ಶಿವಮೊಗ್ಗ: ಹವ್ಯಕ ಸಂಸ್ಕೃತಿ ರಕ್ಷಣೆಗೆ ಕರೆ; ಮಾಧ್ಯಮ ಸಾಧಕ ತಿಮ್ಮಪ್ಪ ಹುಲಿಮನೆ ಸೇರಿದಂತೆ ಪ್ರಮುಖರಿಗೆ ಸನ್ಮಾನ

ಹಂಚಿಕೊಳ್ಳಿ
WhatsApp Facebook X Telegram
Shimoga Media Achiever Thimmappa Hulimane Felicitated
Shimoga Media Achiever Thimmappa Hulimane Felicitated

Shimoga ಶಿವಮೊಗ್ಗ: ಹವ್ಯಕ ವಂಶ ಮತ್ತು ಪರಂಪರೆಯನ್ನು ಕಾಪಾಡಿಕೊಳ್ಳಲು ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕಿದೆ. ನಮ್ಮ ವಿಶಿಷ್ಟ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸಿಕೊಂಡು ಹೋಗುವ ತುರ್ತು ಅವಶ್ಯಕತೆ ಇದೆ ಎಂದು ಶ್ರೀ ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಅವರು ತಿಳಿಸಿದ್ದಾರೆ. 

ನಗರದ ಹವ್ಯಕ ಭವನದಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಬಿಂಬ ಶಿವಮೊಗ್ಗ ಪ್ರಾಂತ್ಯ ಹವ್ಯಕ ಪ್ರತಿಭೆಗಳಿಗಾಗಿ ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಸಾಧಕರಿಗೆ ಸನ್ಮಾನ’ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿಂದೆ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಪ್ರತಿಬಿಂಬ ಸಾಂಸ್ಕೃತಿಕ ವೇದಿಕೆಯನ್ನು ಈಗ ರಾಜ್ಯದಾದ್ಯಂತ ವಿಸ್ತರಿಸಲಾಗಿದೆ. ಹವ್ಯಕ ಸಮಾಜವು ಸಂಸ್ಕಾರ ಮತ್ತು ಶ್ರೇಷ್ಠತೆಯಿಂದ ಕೂಡಿದ್ದು, ಇಡೀ ಸಮಾಜದಲ್ಲಿ 10 ಸಾವಿರಕ್ಕೂ ಹೆಚ್ಚು ಶಿಕ್ಷಕರು ಹವ್ಯಕ ಸಮುದಾಯದಿಂದ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಇದೇ ವೇಳೆ, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹವ್ಯಕ ಭಾಷಾ ಅಕಾಡೆಮಿಯನ್ನು ಘೋಷಿಸಿ ಆರಂಭಿಸಿರುವುದನ್ನು ಶ್ಲಾಘಿಸಿದ ಅವರು, ಪ್ರಸಕ್ತ ವರ್ಷದ ಡಿಸೆಂಬರ್ 29 ರಂದು ಬೆಂಗಳೂರಿನಲ್ಲಿ ಬೃಹತ್ ‘ಹವ್ಯಕ ಮಹಿಳಾ ಸಮಾವೇಶ’ವನ್ನು ಆಯೋಜಿಸಲಾಗಿದೆ ಎಂದು ಪ್ರಕಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯ ಪ್ರಾಧ್ಯಾಪಕ ಡಾ. ರಾಮಕೃಷ್ಣ ಹೆಗಡೆ ಮಾತನಾಡಿ, “ಪ್ರಕೃತಿಗೆ ಮಾರಕವಾದ ಯೋಜನೆಗಳ ವಿರುದ್ಧ ಧ್ವನಿ ಎತ್ತುವ ಹವ್ಯಕ ಸಮುದಾಯದ ಸಾಂಪ್ರದಾಯಿಕ ಜೀವನ ಶೈಲಿ ಇಂದು ಕಣ್ಮರೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕೃಷಿಯನ್ನೇ ನಂಬಿದ ಹವ್ಯಕರ ಬದುಕು ದುಸ್ತರವಾಗುತ್ತಿದ್ದು, ಯುವಕರಿಗೆ ವಿವಾಹ ಸಂಬಂಧಗಳು ದೊರೆಯದೆ ಕುಟುಂಬ ಜೀವನದಿಂದ ವಂಚಿತರಾಗುತ್ತಿದ್ದಾರೆ. ಈ ಸಾಮಾಜಿಕ ಬಿಕ್ಕಟ್ಟಿನ ಕುರಿತು ಸಮಾಜ ತುರ್ತಾಗಿ ಚಿಂತಿಸಬೇಕಿದೆ” ಎಂದರು. ಇದೇ ಸಂದರ್ಭದಲ್ಲಿ ಹವ್ಯಕ ಮಹಿಳಾ ವೇದಿಕೆಯನ್ನು ಉದ್ಘಾಟಿಸಲಾಯಿತು ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

Shimoga ಸಾಧಕರಿಗೆ ಗೌರವ ಸನ್ಮಾನ

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಮಾಜದ ಪ್ರಮುಖರಾದ ಮಾಧ್ಯಮ ಕ್ಷೇತ್ರದ ಸಾಧಕ ತಿಮ್ಮಪ್ಪ ಹುಲಿಮನೆ, ವೈದ್ಯಕೀಯ ಕ್ಷೇತ್ರದ ಡಾ. ಎನ್. ಜಯಂತ್ ರಾವ್, ಯಕ್ಷಗಾನ ಕ್ಷೇತ್ರದ ಪರಮೇಶ್ವರ ಹೆಗಡೆ ಐನಬೈಲ್, ಶೈಕ್ಷಣಿಕ ಕ್ಷೇತ್ರದ ಡಾ. ವಿ.ಎನ್. ಭಟ್, ಪಾಕತಜ್ಞ ಯು. ವಿವೇಕ ಭಟ್ ಹಾಗೂ ಸ್ವ-ಉದ್ಯಮ ಕ್ಷೇತ್ರದ ಸುಮಿತ್ರ ಜಗದೀಶ್ ಮತ್ತು ಅಶೋಕ್ ಬಿ.ಎಂ. ಅವರನ್ನು ಮಹಾಸಭಾದ ವತಿಯಿಂದ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮನೋವೈದ್ಯ ಡಾ. ಕೆ.ಆರ್. ಶ್ರೀಧರ್, ಜಿಲ್ಲಾಧ್ಯಕ್ಷ ಪೂರ್ಣಾನಂದ ವಿ.ಪಿ., ನಿರ್ದೇಶಕಿ ಡಾ. ಮೈಥಿಲಿ ಪೂರ್ಣಾನಂದ, ಪ್ರಮುಖರಾದ ಶ್ರೀಪತಿ ಕಾಕಲ್, ದೀಪಕ ಹೆಗಡೆ ಗೋಳಿಕೈ ಸೇರಿದಂತೆ ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.

Shimoga Media Achiever Thimmappa Hulimane Felicitated

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor