malenadu : ಹೇಗಿರುತ್ತೆ ಮಲೆನಾಡಲ್ಲಿ ಮಳೆಗಾಲದ ಜನಜೀವನ

prathapa thirthahalli
Prathapa thirthahalli - content producer

malenadu : ಓಯ್ ನಿಮ್ಮೂರಲ್ಲಿ ಮಳೆ ಉಂಟೆನ್ರೀ… ಅಯ್ಯೋ ನಮ್ಮೂರಲ್ಲಿ ಮಳೆ ಅಂದ್ರೆ ಮಳೆ ಮಾರ್ರ ಒಂದ್ ಘಳಿಗಿ ಪುರ್ಸೋತ್​ ಇಲ್ಲ ನೋಡಿ, ಯಾವಾಗ್ ನಿಲ್ತದೋ ಏನೋ, ಗದ್ದೆಲಿ ಬೇರೆ ಒಡು ಬಿದ್ಯವೆ ಏನ್ ಮಾಡೋದೂ ಏನೋ, ಈಗ್ಲೇ ಹಿಂಗಾದ್ರೆ ಕಥೆ ಎಂಥದ್ರಿ. ಇದು ಮಳೆಗಾಲದ ಸಮಯದಲ್ಲಿ ಮಲೆನಾಡು ಮಂದಿ ಫೋನಿನಲ್ಲಿ ಸಂಬಂಧಿಕರೊಂದಿಗೆ ನಡೆಸುವ ಸಂಭಾಷಣೆ. ಇದಕ್ಕೆ ಕಾರಣ ಈ ಬಾರಿಯ ಮಳೆ ತಂದ ಅವಾಂತರ. ಈ ಬಾರಿಯ ಮಳೆ ಅವಧಿಗಿಂತ ಮುಂಚೆಯೇ ಆರಂಭವಾಗಿದ್ದು, ಇದರ ನಡುವೆ ನಾ ಕಂಡಂತೆ ಮಳೆಗಾಲದಲ್ಲಿ ಮಲೆನಾಡು ಮಂದಿಯ ಕಾರ್ಯವೈಖರಿ, ಅಲ್ಲಿ ಸಿಗುವ ನೈಸರ್ಗಿಕ ಆಹಾರಗಳ ಕುರಿತಾದ ಸಣ್ಣ ಲೇಖನ ಇಲ್ಲಿದೆ ನೋಡಿ.

ರಾಜ್ಯದಲ್ಲಿ ಈ ಬಾರಿ ಸುರಿಯುತ್ತಿರುವ ಮಳೆ ಅವಾಂತರವನ್ನೇ ಸೃಷ್ಟಿ ಮಾಡಿದೆ. ಉಡುಪಿ, ಮಣಿಪಾಲ, ಬೆಂಗಳೂರು ಸೇರಿದಂತೆ ಇತರೆ ಭಾಗಗಳಲ್ಲಿ ಮಳೆ ಬಿಟ್ಟು ಬಿಡದೆ ಸುರಿಯುತ್ತಿದೆ. ಇದರ ನಡುವೆ ಶಿವಮೊಗ್ಗಕ್ಕೆ ಹವಮಾನ ಇಲಾಖೆ ಮಳೆ ರೆಡ್​ ಅಲರ್ಟ್​ ನೀಡಿದೆ. ಅವಧಿಗೂ ಮುನ್ನ ಮಳೆ ಶುರುವಾದರೆ ಮಲೆನಾಡು ಮಂದಿಯ ಪರಿಸ್ಥಿತಿ ಹೇಳತೀರದು. ನಾವೆಲ್ಲ ಸಣ್ಣವರಿದ್ದಾಗ ನಮ್ಮ ಮನೆಯಲ್ಲಿ ಮಳೆ ಬಂತೆಂದರೆ ಸಾಕು ಗಡಿಬಿಡಿಯೂ ಗಡಿಬಿಡಿ. ಅಯ್ಯೋ ಮಾರಾಯ ಮಳೆ ಬರೋಹಂಗಾಗ್ಯದೆ ಹುಲ್ಲಿನ ಗೊಣವೇ ಮತ್ತೆ ದರ್ಗಿನ್ ಗೊಣವೆಗೆ ಟಾರ್ಪಲ್ ಹಾಕಿಲ್ಲ, ಓಡಿ, ಓಡಿ ಟಾರ್ಪಲ್​ ಹಾಕಣ ಅಂಥ ಶುರುವಾಗೂ ಸಂಭಾಷಣೆ ಹತ್ ಮೀನು ಹೊಡ್ದು ನಟ್ಟಿ ಮುಗಿಯೂ ವರೆಗೂ ಇದೇ ಗೌಜಿ.

- Advertisement -

malenadu : ನಾ ಕಂಡಂತೆ ಮಳೆಗಾಲ

ಮಳೆ ಬಂತೆಂದರೆ  ನಮಗೆಲ್ಲಾ ಏನೋ ಒಂಥರಾ ಖುಶಿ. ಶಾಲೆ ಬಿಟ್ಟು ಬಂದಾಗ ಅಮ್ಮ ಮಾಡಿ ಕೊಡ್ತಿದ್ದ ಹಲಸಿನ ಹಪ್ಪಳ, ರಜೆ ಸಿಕ್ಕಿತೆಂದರೆ ಕೂಣಿ ಹಿಡಿದು ಮೀನು ಹಿಡಿಯಲು ಹೋಗ್ತಿದ್ದ ನೆನಪುಗಳು ಈಗಲೂ  ಸಹ ಹಾಗೇ ಇದೆ. ಮಳೆ ಬಿಡ್ತು ಅಂದ್ರೆ  ಗದ್ದೆಯಲ್ಲಿ ಬೆಳ್ಳೇಡಿ ಹಿಡಿದು  ತಂದು ಸುಟ್ಟು ತಿಂತಿದ್ವಿ, ಅಮ್ಮ ಗಂಜಿ ಮಾಡಿ ಏಡಿ  ಚಟ್ನಿ ಮಾಡಿ ಕೊಡ್ತಿದ್ರು. ಸರಿಯಾಗಿ ನಾಲ್ಕು ತಿಂಗಳುಗಳ ಕಾಲ ವಿವಿಧ ಹೆಸರಿನ ಮಳೆಗಳು ಬಿಟ್ಟು ಬಿಡದೆ ಸುರಿತಾ ಇದ್ವು. ನಾವೆಲ್ಲ ಹೊಳೆನ ನೋಡೋಕೆ ಅಂಥಾನೆ ಕುಟುಂಬ ಸಮೇತವಾಗಿ ಹೋಗ್ತಾ ಇದ್ವಿ. ಇವತ್ತು ಹೊಳೆ ಏರ್ಯದನಾ ಮಾರಯಾ,  ಏರುದ್ರೆ ಒಳ್ಳೆದು ಮಾರೆ ಶಾಲೆಗ್ ಒಂದು  ರಜೆ ಸಿಕ್ತದೆ. ಇದು ಮಳೆಗಾಲದಲ್ಲಿ ನಮಗೆ ಅತಿ ಹೆಚ್ಚು ಖುಷಿ ಕೊಡ್ತಾ ಇದ್ದಿದ್ದು. ರಜೆ ಸಿಕ್ತಾದ ಮೀನು ಹಿಡಿಯೋದು, ನಟ್ಟಿ ಟೈಮ್​ಲ್ಲಿ ಗದ್ದೆಗೆ ಸಸಿ ಹಾಕೋದು, ಹೂಟಿ ಮಾಡ್ತಾ ಟೆಲ್ಲರ್​ ಹೊಡಿಯೋದು, ಆ ಖುಷಿನೇ ಬೇರೆ. ಆದ್ರೆ ಕೆಲಸದ ಒತ್ತಡದಿಂದ ಈಗ ಯಾವ್ದಕ್ಕೂ ಟೈಮ್​ ಕೋಡೋಕೆ ಆಗಲ್ಲ ಅನ್ನೋದೆ ಬೇಜಾರು.

malenadu : ಗದ್ದೆಯಲ್ಲಿ ಹೂಟಿ ಹೊಡೆಯುತ್ತಿರುವ ಟಿಲ್ಲರ್
malenadu : ಗದ್ದೆಯಲ್ಲಿ ಹೂಟಿ ಹೊಡೆಯುತ್ತಿರುವ ಟಿಲ್ಲರ್

malenadu : ಮಳೆಗಾಲದಲ್ಲಿ  ಮಲೆನಾಡಲ್ಲಿ ಸಿಗುವ ನೈಸರ್ಗಿಕ ಆಹಾರಗಳು

ಮಳೆಗಾಲ ಶುರುವಾಗಿ ಒಂದು ಗುಡುಗು ಬಂತು ಅಂದ್ರೆ ಬ್ಯಾಣದಲ್ಲಿ ( ಕಾಡು) ಹೆಗ್ಗಾಲು ಅಣಬೆ. ನುಚ್ಚು ಅಣಬೆ, ಹೈಗನ ಅಣಬೆ,  ಕಲ್ಲುಅಣಬೆ,   ಎಣ್ಣೆ ಅಣಬೆ,  ಕಾಸುರ್ಕನ ಅಣಬೆ,  ಮಾವಿನ ಅಣಬೆ ಹೀಗೆ ಹಲವಾರು ವಿಧದ ಅಣಬೆಗಳು ಕಾಣ ಸಿಗುತ್ತವೆ. ಈ ಸಂದರ್ಭದಲ್ಲಿ ಬ್ಯಾಣದ್​  ತುಂಬಾ ನಮ್ಗೆ  ಅಣಬೆ ಹುಡುಕೋದೆ ಕೆಲ್ಸಾ. ಇದ್ರು ನಡುವೆ ಕಳಲೆ ಕೂಡಾ ಒಂದು, ಬಿದಿರಿನ ಚಿಗುರನ್ನು ನಾವು ಕಳಲೆ ಎನ್ನುತ್ತೇವೆ. ಇದನ್ನ ತಂದು ಸಣ್ಣಗೆ ಕೊಚ್ಚಿ  3 ದಿನ ನೆನೆ ಹಾಕ್ತಾರೆ, ಯಾಕೆಂದರೆ ನೆನೆಸದೇ ಇದ್ದರೆ ಕಹಿ ಹೆಚ್ಚಿರುತ್ತದೆ, ಅದನ್ನು ತಿನ್ನಲಾಗುವುದಿಲ್ಲ, ನಂತರ ಅದನ್ನು ತೆಗೆದು  ಸಾಂಬಾರ್​ ಮಾಡ್ತಾರೆ. ನಂತರ ಕಾರೇಡಿ, ಬೆಲ್ಲೇಡಿ (ಏಡಿ) ಕೆಸುವಿನ ಸೊಪ್ಪು, ಹಲಸಿನ ಸೊಳೆ, ಹಪ್ಪಳ, ಮಾವಿನ ಗೊಜ್ಜು ಸೇರಿದಂತೆ ಇತರೆ ಆಹಾರ ಆರೋಗ್ಯಕರ ಆಹಾರ ಪದಾರ್ಥಗಳು ಮಲೆನಾಡು ಭಾಗದಲ್ಲಿ ಕಾಣ ಸಿಗುತ್ತವೆ. ಇವೆಲ್ಲಾ ಆಹಾರ ಪದಾರ್ಥಗಳು ಅಂಗಡಿಗಳಲ್ಲಿ ಸಿಗುವಂತಹ ಕೆಲವು ಕಲಬೆರೆಕೆ ಆಹಾರ ಪದಾರ್ಥಗಳಿಂತ ಆರೋಗ್ಯಕ್ಕೆ ಎಷ್ಟೋ ಉತ್ತಮ ಎಂದು ಹೇಳಬಹುದು.

malenadu: ಮಳೆಗಾಲದಲ್ಲಿ ಸಿಗುವ ಆಹಾರ ಪದಾರ್ಥಗಳು
malenadu: ಮಳೆಗಾಲದಲ್ಲಿ ಸಿಗುವ ಆಹಾರ ಪದಾರ್ಥಗಳು

ಒಟ್ಟಾರೆಯಾಗಿ ಮಲೆನಾಡು ಎಂದರೆ ಎಲ್ಲರಿಗೂ ಎನೋ ಒಂಥರಾ ಖುಷಿ. ಅಲ್ಲಿನ ಜನ ಜೀವನ, ಅಲ್ಲಿನ ವಾತಾವರಣ ,ಆಹಾರ ಪದ್ದತಿ ಸೇರಿದಂತೆ ಎಲ್ಲವೂ ಸಹ ಮನಸ್ಸಿಗೆ ಖುಷಿ ಕೊಡುತ್ತಿತ್ತು, ಆದರೆ ಅದು ಒಂದು ಕಾಲದಲ್ಲಿ ಮಾತ್ರ. ಆದರೆ ಇಂದಿನ ದಿನಗಳಲ್ಲಿ ಆ ಖುಷಿಗಳು ಕಣ್ಮರೆಯಾಗುತ್ತಿವೆ. ಆಗ ಸರಿಯಾಗಿ 4 ತಿಂಗಳುಗಳ ಕಾಲ ಸುರಿಯುತ್ತಿದ್ದ ಮಳೆ ಈಗ ಅವಧಿಗೂ ಮೊದಲೇ ಬರುತ್ತಿದೆ. ಬೇಸಿಗೆಗಾಲ ಯಾವುದು ಮಳೆಗಾಲ ಯಾವುದೂ ಒಂದೂ ಗೊತ್ತಾಗುವುದಿಲ್ಲ. ಆದ್ದರಿಂದ ಎಲ್ಲರೂ ಸಹ ಪ್ರಕೃತಿಯೊಡನೆ ಬೆರೆತು ಅದನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರೆ. ಮಲೆನಾಡ ನೈಸರ್ಗಿಕ ಸೌಂದರ್ಯವು ಇನ್ನು ಮುಂದೆಯೂ  ಹಾಗೆಯೇ ಉಳಿಯುತ್ತದೆ ಎಂಬುದು ಎಷ್ಟೋ ಜನರ ಅಭಿಪ್ರಾಯ.

ವರದಿ : ಗಬಡಿ ಪ್ರತಾಪ

 

 

TAGGED:
Share This Article