Vande Bharat Train Shivamogga ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು: ಜನವರಿಯಿಂದ 4 ಪ್ರಮುಖ ನಗರಗಳಿಗೆ ಸಂಪರ್ಕ
ಶಿವಮೊಗ್ಗ, ಜುಲೈ 9, 2025: ಮುಂದಿನ ವರ್ಷ ಜನವರಿ ತಿಂಗಳಿನಿಂದ ಶಿವಮೊಗ್ಗದಿಂದ ದೇಶದ ಪ್ರಮುಖ ನಗರಗಳಿಗೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ವಿಭಾಗ ಮಟ್ಟದ ಪ್ರಬುದ್ಧರ ಸಭೆಯಲ್ಲಿ ಅವರು ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Vande Bharat Train Shivamogga ಕೋಟೆಗಂಗೂರಿನ ರೈಲ್ವೆ ಕೋಚಿಂಗ್ ಡಿಪೋ ಜನವರಿ ತಿಂಗಳಿಗೂ ಮುನ್ನವೇ ಉದ್ಘಾಟನೆಗೊಳ್ಳಲಿದೆ. ಇದರ ನಂತರವೇ ಶಿವಮೊಗ್ಗದಿಂದ ವಂದೇ ಭಾರತ್ ರೈಲುಗಳ ಸಂಚಾರ ಪ್ರಾರಂಭವಾಗಲಿದೆ ಎಂದು ರಾಘವೇಂದ್ರ ಸ್ಪಷ್ಟಪಡಿಸಿದ್ದಾರೆ. ಈ ಹೊಸ ರೈಲು ಸಂಪರ್ಕದಿಂದ ಶಿವಮೊಗ್ಗವು ಬೆಂಗಳೂರು, ಕೇರಳದ ಎರ್ನಾಕುಲಂ, ಬಿಹಾರದ ಭಗಲ್ಪುರ್ ಮತ್ತು ಚಂಡೀಗಢದೊಂದಿಗೆ ನೇರ ಸಂಪರ್ಕವನ್ನು ಪಡೆಯಲಿದೆ. ಇದು ಶಿವಮೊಗ್ಗದ ಜನರಿಗೆ ಅನುಕೂಲಕರ ಪ್ರಯಾಣವನ್ನು ಒದಗಿಸಲಿದೆ.
ರೈಲ್ವೆ ಯೋಜನೆಗಳ ಪ್ರಗತಿಯ ಕುರಿತು ಮಾತನಾಡಿದ ರಾಘವೇಂದ್ರ, ತಾಳಗುಪ್ಪ-ಶಿರಸಿ ರೈಲ್ವೆ ಮಾರ್ಗದ ಸರ್ವೇ ಕಾರ್ಯ ಮುಕ್ತಾಯಗೊಂಡಿದೆ. ಆದರೆ, ತಾಳಗುಪ್ಪ-ಹೊನ್ನಾವರ ರೈಲ್ವೆ ಯೋಜನೆಗೆ ಶೇ.73ರಷ್ಟು ಅರಣ್ಯ ಪ್ರದೇಶ ಬರುವುದರಿಂದ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ. ಬೀರೂರು-ಶಿವಮೊಗ್ಗ ನಡುವಿನ ಡಬ್ಲಿಂಗ್ ಕಾರ್ಯಕ್ಕೆ ಈಗಾಗಲೇ ಹಣ ಬಿಡುಗಡೆಯಾಗಿದೆ.

ಇದರ ಜೊತೆಗೆ, ತಾಳಗುಪ್ಪದಿಂದ ಹುಬ್ಬಳ್ಳಿಗೆ 150 ಕಿ.ಮೀ ದೂರಕ್ಕೆ ರೈಲು ವ್ಯವಸ್ಥೆಯ ಸರ್ವೇ ಕೂಡ ನಡೆದಿದ್ದು, ಈ ಯೋಜನೆಗಳಿಗೆ ಪರ್ಯಾಯ ಜಮೀನು ಹೊಂದಿಸಬೇಕಿದೆ. ಭದ್ರಾವತಿ ಮತ್ತು ಚಿಕ್ಕಜಾಜೂರು ನಡುವೆ ಹೊಸ ರೈಲ್ವೆ ಸಂಪರ್ಕ ಏರ್ಪಡಲಿದೆ ಎಂದೂ ಅವರು ಪ್ರಸ್ತಾಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛಾಶಕ್ತಿಯಿಂದ ಇಂತಹ ಕ್ರಾಂತಿಕಾರಕ ಅಭಿವೃದ್ಧಿಗಳು ದೇಶಾದ್ಯಂತ ಸಾಧ್ಯವಾಗುತ್ತಿವೆ ಎಂದು ರಾಘವೇಂದ್ರ ಹೇಳಿದರು.