Thirthahalli theft case : ತೀರ್ಥಹಳ್ಳಿ ತಾಲೂಕಿನ ಬಾಳೆಬೈಲಿನಲ್ಲಿರುವ ನ್ಯಾಷನಲ್ ಸೂಪರ್ ಮಾರ್ಕೆಟ್ ಒಂದರಲ್ಲಿ ಕಳ್ಳತನ ನಡೆದಿದ್ದು,ಕಳ್ಳರು ನಗದು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ದೋಚಿದ್ದಾರೆ.
ಆಗಸ್ಟ್ 22ರಂದು ರಾತ್ರಿ ವ್ಯಾಪಾರ ಮುಗಿಸಿ ಮಾಲೀಕರು ಮಾರ್ಕೆಟ್‌ನ ಬಾಗಿಲು ಹಾಕಿ ಹೋಗಿದ್ದರು. ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಕಳ್ಳರು ಅಂಗಡಿಯ ಶಟರ್ ಬಾಗಿಲನ್ನು ಬಗ್ಗಿಸಿ, ಬೀಗ ಒಡೆದು ಒಳಗೆ ನುಗ್ಗಿದ್ದಾರೆ.ಮೊದಲಿಗೆ, ಅವರು ಅಂಗಡಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ನಂತರ, ಸಿಸಿಟಿವಿ ಕ್ಯಾಮರಾಗಳ ಸಂಪರ್ಕವನ್ನು ಕತ್ತರಿಸಿ, ಸುಮಾರು ₹65,000 ಮೌಲ್ಯದ ಡಿವಿಆರ್ ಅನ್ನು ಕದ್ದೊಯ್ದಿದ್ದಾರೆ.
ಅಷ್ಟೇ ಅಲ್ಲದೆ ಅಂಗಡಿಯಲ್ಲಿದ್ದ ಹಣವನ್ನು ಕೂಡ ದೋಚಿದ್ದಾರೆ. ಇದೇ ಮಾರ್ಕೆಟ್‌ನಲ್ಲಿ ಕರಣಾಪುರ ಗ್ರಾಮದ ವೀರಕಲ್ಲುಕುಟಿಕ ದೇವಸ್ಥಾನದ ಹುಂಡಿಯನ್ನು ಇಡಲಾಗಿತ್ತು. ಆ ಹುಂಡಿಯಲ್ಲಿ ಭಕ್ತರು ಸಂಗ್ರಹಿಸಿದ್ದ ಸುಮಾರು ₹50,000 ಹಣವನ್ನು ಕಳ್ಳತನ ಮಾಡಲಾಗಿದೆ ಎಂದು ಮಾಲೀಕರು ಆರೋಪಿಸಿದ್ದಾರೆ.
ಈ ಹಿನ್ನೆಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕಳುವಾದ ಒಟ್ಟು 1.15 ಲಕ್ಷ ರೂಪಾಯಿಗಳನ್ನು ಹುಡುಕಿಕೊಡುವಂತೆ ಪ್ರಕರಣವನ್ನು ದಾಖಲಿಸಲಾಗಿದೆ.