Street Dog Attack : ಹಾಸನ : ಜಾತಿಗಣತಿಗೆ ಬಂದಿದ್ದ ಶಿಕ್ಷಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಇದರಿಂದಾಗಿ ಮಹಿಳೆ ಗಂಭಿರವಾಗಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆ, ಬೇಲೂರು ಪಟ್ಟಣದ ಜೈಭೀಮ್ ನಗರದಲ್ಲಿ ನಡೆದಿದೆ. ಚಿಕ್ಕಮ್ಮ ಗಾಯಗೊಂಡಿರುವ ಮಹಿಳೆ.
ಬೇಲೂರು ಪಟ್ಟಣದ ಜಿಎಚ್‌ಪಿಎಸ್ ಶಾಲೆಯ ಶಿಕ್ಷಕಿಯಾಗಿರುವ ಚಿಕ್ಕಮ್ಮ ಅವರು, ತಮ್ಮ ಪತಿ ಶಿವಕುಮಾರ್ ಅವರ ಜೊತೆಗೆ ನವೀನ್ ಎಂಬುವವರ ಮನೆಗೆ ಜಾತಿ ಗಣತಿ ಕಾರ್ಯಕ್ಕಾಗಿ ತೆರಳಿದ್ದರು. ಈ ವೇಳೆ ಇದ್ದಕ್ಕಿದ್ದಂತೆ 10ಕ್ಕೂ ಹೆಚ್ಚು ಬೀದಿ ನಾಯಿಗಳು ಈ ದಂಪತಿಗಳ ಮೇಲೆ ಭೀಕರವಾಗಿ ದಾಳಿ ಮಾಡಿವೆ.ನಾಯಿಗಳ ದಾಳಿಯಿಂದ ಕಂಗೆಟ್ಟಿದ್ದ ದಂಪತಿಯ ರಕ್ಷಣೆಗೆ ಪಕ್ಕದಲ್ಲಿದ್ದ ಹಲವು ಜನರು ಧಾವಿಸಿದಾಗ, ನಾಯಿಗಳು ಅವರ ಮೇಲೆಯೂ ಸಹ ಮುಗಿಬಿದ್ದು ದಾಳಿ ಮಾಡಿವೆ ಎಂದು ತಿಳಿದುಬಂದಿದೆ.
ಈ ದಾಳಿಯಿಂದಾಗಿ ಶಿಕ್ಷಕಿ ಚಿಕ್ಕಮ್ಮ ಅವರ ಮುಖ, ಕೈ-ಕಾಲುಗಳು ಮತ್ತು ದೇಹದ ಹಲವು ಭಾಗಗಳಿಗೆ ತೀವ್ರ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿರುವ ಶಿಕ್ಷಕಿ ಚಿಕ್ಕಮ್ಮ ಮತ್ತು ದಾಳಿಯಿಂದ ಗಾಯಗೊಂಡಿರುವ ಇತರರಿಗೆ ಬೇಲೂರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.