತಿದೆಯೇ ಹೊರತು ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಶ್ವಾನಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸದಿದ್ದರೆ, ನಗರಸಭೆ ವಿರುದ್ಧ ಉಗ್ರ ಹೋರಾಟ ಕೈಗೆತ್ತಿಕೊಳ್ಳುವುದಾಗಿ ಸ್ಥಳೀಯರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor