ಚಿನ್ನಯ್ಯನ ಉಸ್ತುವಾರಿ ವಹಿಸಿದ್ದ ಅಧಿಕಾರಿಯಿಂದ ಕರ್ತವ್ಯ ಲೋಪ, ವಿಚಾರಣಾಧೀನ ಕೈದಿಗೆ ಮೊಬೈಲ್ ನೀಡಿದ್ದ ಅಧಿಕಾರಿ ಮೇಲೆ ಬಿತ್ತು ಕೇಸ್​

prathapa thirthahalli
Prathapa thirthahalli - content producer

Shivamogga Central Jail : ಶಿವಮೊಗ್ಗ: ಕೇಂದ್ರ ಕಾರಾಗೃಹದ ಬಿಗಿ ಭದ್ರತೆಯ ನಡುವೆಯೂ ವಿಚಾರಣಾಧೀನ ಕೈದಿಯೊಬ್ಬನಿಗೆ ಮೊಬೈಲ್ ಫೋನ್ ನೀಡುವ ಮೂಲಕ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಮುಖ್ಯ ವೀಕ್ಷಕನಕನ ಮೇಲೆ ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಧರ್ಮಸ್ಥಳ ಬುರುಡೆ ಗ್ಯಾಂಗ್’ನ ಪ್ರಮುಖ ಆರೋಪಿ ಚಿನ್ನಯ್ಯನ ಉಸ್ತುವಾರಿ ವಹಿಸಿದ್ದ ಅಧಿಕಾರಿಯೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ.

ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ವೀಕ್ಷಕನಾದ ಶಿವಮೂರ್ತಿ ಬಸವರಾಜ ಕಂಕಣವಾಡಿ ಕರ್ತವ್ಯ ಲೋಪ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಅ.26 ರಿಂದ ನವೆಂಬರ್ 1ರವರೆಗೆ ಹಗಲು ಪಹರೆ ಕರ್ತವ್ಯಕ್ಕೆ ಹಾಗೂ ಕಾರಾಗೃಹದ ಮುಖ್ಯ ದ್ವಾರದ ಕೇಜ್‌ನಲ್ಲಿ ನಿಯೋಜನೆಗೊಂಡಿದ್ದ ಶಿವಮೂರ್ತಿ, ಚಿನ್ನಯ್ಯನ ಬಿಗಿ ಭದ್ರತೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನೂ ಹೊತ್ತಿದ್ದರು.ಅ.28 ರ ಬೆಳಿಗ್ಗೆ ಸುಮಾರು 8:20ರ ಸುಮಾರಿಗೆ ಶಿವಮೂರ್ತಿ ಬಸವರಾಜ್ ಕಂಕಣವಾಡಿ ಅವರು ತಮ್ಮ ಕರ್ತವ್ಯ ಸ್ಥಳದಿಂದ ‘ಬಿ’ ಗೇಟ್‌ಗೆ ತೆರಳಿ, ಶಿಕ್ಷಾ ಬಂಧಿ ಫಯಾಜ್ ಎಂಬಾತನಿಗೆ ಪೇಪರ್‌ನಲ್ಲಿ ಸುತ್ತಿ ಒಂದು ಮೊಬೈಲ್ ನೀಡಿದ್ದಾರೆ.

- Advertisement -

ಜೈಲಿನ ಸಿಸಿ ಟಿವಿ ವಿಭಾಗದ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಸಿಸಿ ಟಿವಿ ವಿಭಾಗದ ವೀಕ್ಷಕರಾದ ಸುಪ್ರಿಯಾ ವಾಗ್ಮೋರೆ ಅವರು ತಕ್ಷಣ ಜೈಲಿನ ಮುಖ್ಯ ಅಧೀಕ್ಷಕರಿಗೆ ಈ ವಿಷಯ ತಿಳಿಸಿದ್ದಾರೆ.ಜೈಲು ಅಧಿಕಾರಿಗಳು ಫಯಾಜ್‌ನನ್ನು ವಿಚಾರಣೆ ನಡೆಸಿದಾಗ, ಆ ಮೊಬೈಲ್ ಅನ್ನು ಇನ್ನೋರ್ವ ಶಿಕ್ಷಾ ಬಂಧಿ ಕೆ. ಅನಿಲ್ ಕುಮಾರ್ಗೆ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ತಕ್ಷಣ ಜೈಲು ಸಿಬ್ಬಂದಿ ಕೊಠಡಿ ಸಂಖ್ಯೆ 2 ಮತ್ತು 22 ಅನ್ನು ಶೋಧಿಸಿದಾಗ, ಕೊಠಡಿ ಸಂಖ್ಯೆ 22 ರಲ್ಲಿ ಮುಖ್ಯ ವೀಕ್ಷಕ ನೀಡಿದ್ದ ಮೊಬೈಲ್ ಪತ್ತೆಯಾಗಿದೆ.

ಈ ಸಂಬಂಧ ಜೈಲ್ ಸೂಪರಿಂಟೆಂಡೆಂಟ್ ಪಿ. ರಂಗನಾಥ್ ಅವರು ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ, ಜೈಲಿನ ಮುಖ್ಯ ವೀಕ್ಷಕ ಶಿವಮೂರ್ತಿ ಬಸವರಾಜ್ ಕಂಕಣವಾಡಿ ಹಾಗೂ ಶಿಕ್ಷಾ ಬಂಧಿಗಳಾದ ಫಯಾಜ್ ಮತ್ತು ಅನಿಲ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

Shivamogga Central Jail

 

Share This Article
Leave a Comment

Leave a Reply

Your email address will not be published. Required fields are marked *