mescom lineman video : ಮಳೆ ನಡುವೆ ಕೆರೆಯ ಮಧ್ಯೆ ವಿದ್ಯುತ್ ಕಂಬ ದುರಸ್ತಿ: ಮೆಸ್ಕಾಂ ಸಿಬ್ಬಂದಿಗಳ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ
mescom lineman video ಮೆಸ್ಕಾಂ ಸಿಬ್ಬಂದಿಗಳ ಮಳೆಗಾಲದ ಜೀವನ ಹೇಳತೀರದು,. ಮರಗಳು ಬಿದ್ದು, ವಿದ್ಯುತ್ ತಂತಿಗಳು ತುಂಡಾಗಿ ಅನಾಹುತಗಳಾದಾಗ ತಮ್ಮ ಜೀವವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ಅದರಲ್ಲಿಯು ಮಲೆನಾಡ ಮಳೆಯ ನಡುವೆ ಮೆಸ್ಕಾಂ ಸಿಬ್ಬಂದಿ ವಿದ್ಯುತ್ನ ಜೊತೆಗೆ ಜೀವದ ಚೆಲ್ಲಾಟ ದುಸ್ಸಾಹಸವೇ ಸರಿ. ಅಂತಹ ಸಾಹಸದ ಕೆಲಸವೊಂದನ್ನು ಮೆಸ್ಕಾಂ ಸಿಬ್ಬಂದಿ ನಿರ್ವಹಿಸಿದ್ದು, ಅದರ ಕುರಿತಾದ ವರದಿ ಇಲ್ಲಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ತರಲಘಟ್ಟ ಗ್ರಾಮದಲ್ಲಿ ಕರೆಂಟ್ ಇರಲಿಲ್ಲ. ಜೋರು ಮಳೆಯಿಂದಾಗಿ ವಿದ್ಯುತ್ ಕಂಬಗಳಲ್ಲಿ ಸಮಸ್ಯೆಯಾಗಿತ್ತು. ಆದರೆ, ಅಂದುಕೊಂಡಷ್ಟು ಸುಲಭವಾಗಿ ಕರೆಂಟ್ ಪ್ರಾಬ್ಲಮ್ ಸರಿ ಮಾಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಕರೆಂಟ್ ಕಂಬಗಳು ಗ್ರಾಮದ ಕೆರೆಯ ನಡುವೆ ಹಾದು ಹೋಗಿತ್ತು. ಮಳೆಯಿಂದಾಗಿ ಕೆರೆಯಲ್ಲಿ ಮೂರು ಆಳಿನಷ್ಟು ನೀರು ತುಂಬಿಕೊಂಡಿತ್ತು. ಹಾಗಂತ ರಿಪೇರಿ ಕೆಲಸವನ್ನು ಮುಂದೂಡುವಂತೆ ಇರಲಿಲ್ಲ. ಹೀಗಾಗಿ ವಿಧಿಯಿಲ್ಲದೆ ಮೆಸ್ಕಾಂ ಸಿಬ್ಬಂದಿ ತೆಪ್ಪದಲ್ಲಿ ಕೆರೆಗೆ ಇಳಿದರು. ನೀರಿನ ಭಯದ ನಡುವೆ ಇರುವ ಕರೆಂಟ್ ಕಂಬ ಹತ್ತಿ ಅದರ ನೆತ್ತಿ ಮೇಲೆ ಕುಳಿತು ತಂತಿಯನ್ನು ಸರಿಪಡಿಸುವ ಕೆಲಸವನ್ನು ಒಮ್ಮೆ ಊಹಿಸಿಕೊಂಡು ನೋಡಿ. ಕೆಳಗೂ ಸಾವಿನ ಅಪಾಯ, ಕಂಬದ ಮೇಲೆ ಮೃತ್ಯು ಜೊತೆ ಸರಸ. ಇಂತಹ ಸನ್ನಿವೇಶದಲ್ಲಿ ಮೆಸ್ಕಾಂ ಸಿಬ್ಬಂದಿ ತಮ್ಮ ತಮ್ಮ ನಡುವೆಲ್ಲೆ ಮೊಬೈಲ್ ವಿಡಿಯೋ ಮಾಡಿಕೊಂಡು ನಗುತ್ತಾ, ಕಂಬ ಇರುವ ಕಡೆಗೆ ಏಣಿಯ ಜೊತೆಗೆ ಸಾಗಿದರು.
ಬಳಿಕ ಏಣಿ ಬಳಸಿ ಮೆಸ್ಕಾಂ ಸಿಬ್ಬಂದಿಯೊಬ್ಬ ಕಂಬದ ಮೇಲೆ ಹತ್ತಿದ. ಅಷ್ಟರಲ್ಲಿ ಉಳಿದ ಸಿಬ್ಬಂದಿ ಆತನ ರಕ್ಷಣೆಗೆ ಸಿದ್ಧವಾಗಿ ನಿಂತಿದ್ದು. ಕೆಲ ಹೊತ್ತು ರಿಪೇರಿ ಕೆಲಸದ ಬಳಿಕ, ಮೆಸ್ಕಾಂ ಸಿಬ್ಬಂದಿ ಸುರಕ್ಷಿತವಾಗಿ ಕೆಳಕ್ಕೆ ಬಂದು ತೆಪ್ಪವೇರಿದರು. ಬಳಿಕ ಎಲ್ಲಾ ಮೆಸ್ಕಾಂ ಸಿಬ್ಬಂದಿ ಸುರಕ್ಷಿತವಾಗಿ ದಡಕ್ಕೆ ಬಂದ ಬಳಿಕ ಮೆಸ್ಕಾಂ ಅಧಿಕಾರಿಗಳು ಲೈನ್ ಥ್ರೂ ಮಾಡಿದರು. ಕರೆಂಟ್ ಸಮಸ್ಯೆ ಸರಿಯಾಗಿದ್ದರಿಂದ ಗ್ರಾಮಸ್ಥರು ಖುಷಿಯಾದರು. ಅಂತಿಮವಾಗಿ ಮೆಸ್ಕಾಂ ಸಿಬ್ಬಂದಿಗೆ ಧನ್ಯವಾದ ತಿಳಿಸಿದರು. ಸದ್ಯ ಮೆಸ್ಕಾಂ ಸಿಬ್ಬಂದಿಯ ನೀರಿನ ಮೇಲಿನ ಸಾಹಸದ ಕೆಲಸದ ವಿಡಿಯೋ ಸೋಶಿಯಲ್ ಮೀಡಿಯಾ ತಲುಪಿದೆ. ಅಷ್ಟೆ ಅಲ್ಲದೆ ವೈರಲ್ ಆಗುತ್ತಿದೆ.

View this post on Instagram
ಮೆಸ್ಕಾಂನಿಂದ ಕಂಬ ಹಾಕುವಾಗ ಕೆರೆಗಳ ನಡುವೆ ಹಾಕದೆ, ರಸ್ತೆ ಪಕ್ಕದಲ್ಲಿ ಹಾಕಿದರೆ, ಮೆಸ್ಕಾಂ ಸಿಬ್ಬಂದಿಗಳು ಹೀಗೆ ಯೋಧರಂತೆ ಕರೆಂಟ್ ಕಂಬ ಹತ್ತುವುದು ತಪ್ಪುತ್ತದೆ. ಏನಾದರೂ ಇರಲಿ, ಜೀವಕ್ಕೆ ಅಪಾಯ ಇರುವ ಕೆಲಸದ ನಡುವೆಯು ನಗುತ್ತಾ ಕರೆಂಟ್ ಕೆಲಸವನ್ನು ಮುಗಿಸಿ ಗ್ರಾಮಸ್ಥರಿಗೆ ಬೆಳಕಿನ ವ್ಯವಸ್ಥೆಯನ್ನು ಸುಲಲಿತವಾಗಿಸಿದ ಮೆಸ್ಕಾಂ ಸಿಬ್ಬಂದಿಯ ಶ್ರಮಕ್ಕೆ ಮಲೆನಾಡು ಟುಡೆ ಅಭಿನಂದಿಸುತ್ತದೆ.
