SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 19, 2024
ಇತಿಹಾಸ ಸೃಷ್ಟಿಸಿದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ- ಹೆಣ್ಣು ಮಕ್ಳೆ ಸ್ಟ್ರಾಂಗು ಗುರು ಎಂದು ಸಾರಿದ ಹಬ್ಬದ ವೈಭವ-ಜೆಪಿ ಬರೆಯುತ್ತಾರೆ
ಗಣಪತಿ ಹಬ್ಬದಲ್ಲಿ ಅತಿಹೆಚ್ಚು ಗಮನ ಸೆಳೆಯುವ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಈ ಬಾರಿ ಚರಿತ್ರೆಯ ಪುಟಗಳಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಿದೆ. ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಈ ಹಿಂದೆಲ್ಲಾ ಗಂಡು ಮಕ್ಕಳೇ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದು ಕಷ್ಟವಾಗುತ್ತಿತ್ತು. ಗಣಪತಿ ಮೆರವಣಿಗೆಗೆ ಹೋಗುತ್ತೇನೆ ಎಂದರೆ ಮನೆಯಲ್ಲಿ ಬಿದ್ದಿರು ಎಲ್ಲೂಬೇಡ ಅಂತಾ ಪೋಷಕರೇ ಮೂಗು ಮುರಿಯುವ ಸನ್ನಿವೇಶಗಳಿದ್ದವು. ಅಂತಹ ಸನ್ನಿವೇಶಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದು ಇದೆ.
ಆಗೆಲ್ಲಾ ಅಂತಹದ್ದೊಂದು ವಾತಾವರಣ ಇತ್ತು, ಮೆರವಣಿಗೆಯಲ್ಲಿ ನಡೆಯುವ ಅಹಿತಕರ ಘಟನೆಗಳು ಶಿವಮೊಗ್ಗ ಜಿಲ್ಲೆಯ ಶಾಂತಿಯನ್ನೇ ಕಸಿದುಕೊಳ್ಳುತ್ತಿತ್ತು. ತಿಂಗಳುಗಟ್ಟಲೆ ಕರ್ಫ್ಯೂ ಸೆಕ್ಷನ್ ಗಳಿಂದ ಜನರ ಬದುಕೇ ದುಸ್ತರವಾಗುತ್ತಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಹಿಂದೂ ಮಹಾಸಭಾ ಗಣಪತಿ ತನ್ನ ರೂಪವನ್ನೆ ಬದಲಿಸಿಕೊಂಡಿದೆ. ಟೆನ್ಸ್ ಇದೆ ಗುರು ಎನ್ನುತ್ತಿದ್ದ ಜನರೆಲ್ಲಾ, ಬಾ ಗುರು ಸ್ಟೆಪ್ ಹಾಕಣ, ಶಿವಮೊಗ್ಗ ಹಬ್ಬ ಮಾಡಣ ಎನ್ನುವಂತಹ ವಾತಾವರಣವನ್ನ ಸ್ವತಃ ವಿಘ್ನ ನಿವಾರಕನೇ ಸಷ್ಟಿಸಿದಂತಿದೆ.
ಈ ಸಲದ ಮೆರೆವಣಿಗೆಯಂತು ಜನ ಸಾಗರದ ಮೆರವಣಿಗೆಯಾಗಿತ್ತು. ಎಲ್ಲದಕ್ಕಿಂತಹ ವಿಶೇಷವಾಗಿ ಮನೆ ಮನೆ ಗೃಹಲಕ್ಷ್ಮೀಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ಅಷ್ಟೆಅಲ್ಲದೆ ಮೆರವಣಿಗೆಯುದ್ದಕ್ಕೂ ಹೆಜ್ಜೆ ಹಾಕುತ್ತಾ ಗಣಪತಿಯ ಉತ್ಸವಕ್ಕೆ ಮೆರುಗು ನೀಡಿದ್ದರು. ಸಾವಿರ ಸಾವರಿ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಸಂತೋಷದಿಂದ ರಾಜಬೀದಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಎಲ್ಲರ ಮೊಗದಲ್ಲಿ ಸಂತೋಷ ಸಂಭ್ರಮ ಮನೆಮಾಡಿತ್ತು. ಎಲ್ಲಿಯು ಯಾರಲ್ಲೂ ಸಣ್ಣದೊಂದು ದುಗುಡ ಸಹ ಕಾಣಸಿಗಲಿಲ್ಲ.
ಎಸ್ ಆರ್ ಎಸ್ ಸಂಸ್ಥೆಯ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಯುವ ಸಮೂಹ
ವಿಶೇಷ ಅಂದರೆ ಗಣಪತಿ ಗಾಂಧಿ ಬಜಾರ್ ದಾಟಿದ ಬಳಿಕವೇ ಜನ ಸಾಗರದ ಅಸಲಿ ಸಂಭ್ರಮ ಹೊರಬಿದ್ದಿದ್ದು ಕೇಸರಿ ಪೇಟ, ಶಾಲುಗಳ ಹೊದ್ದು ಗುಂಪು ಗೂಡಿ ಕುಣಿಯುತ್ತಿದ್ದ ಜನರಿಗೆ ಗೋಪಿ ಸರ್ಕಲ್‌ನ ಡಿಜೆ ಸಖತ್ ಮೂಡ್ ಕೊಟ್ಟಿತ್ತು. ಗಣಪತಿಗೆ ಸಂಬಂಧಿಸಿದ ವೆಸ್ಟ್ರರ್ನ್ ಮ್ಯೂಸಿಕ್ ಮಿಶ್ರಿತ ಡಿಜೆ ಹಾಡುಗಳಿಗೆ ಯುವಕ ಯುವತಿಯರು ಕುಣಿದು ಕುಪ್ಪಳಿಸಿದರು. ಯಾರಲ್ಲೂ ದಣಿವು ಎಂಬುದೇ ಕಾಣಲಿಲ್ಲ. ಇದಕ್ಕೆ ಕಾರಣವಾಗಿದ್ದು ಶಿವಮೊಗ್ಗದ ಉತ್ಸಾಹಿ ಯುವಕರ ತಂಡ. ಶಾಮಿಯಾನ, ಡಾನ್ಸ್, ಕ್ಯಾಟರಿಂಗ್,ಸೌಂಡ್ ಸಿಸ್ಟಮ್ ನಲ್ಲಿ ಗುರುತಿಸಿಕೊಂಡಿರುವ ಯುವಕರ ತಂಡ ಕಳೆದ ಮೂರು ವರ್ಷಗಳಿಂದ ಶಿವಮೊಗ್ಗದ ಗೋಪಿ ವೃತ್ತದಲ್ಲಿ ಡಿಜೆ ಸೌಂಡ್ಸ್ ವ್ಯವಸ್ಥೆಯನ್ನು ಮಾಡುತ್ತಿದೆ. ಡಿಜೆಯಿಂದಾಗಿ ಯುವ ಸಮೂಹ ಉಲ್ಲಾಸದ ಜೋಷ್ ನಲ್ಲಿಯೇ ಹೆಜ್ಜೆ ಹಾಕುತ್ತದೆ.ಈ ಬಾರಿಯಂತೂ ಗಣೇಶ ಮೆರವಣಿಗೆ ಗೋಪಿ ವೃತ್ತ ತಲುಪುವುದು ವಿಳಂಬವಾದರೂ ಹೆಣ್ಣು ಮಕ್ಕಳು ಅಲುಗಾಡದೆ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಹಬ್ಬದ ವಾತಾವರಣಕ್ಕೆ ತೆರೆದುಕೊಂಡ ಕುವೆಂಪು ರಸ್ತೆ
ಗಣಪತಿ ಮೆರವಣಿಗೆ ಹಿನ್ನೆಲೆಯಲ್ಲಿ ಕುವೆಂಪು ರಸ್ತೆಯಲ್ಲಿ ಮಧ್ಯರಾತ್ರಿ12 ಗಂಟೆಯವರೆಗೂ ಜನರ ಜಾತ್ರೆ ನೆರೆದಿತ್ತು. ನಂಜಪ್ಪ ಆಸ್ಪತ್ರೆ ಮತ್ತು ಮ್ಯಾಕ್ಸ್ ಆಸ್ಪತ್ರೆ ಬಳಿ ಆಯೋಜಿಸಿದ್ದ ಹುಲಿವೇಶ, ಡ್ರಮ್ಸ್ ಕಲಾತಂಡಗಳು ಜನರಿಗೆ ಮನೋರಂಜನೆ ನೀಡಿದವು. ಕುವೆಂಪು ರಸ್ತೆಯಲ್ಲಿ ಮಾಜಿ ಶಾಸಕ ರುದ್ರೆಗೌಡರು ಆಯೋಜಿಸಿದ್ದ ಉಪಾಹಾರ ಸೇವೆ, ಜನರಿಗೆ ಹಸಿವು ನೀಗಿಸಿತ್ತಷ್ಟೆ ಅಲ್ಲದೆ ನಾಲಿಗೆ ರುಚಿಯನ್ನ ಸಹ ಹೆಚ್ಚಿಸಿತ್ತು. ಮಧ್ಯರಾತ್ರಿ 12.50 ಸುಮಾರಿಗೆ ಗಣಪತಿಮೂರ್ತಿ ಕುವೆಂಪು ರಸ್ತೆ ಪ್ರವೇಶವಾಗುತ್ತಿದ್ದಂತೆ ಜನರು ಆರತಿಯನ್ನು ಬೆಳಗಿದರು. ಪೂಜೆಯನ್ನು ನೆರವೇರಿಸಿದರು.
ಪೊಲೀಸ್ ಇಲಾಖೆಯ ಅವಿರತ ಶ್ರಮ
ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನೆರವೇರಿಸಬೇಕೆಂದು ಹಲವು ತಿಂಗಳಿಂದ ಪೂರ್ವ ತಯಾರಿ ಮಾಡಿಕೊಂಡಿದ್ದ ಶಿವಮೊಗ್ಗ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಶ್ರಮ ಕೊನೆಗೂ ಫಲ ನೀಡಿದೆ. ಗಣಪತಿ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ವಿಶೇಷವಾಗಿ ಈ ಬಾರಿ ಮೆರವಣಿಗೆಯನ್ನು ಪುಶ್ ಮಾಡುವ ಪೊಲೀಸ್ ವ್ಯವಸ್ಥೆ ಇರಲಿಲ್ಲ. ಎಸ್ಪಿ ಮಿಥುನ್ ಕುಮಾರ್ ಮೆರವಣಿಗೆಯಲ್ಲಿನ ಕಠಿಣತೆಯನ್ನು ಸರಳೀಕರಣಗೊಳಿಸಿದ್ದರು. ಜನರು ಎಷ್ಟು ಹೊತ್ತು ಕುಣಿದು ಕುಪ್ಪಳಿಸುತ್ತಾರೋ ಅಲ್ಲಿಯವರೆಗೂ ಭದ್ರತೆಯನ್ನ ನೋಡಿಕೊಳ್ಳುವ ಹೊಣೆಗಾರಿಕೆ ಹೊತ್ತಿದ್ದರು. ಪೊಲೀಸರು ಸಾರ್ವಜನಿಕರ ಜೊತೆ ಅತ್ಯಂತ ಸಂಯಮದಿಂದ ನಡೆದುಕೊಂಡರು. 48 ಗಂಟೆ ಶಿವಮೊಗ್ಗದ ಶಾಂತಿ ನೆಮ್ಮದಿಗೆ ಟೊಂಕಕಟ್ಟಿ ನಿಂತ ಪೊಲೀಸರ ಶ್ರಮಕ್ಕೆ ಶಿವಮೊಗ್ಗ ಜನತೆ ಹ್ಯಾಟ್ಸ್ ಹಾಫ್ ಹೇಳಿದ್ದಾರೆ.
ನಗರದ ಹೊರವಲಯದಲ್ಲಿ ನಾಕಾಬಂಧಿ
ಶಿವಮೊಗ್ಗದ ಮೆರವಣಿಗೆ ಶಾಂತಿಯುತವಾಗಿ ನಡೆಯಲು ಮತ್ತೊಂದು ಕಾರಣ ಹೊರ ಊರಿನವರಿಗೆ ಪುರ ಪ್ರವೇಶ ಮಾಡದಂತೆ ಎಚ್ಚರಿಕೆ ವಹಿಸಲಾಗಿತ್ತು. ಮೆರವಣಿಗೆಯಲ್ಲಿ ಯಾವುದೇ ಅನಾಹುತ ಆಗದಂತೆ ಹೇಗೆ ಎಚ್ಚರವಹಿಸಲಾಗಿತ್ತೋ ಅದರ ಎರಡು ಪಟ್ಟು ನಗರದ ಹೊರವಲಯದಲ್ಲಿ ಪೊಲೀಸರರು ಹದ್ದಿನ ಕಣ್ಣಿಟ್ಟು ಕೆಲಸ ಮಾಡಿದ್ದಾರೆ. ವಿಶೇಷವಾಗಿ ತುಂಗಾ ನಗರ, ಶಿವಮೊಗ್ಗ ಗ್ರಾಮಾಂತರ, ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಗಡಿ ಪ್ರದೇಶದಲ್ಲಿ ಗಸ್ತು ಹೆಚ್ಚಿಸಲಾಗಿತ್ತು.
ನಗರದ ಹೊರವಲಯದಲ್ಲಿ ನಾಕಾ ಬಂಧಿಯನ್ನು ಹಾಕಿ ವಾಹನ ತಪಾಸಣೆಯನ್ನು ಮಾಡಲಾಗಿತ್ತು. ಅನುಮಾನಸ್ಪದ ವ್ಯಕ್ತಿಗಳನ್ನು ವಿಚಾರಣೆ ಮಾಡಿ, ಬೈಕ್ ನಂಬರ್ ಗಳನ್ನು ದಾಖಲು ಮಾಡಿ ಮೊದಲೇ ಎಚ್ಚರಿಕೆ ನೀಡಿ ಕಳುಹಿಸಲಾಗುತ್ತಿತ್ತು. ಶಿವಮೊಗ್ಗದ ಹಬ್ಬದಲ್ಲಿ ಶಿವಮೊಗ್ಗ ಹಾಗು ಶಿವಮೊಗ್ಗ ಗ್ರಾಮಾಂತರ ಭಾಗದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕ್ರಿಮಿನಲ್ ಹಿನ್ನಲೆ ಉಳ್ಳವರು ಮೊದಲೇ ಊರು ಬಿಟ್ಟಿದ್ದರಿಂದ ನಗರದಲ್ಲಿ ಶಾಂತಿಯುತವಾಗಿ ಮೆರವಣಿಗೆ ನೆರವೇರಲು ಕಾರಣವಾಯಿತು., ಶಾಂತಿಯುತ ಮೆರವಣಿಗೆಗೆ ಸಹಕರಿಸಿದ ಜನತೆಗೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಹಾಗು ಮಾಧ್ಯಮಗಳಿಗೆ ಎಸ್ಪಿ ಮಿಥುನ್ ಕುಮಾರ್ ಧನ್ಯವಾದಗಳನ್ನು ತಿಳಿಸಿದ್ದಾರೆ.
ರಾತ್ರೋರಾತ್ರಿ ನಗರ ಶುದ್ಧಿಕರಿಸಿದ ಪೌರ ಕಾರ್ಮಿಕರಿಗೆ ಅಭಿನಂದನೆಗಳು
ಹೌದು ಇಲ್ಲಿ ಎಲ್ಲರಿಗಿಂತಲೂ ಮೊದಲು ಅಭಿನಂದನೆ ತಿಳಿಸಬೇಕೆಂದರೆ ಅದನ್ನು ಮೊದಲು ನಗರ ಪೌರಕಾರ್ಮಿಕರಿಗೆ ತಿಳಿಸಬೇಕಾಗುತ್ತದೆ. ಮಲೆನಾಡು ಟುಡೆ ಕಡೆಯಿಂದ ಪೌರಕಾರ್ಮಿಕರಿಗೊಂದು ಸಲಾಮ್. ಶಿವಮೊಗ್ಗದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಮೆರವಣಿಗೆಯು ಸಾಗಿ ಹೋದ ಹಾದಿಯಲ್ಲಿ ರಾಶಿ ರಾಶಿ ತ್ಯಾಜ್ಯ ಬಿದ್ದಿತ್ತು.
ಊಟದ ತಟ್ಟೆಗಳು ಪ್ಲಾಸ್ಟಿಕ್ ಬಾಟಲಿ, ನೀರಿನ ಪೋಚ್ ಗಳು, ಗುಟ್ಕಾ ಪಾಕೆಟ್ ಗಳು ರಸ್ತೆಯಲ್ಲಿ ಎಲ್ಲಂದರಲ್ಲಿ ಬಿದ್ದಿತ್ತು. ಮೆರವಣಿಗೆ ಸಾಗಿದ ಮಾರ್ಗದಲ್ಲಿಯೇ ತಕ್ಷಣ ಕಾರ್ಯಪ್ರವೃತ್ತರಾದ ಪೌರ ಕಾರ್ಮಿಕರು ರಸ್ತೆಯನ್ನು ಶುಚಿಗೊಳಿಸುವ ಕಾರ್ಯಕ್ಕೆ ಅಣಿಯಾದ್ರು. ರಾತ್ರಿ ಬೆಳಗಾಗುವುದರೊಳಗೆ ಶಿವಮೊಗ್ಗ ನಗರವನ್ನು ಸಂಪೂರ್ಣ ಶುಚಿ ಗೊಳಿಸಿದ್ದರು. ಅವರ ಶ್ರಮಕ್ಕೆ ದೊಡ್ಡ ಥ್ಯಾಂಕ್ಸ್ ಹೇಳಲೆಬೇಕು
ಒಟ್ಟಿನಲ್ಲಿ ಭಯದ ಗಣೇಶ ಮರೆಯಾದ,,ಸಂತಸದ ಗಣೇಶ ಮನೆ ಮಾಡಿದ ಎಂದು ಜನರು ಮಾತನಾಡಿಕೊಳ್ಳುತ್ತಾ ಮನೆ ಸೇರಿದಾಗ ಬೆಳಿಗ್ಗೆ ಮೂರು ಗಂಟೆಯಾಗಿತ್ತು. ಆಗಲೇ ಗಣೇಶ ಚರಿತ್ರೆಯ ಪುಟಗಳಲ್ಲಿ ದಾಖಲೆಯನ್ನು ಬರೆದು ಹೊಸ ಮೈಲುಗಲ್ಲನ್ನು ನೆಟ್ಟಿಯಾಗಿತ್ತು.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ