Heart attack : ಬೆಂಗಳೂರು: ರಾಜ್ಯದಲ್ಲಿ ಹಠಾತ್ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ವೈದ್ಯಕೀಯ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಅವರು ಸೋಮವಾರ ವಿಧಾನ ಪರಿಷತ್ ಅಧಿವೇಶನದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡು ರಾವ್ ಅವರಿಗೆ ಒತ್ತಾಯಿಸಿದರು.
ಆರೋಗ್ಯ ಸಚಿವರು ನೀಡಿದ ಮಾಹಿತಿಯ ಪ್ರಕಾರ, 2022ರಲ್ಲಿ 5,800, 2023ರಲ್ಲಿ 15,000 ಹಾಗೂ 2024 ಮತ್ತು 2025ರ ಅವಧಿಯಲ್ಲಿ 17,000 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ವರದಿಯೊಂದರ ಪ್ರಕಾರ, ಹೃದಯಾಘಾತಕ್ಕೆ ಪ್ರಮುಖ ಕಾರಣಗಳು: ಧೂಮಪಾನ, ಮಧುಮೇಹ, ಒತ್ತಡ, ಬೊಜ್ಜು ಮತ್ತು ವಂಶಪಾರಂಪರ್ಯ ಕಾರಣಗಳು.
Heart attack : ತಾಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಪರೀಕ್ಷೆಗಳ ಕೊರತೆ
ಡಾ. ಧನಂಜಯ ಸರ್ಜಿ ಮಾತನಾಡಿ, “ಇ.ಸಿ.ಜಿ. ಪರೀಕ್ಷೆಯಿಂದ ಮಾತ್ರ ಹೃದಯಾಘಾತವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ, ರಾಜ್ಯದ ಯಾವ ತಾಲೂಕು ಆಸ್ಪತ್ರೆಯಲ್ಲೂ ಟಿ.ಎಂ.ಟಿ (Treadmill Test) ಮತ್ತು ಟ್ರೋಪೋನಿನ್ ಐ ಪರೀಕ್ಷೆ ಲಭ್ಯವಿಲ್ಲ” ಎಂದು ಹೇಳಿದರು. ಟ್ರೋಪೋನಿನ್ ಐ ಪರೀಕ್ಷೆಯು ಹೃದಯಾಘಾತದ ಸಂದರ್ಭದಲ್ಲಿ ರಕ್ತದಲ್ಲಿ ಹೆಚ್ಚಾಗುವ ಪ್ರೋಟೀನ್ ಅಂಶವನ್ನು ಗುರುತಿಸುವ ಪ್ರಮುಖ ಪರೀಕ್ಷೆಯಾಗಿದ್ದು, ಇದನ್ನು ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ಆಗ್ರಹಿಸಿದರು. ಟಿ.ಎಂ.ಟಿ. ಪರೀಕ್ಷೆ ಲಭ್ಯವಿಲ್ಲದ ಕಡೆಗಳಲ್ಲಿ, ಆಯುಷ್ಮಾನ್ ಮತ್ತು ಎ.ಬಿ.ಆರ್.ಕೆ ಯೋಜನೆಗಳ ಅಡಿಯಲ್ಲಿ ಉಚಿತವಾಗಿ ಈ ಪರೀಕ್ಷೆಗಳನ್ನು ನಡೆಸುವಂತೆ ಅವರು ಸಲಹೆ ನೀಡಿದರು.
Heart attack ಟೆನೆಕ್ಟೆಪ್ಲೇಸ್ ಇಂಜೆಕ್ಷನ್: ಹೃದಯಾಘಾತದ ಸಮಯದಲ್ಲಿ ನೀಡಲಾಗುವ ಈ ಇಂಜೆಕ್ಷನ್ ಜೀವ ಉಳಿಸಲು ಸಹಕಾರಿ. ಸದ್ಯ ಕೆಲವೇ ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯವಿರುವ ಇದನ್ನು, ಎಲ್ಲಾ ತಾಲೂಕು ಆಸ್ಪತ್ರೆಗಳಿಗೂ ವಿಸ್ತರಿಸಬೇಕು. ವಿಶೇಷವಾಗಿ, ಹಾವೇರಿ, ಶಿರಸಿ, ಮಡಿಕೇರಿ, ಚಾಮರಾಜನಗರದಂತಹ ಸ್ಟಂಟ್ ಹಾಕುವ ವ್ಯವಸ್ಥೆ ಇಲ್ಲದ ಜಿಲ್ಲೆಗಳಲ್ಲಿ ಇದು ಅತ್ಯಗತ್ಯ ಎಂದರು.
ಕಾರ್ಡಿಯಾಕ್ ಬೈಪಾಸ್ ಸರ್ಜರಿ: ಶೇ. 10 ರಷ್ಟು ರೋಗಿಗಳಿಗೆ ಬೈಪಾಸ್ ಸರ್ಜರಿ ಅಗತ್ಯವಿದ್ದು, ಇದು ಬೆಂಗಳೂರಿನ ಜಯದೇವ ಮತ್ತು ಗುಲ್ಬರ್ಗಾ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದೆ. ಆದ್ದರಿಂದ, ಮಧ್ಯ ಕರ್ನಾಟಕದ ಜನರಿಗೆ ಅನುಕೂಲವಾಗುವಂತೆ ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ಈ ಸೌಲಭ್ಯ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕ್ಯಾಥ್ ಲ್ಯಾಬ್: ಕ್ಯಾಥ್ ಲ್ಯಾಬ್ ವ್ಯವಸ್ಥೆ ಇಲ್ಲದ ಚಾಮರಾಜನಗರ, ಚಿಕ್ಕಮಗಳೂರು, ಹಾವೇರಿ, ಶಿರಸಿ ಮತ್ತು ಹೆಚ್ಚು ರೋಗಿಗಳಿರುವ ಉಡುಪಿ-ಮಂಗಳೂರು ಜಿಲ್ಲೆಗಳಲ್ಲಿ ಅಥವಾ ಎಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಈ ಸೌಲಭ್ಯವನ್ನು ಒದಗಿಸುವಂತೆ ಸರ್ಜಿ ಒತ್ತಾಯಿಸಿದರು.
Heart attack : ಆರೋಗ್ಯ ಸಚಿವರ ಭರವಸೆ
ಡಾ. ಸರ್ಜಿ ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡು ರಾವ್, “ಆಯುಷ್ಮಾನ್ ಯೋಜನೆ ಅಡಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತೇವೆ. ಟ್ರೋಪೋನಿನ್ ಐ ಪರೀಕ್ಷೆಯನ್ನು ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯವಾಗುವಂತೆ ಮಾಡುತ್ತೇವೆ. ಸದ್ಯ 86 ತಾಲೂಕುಗಳಲ್ಲಿ ಲಭ್ಯವಿರುವ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಅನ್ನು ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡುತ್ತೇವೆ” ಎಂದು ಭರವಸೆ ನೀಡಿದರು. ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ಅವರೊಂದಿಗೆ ಚರ್ಚಿಸಿ ಕ್ಯಾಥ್ ಲ್ಯಾಬ್‌ಗಳನ್ನು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಜೊತೆಗೆ, ‘ಗೃಹ ಆರೋಗ್ಯ’ ಯೋಜನೆಯ ಮೂಲಕ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

