ಯಡವಾಲ ಶಿವಮೊಗ್ಗ: ಸಹೋದರಿ ಮನೆಗೆ ಹೋಗಿದ್ದಾಗ ದುರಂತ; ಕೃಷಿ ಹೊಂಡದಲ್ಲಿ ಮುಳುಗಿ 2 ಯುವಕರ ಮೃತ್ಯು
ಶಿವಮೊಗ್ಗ: ಯಡವಾಲ ಗ್ರಾಮದಲ್ಲಿ ಸಹೋದರಿಯ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ದಾರುಣ ಘಟನೆಯಲ್ಲಿ ಇಬ್ಬರು ಯುವಕರು ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಮೃತರನ್ನು ಯಡವಾಲ ಗ್ರಾಮದ ಕುಮಾರನಾಯ್ಕ ಅವರ ಪುತ್ರ, ಬಿ.ಕಾಂ ವಿದ್ಯಾರ್ಥಿ ಗೌತಮ್ (22) ಹಾಗೂ ಶಿವಮೊಗ್ಗದ ಕುಂಬಾರಗುಂಡಿ ಚೌಡಮ್ಮನ ದೇವಸ್ಥಾನ ಸಮೀಪದ ನಿವಾಸಿ ವಿಜಯ್ ಅವರ ಪುತ್ರ ಚಿರಂಜೀವಿ (22) ಎಂದು ಗುರುತಿಸಲಾಗಿದೆ.
ಸಹೋದರಿ ಭೇಟಿಯ ಸಂಭ್ರಮದಲ್ಲಿ ದುರಂತ: ಗೌತಮ್ ಅವರ ಸಹೋದರಿಗೆ ಇತ್ತೀಚೆಗೆ ಹೆರಿಗೆಯಾಗಿತ್ತು. ಈ ಶುಭ ಸಂದರ್ಭದಲ್ಲಿ ತಾಯಿ ಮತ್ತು ಮಗುವನ್ನು ನೋಡಲು ಆತ ತನ್ನ ಸ್ನೇಹಿತ ಚಿರಂಜೀವಿ ಸೇರಿದಂತೆ ಎಂಟು ಮಂದಿ ಗೆಳೆಯರು ಜೊತೆಗೆ ಶನಿವಾರ ಸಂಜೆ ಶಿವಮೊಗ್ಗದ ಸೀಗೆಹಟ್ಟಿಯಿಂದ ಯಡವಾಲ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳಿದ್ದರು. ಸಹೋದರಿಯ ಮನೆಗೆ ಭೇಟಿ ನೀಡಿದ ನಂತರ, ಎಲ್ಲರೂ ಗೌತಮ್ ಅವರ ತೋಟದ ಮನೆಗೆ ತೆರಳಿ ಅಲ್ಲಿ ಪಾರ್ಟಿ ಆಯೋಜಿಸಿದ್ದರು.

ಅಲ್ಲಿಯೇ ಅಡುಗೆ ಮಾಡಿಕೊಂಡು, ಸ್ನೇಹಿತರೆಲ್ಲ ಸೇರಿ ಮದ್ಯಪಾನ ಮಾಡಿದ್ದರು. ರಾತ್ರಿ ಸುಮಾರು 3 ಗಂಟೆ ಸುಮಾರಿಗೆ, ಚಿರಂಜೀವಿ ಬಹಿರ್ದೆಸೆಗೆಂದು ಹೊರಗೆ ಹೋಗಲು ಮುಂದಾಗಿದ್ದು, ಗೌತಮ್ ಆತನ ಜೊತೆ ಹೋಗಿದ್ದಾನೆ. ಅಲ್ಲಿ ಗೌತಮ್ ಚಿಕ್ಕಪ್ಪನ ಜಮೀನಿನಲ್ಲಿದ್ದ ಕೃಷಿ ಹೊಂಡದಿಂದ ನೀರು ತೆಗೆದುಕೊಳ್ಳುವಾಗ ಚಿರಂಜೀವಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಅವನನ್ನು ರಕ್ಷಿಸಲು ಪ್ರಯತ್ನಿಸಿದ ಗೌತಮ್ ಕೂಡ ನೀರಿನಲ್ಲಿ ಮುಳುಗಿದ್ದಾನೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.

ನಿನ್ನೆ ರಾತ್ರಿ ಘಟನೆ ನಡೆದಿದ್ದು, ಭಾನುವಾರ ಬೆಳಿಗ್ಗೆ ಕುಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ನೆರವಿನಿಂದ ಇಬ್ಬರು ಯುವಕರ ಶವಗಳನ್ನು ಕೃಷಿ ಹೊಂಡದಿಂದ ಮೇಲೆ ತೆಗೆಯಲಾಯಿತು. ಮೃತರ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ಈ ದುರ್ಘಟನೆ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ