Karnataka Transport Department : ವಾಹನ ಹೊಗೆಯ ಮಾಲಿನ್ಯ ನಿಯಂತ್ರಣ, ಹೆಲ್ಮೆಟ್ ಕಡ್ಡಾಯ ಸೇರಿದಂತೆ ಇತರೆ ಸಂಚಾರ ನಿಯಮಗಳನ್ನು ಪಾಲಿಸುವ ಬಗ್ಗೆ ಸಾರಿಗೆ ಇಲಾಖೆಯು ನಿರಂತರವಾಗಿ ಜಾಗೃತಿ ಮೂಡಿಸುತ್ತಲೇ ಇರುತ್ತದೆ. ಇದರ ನಡುವೆಯೇ, ಕರ್ನಾಟಕ ಸಾರಿಗೆ ಇಲಾಖೆಯು ಟ್ರಾಫಿಕ್ ನಿಯಮಗಳಿಗೆ ಸಂಬಂಧಿಸಿದಂತೆ ವಿಭಿನ್ನ ಶೈಲಿಯಲ್ಲಿ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದೆ.
ಕನ್ನಡದ ಜನಪ್ರಿಯ ಚಲನಚಿತ್ರ ಸು ಫ್ರಂ ಸೋ ಚಿತ್ರದ ಪ್ರಮುಖ ಪಾತ್ರಧಾರಿ ‘ರವಿ ಅಣ್ಣ’ ಮತ್ತು ಅವರು ಓಡಿಸುವ ಬಜಾಜ್ ಚೇತಕ್ ಸ್ಕೂಟರ್ ಅನ್ನು ಬಳಸಿಕೊಂಡು, ಸಾರಿಗೆ ಇಲಾಖೆಯು ಪರಿಸರ ಮಾಲಿನ್ಯ ಮತ್ತು ಸಂಚಾರ ನಿಯಮಗಳ ಉಲ್ಲಂಘನೆಯ ಕುರಿತು ಜಾಗೃತಿ ಮೂಡಿಸುವ ವೀಡಿಯೊವನ್ನು ಹಂಚಿಕೊಂಡಿದೆ. ಈ ವೀಡಿಯೊವನ್ನು ಇಲಾಖೆಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
ವೀಡಿಯೊದಲ್ಲಿರುವಂತೆ, ಮೊದಲು ರವಿ ಅಣ್ಣ ಚೇತಕ್ ಸ್ಕೂಟರ್ ಸ್ಟಾರ್ಟ್ ಮಾಡಿ ಹೊರಡುವಾಗ ಅಧಿಕ ಹೊಗೆ ಹೊರಬರುತ್ತದೆ. ಆ ದೃಶ್ಯದ ಮೇಲೆ, “ಎಮಿಷನ್ ಟೆಸ್ಟ್ ಮಾಡಿಸಿ” ಎಂಬ ಸಂದೇಶದೊಂದಿಗೆ, “ರವಿ ಅಣ್ಣ, ನಿಮ್ಮ ಸ್ಕೂಟರ್ ತುಂಬಾ ಹಳೆಯದಾಗಿದೆ” ಎಂಬ ಶೀರ್ಷಿಕೆಯನ್ನು (Caption) ನೀಡಲಾಗಿದೆ.
ಮುಂದಿನ ದೃಶ್ಯದಲ್ಲಿ, ರವಿ ಅಣ್ಣ ಹೆಲ್ಮೆಟ್ ಧರಿಸದೆ ತ್ರಿಬಲ್ ರೈಡಿಂಗ್ ಮಾಡುತ್ತಿರುವ ವೀಡಿಯೊ ತುಣುಕನ್ನು ಹಂಚಿಕೊಂಡಿರುವ ಇಲಾಖೆಯು, “ಹಳೇ ವಾಹನಗಳಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ. ಅದು ಆರೋಗ್ಯಕ್ಕೆ ಹಾನಿಕಾರ” ಎಂಬ ಟ್ಯಾಗ್‌ಲೈನ್ ಅನ್ನು ನೀಡಿದೆ.
ಕೊನೆಯಲ್ಲಿ, ರವಿ ಅಣ್ಣ, ನಿಮ್ಮ ಗಾಡಿಗೆ 15 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದೆ. ಅದನ್ನು ಸ್ಕ್ರ್ಯಾಪ್‌ಗೆ ಹಾಕಿ ಎಂದು ಹೇಳಿ, ಅವರಿಗೆ ಹೊಸ ಗಾಡಿಯನ್ನು ಕೊಡಿಸಿರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ.
ಹೀಗೆ, ಸಾರಿಗೆ ಇಲಾಖೆಯು ಸು ಫ್ರಂ ಸೋ ಚಿತ್ರದ ತುಣುಕುಗಳನ್ನು ಬಳಸಿಕೊಂಡು ವಿಭಿನ್ನವಾಗಿ ಜನರಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಇದಕ್ಕೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು (Comment) ನೀಡುತ್ತಿದ್ದಾರೆ.
Karnataka Transport Department

View this post on Instagram
A post shared by Transport Department Karnataka (@transport_department_karnataka)

