Sakrebailu Elephant Camp :ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದಲ್ಲಿರುವ ಬಾಲಣ್ಣ ಮತ್ತು ಮಿತ್ರ ಆನೆಗಳ ಆರೋಗ್ಯ ಸ್ಥಿತಿ ಗಂಭೀರವಾಗಿರುವುದಕ್ಕೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸಿಂಹ ಸೇನೆ ಜಿಲ್ಲಾ ಶಾಖೆಯು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಬಳಿಕ ಬಾಲಣ್ಣನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಕಾಲುನೋವಿನಿಂದ ಬಳಲುತ್ತಿದ್ದರೂ ಸಹ ಮಾವುತ, ಕಾವಾಡಿಗ, ಡಿಎಫ್‌ಒ ಮತ್ತು ವೈದ್ಯಾಧಿಕಾರಿಗಳು ಚುಚ್ಚುಮದ್ದು ನೀಡಿ ಬಲವಂತವಾಗಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ. ಈ ಮೂಲಕ ಆನೆಯ ಆರೋಗ್ಯಕ್ಕಿಂತ ಸಿಬ್ಬಂದಿ ಮತ್ತು ಅಧಿಕಾರಿಗಳ ಹಠವೇ ಮುಖ್ಯವಾಗಿದೆ ಎಂದು ಸಂಘಟನೆ ಗಂಭೀರ ಆರೋಪ ಮಾಡಿದೆ.
ಆದ್ದರಿಂದ, ಈ ಘಟನೆಗೆ ಕಾರಣರಾದ ಆರ್ ಎಫ್‌ಒ ಮತ್ತು ಡಿಎಫ್‌ಒ ಗಳನ್ನು ಕೂಡಲೇ ತಾತ್ಕಾಲಿಕವಾಗಿ ಅಮಾನತುಗೊಳಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಅಲ್ಲದೆ, ನಿವೃತ್ತ ಹಾಗೂ ಹಾಲಿ ಮಾನ್ಯ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ, ಸಂಪೂರ್ಣ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದೆ. ಬಾಲಣ್ಣನ ಜೊತೆಗೆ ಇನ್ನೆರಡು ಆನೆಗಳ ಆರೋಗ್ಯದಲ್ಲಿಯೂ ಏರುಪೇರಾಗಿದ್ದು, ಸಕ್ರೆಬೈಲು ಶಿಬಿರದ ವೈದ್ಯಾಧಿಕಾರಿಗಳನ್ನು ಹೊರತುಪಡಿಸಿ ಇತರೆ ತಜ್ಞ ವೈದ್ಯಾಧಿಕಾರಿಗಳಿಂದ ಆನೆಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

