Traffic jam : ಶಿವಮೊಗ್ಗ: ನಗರದ ಗುಡ್ಡೇಕಲ್ ಹರೋಹರ ಆಡಿಕೃತ್ತಿಕೆ ಜಾತ್ರಾ ಮಹೋತ್ಸವವು ಇಂದು ಅದ್ದೂರಿಯಾಗಿ ನಡೆಯುತ್ತಿದ್ದು, ದೇವರ ದರ್ಶನ ಪಡೆಯಲು ನಾನಾ ಕಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಹೊಳೆ ಬಸ್ಟಾಪ್ ಸುತ್ತಾಮುತ್ತ ಭಾರೀ ಟ್ರಾಫಿಕ್ ದಟ್ಟಣೆ ಉಂಟಾಗಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ತೀವ್ರ ಪರದಾಡುವಂತಾಯಿತು.
ಮಧ್ಯಾಹ್ನದ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಮೀನಾಕ್ಷಿ ಭವನದಿಂದ ಹೊಳೆ ಬಸ್ ಸ್ಟಾಪ್, ವಿದ್ಯಾನಗರ ಮತ್ತು ಚಿಕ್ಕಲು ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಈ ಹಿಂದೆ ಪೊಲೀಸರು ಜಾತ್ರೆಯ ಹಿನ್ನೆಲೆ ಸಂಚಾರ ಮಾರ್ಗ ಬದಲಾವಣೆ ಕುರಿತು ಮಾಹಿತಿ ನೀಡಿದ್ದರೂ, ಈ ಪ್ರಮಾಣದ ದಟ್ಟಣೆ ಉಂಟಾಗಿರುವುದು ಆಶ್ಚರ್ಯ ತಂದಿದೆ. ಇದು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಕೊರತೆಯಿಂದ ಆಗಿದೆಯೋ ಅಥವಾ ಸಂಚಾರಿ ಪೊಲೀಸರು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳದ ಕಾರಣದಿಂದ ಉಂಟಾಗಿದೆಯೋ ಎಂಬ ಪ್ರಶ್ನೆಗಳು ಎದ್ದಿವೆ.
ತುಂಗಾ ಸೇತುವೆಯಲ್ಲಿ ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸೇತುವೆಯಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ತುರ್ತು ಸಂದರ್ಭಗಳಲ್ಲಿ ಬಳಸುವ ಆಂಬ್ಯುಲೆನ್ಸ್ ಕೂಡ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದು, ಜನರ ಆಕ್ರೋಶಕ್ಕೆ ಕಾರಣವಾಯಿತು.
ಟ್ರಾಫಿಕ್ ಜಾಮ್ ಉಂಟಾಗಿರುವುದು ಸಂಚಾರಿ ಪೊಲೀಸರ ಪೂರ್ವ ಸಿದ್ಧತೆಯ ಲೋಪವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಇಂತಹ ಪರಿಸ್ಥಿತಿ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Traffic jam

