KS Eshwarappa : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ರಾಜ್ಯ ಸರ್ಕಾರವು ನೀಡಿದ್ದ ಪೊಲೀಸ್ ಎಸ್ಕಾರ್ಟ್ (ಪೈಲಟ್) ಮತ್ತು ರೆಸಿಡೆನ್ಸಿಯಲ್ ಗಾರ್ಡ್ (ವಸತಿ ಭದ್ರತೆ) ಭದ್ರತೆಯನ್ನು ವಾಪಸ್ ಪಡೆದಿದ್ದು, ಈ ಕುರಿತು ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಆಗ ಭದ್ರತೆ ಕೊಟ್ಟಿತ್ತು, ಈಗ ಅದನ್ನು ವಾಪಸ್ ಪಡೆದಿದೆ. ಭದ್ರತೆ ನೀಡಿದಾಗ ನಾನು ಯಾಕೆ ಕೊಟ್ಟಿರಿ ಅಂತಾನೂ ಕೇಳಿರಲಿಲ್ಲ, ಈಗ ವಾಪಸ್ ಪಡೆದಾಗ ಯಾಕೆ ಹಿಂಪಡೆದಿದ್ದೀರಿ ಎಂಬುದರ ಬಗ್ಗೆಯೂ ಸರ್ಕಾರಕ್ಕೆ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
KS Eshwarappa ಸರ್ಕಾರದಲ್ಲಿ ಹಣ ಇಲ್ಲವೆಂಬುದಕ್ಕೆ ಆತ್ಮಹತ್ಯೆಯೇ ಸಾಕ್ಷಿ
ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ಸಂಬಳ ಸಿಗದೆ ನೀರುಗಂಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಹಣಕಾಸಿನ ಕೊರತೆ ಇದೆ ಎಂಬುದಕ್ಕೆ ಇದೇ ಪ್ರಮುಖ ಸಾಕ್ಷಿ. ಅತ್ತ ಗುತ್ತಿಗೆದಾರರ ಸಂಘವು 33 ಸಾವಿರ ಕೋಟಿ ರೂಪಾಯಿಗಳ ಬಿಲ್ ಬಾಕಿ ಇದೆ ಎಂದು ಹೇಳುತ್ತಿದ್ದಾರೆ. ಅವರ ಬಳಿಯೂ ಸರ್ಕಾರವು ಶೇ 40 ಕ್ಕಿಂತಲೂ ಹೆಚ್ಚು ಕಮಿಷನ್ ಪಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಹಿರಿಯ ಬಿಜೆಪಿ ನಾಯಕ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ನಾನು ಯಾವುದೇ ಹೊಸ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಹೋಗುವುದಾದರೆ ಬಿಜೆಪಿಗೆ ಮಾತ್ರ ಹೋಗಬೇಕು. ಆದರೆ, ಭಾರತೀಯ ಜನತಾ ಪಕ್ಷವು ಶುದ್ಧೀಕರಣ ಆಗುವವರೆಗೂ ನಾನು ಬಿಜೆಪಿಗೆ ಹೋಗುವುದಿಲ್ಲ. ಪ್ರಾಣ ಇರುವವರೆಗೂ ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ, ಹೋಗುವುದಾದರೆ ಬಿಜೆಪಿಗೆ ಮಾತ್ರ ಹೋಗುತ್ತೇನೆ ಎಂದು ಹೇಳಿದರು.
KS Eshwarappa ಆರ್‌ಎಸ್‌ಎಸ್ ವಿರೋಧಿಗಳ ವಿರುದ್ಧ ಆಕ್ರೋಶ
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಚಟುವಟಿಕೆಗಳ ಬಗ್ಗೆ ನಡೆಯುತ್ತಿರುವ ಚರ್ಚೆಯ ಕುರಿತು ಮಾತನಾಡಿದ ಅವರು, “ಆರ್‌ಎಸ್‌ಎಸ್‌ನ ಹೆಸರು ಹೇಳಲು ಈ ಜನರಿಗೆ ಧೈರ್ಯ ಇಲ್ಲ. ಅವರಿಗೆ ಆರ್‌ಎಸ್‌ಎಸ್ ಬಗ್ಗೆ ಎಷ್ಟು ಭಯವಿದೆ ಎಂಬುದನ್ನು ಗಮನಿಸಿ. ಆರ್‌ಎಸ್‌ಎಸ್ ಅನ್ನು ಕೇಂದ್ರ ಸರ್ಕಾರ ಮೂರು ಬಾರಿ ನಿಷೇಧ ಮಾಡಿತ್ತು. ಆದರೆ ನಿಷೇಧ ಮಾಡಿದವರು ನಾಶವಾಗಿ ಹೋದರು, ಆರ್‌ಎಸ್‌ಎಸ್ ಮಾತ್ರ ಬೆಳೆಯುತ್ತಾ ಹೋಯಿತು. ಆರ್‌ಎಸ್‌ಎಸ್ ಬೆಳೆದು ಇಂದು ಆರ್‌ಎಸ್‌ಎಸ್‌ನ ಸ್ವಯಂಸೇವಕರೇ ಪ್ರಧಾನಿ ಆಗಿದ್ದಾರೆ. ಯಾರು ವಿರೋಧ ಮಾಡಿದರೂ ಆರ್‌ಎಸ್‌ಎಸ್ ಅನ್ನು ಏನು ಮಾಡಲು ಸಾಧ್ಯವಿಲ್ಲ ಎಂದರು.


