ಶಿವಮೊಗ್ಗ: ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಸದಾ ಇರುತ್ತಾರೆ ಎಂಬ ಮಾತು ಪ್ರಸ್ತುತ ತಂತ್ರಜ್ಞಾನ ಮುಂದುವರಿದಿರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಿ ಸತ್ಯವಾಗುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 30 ಲಕ್ಷ ರೂಪಾಯಿ ಬಹುಮಾನದ ಆಸೆಗೆ ಬಲಿಯಾಗಿ 3,71,400 ರೂಪಾಯಿಗಳನ್ನು ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದ ನಿವಾಸಿಯಾದ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್ ಡಿಪಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ಲೋಗೋವನ್ನು ಹಾಕಿಕೊಂಡು, ತಾನು ಬ್ಯಾಂಕ್ ವ್ಯವಸ್ಥಾಪಕ (ಮ್ಯಾನೇಜರ್) ಎಂದು ಪರಿಚಯಿಸಿಕೊಂಡಿದ್ದಾನೆ. ಆತ ಸಂದೇಶ ಕಳುಹಿಸಿ, “ನೀವು 30 ಲಕ್ಷ ರೂಪಾಯಿಗಳ ಬಹುಮಾನವನ್ನು ಗೆದ್ದಿದ್ದೀರಿ” ಎಂದು ನಂಬಿಸಿದ್ದಾನೆ. ಈ ಸಂದೇಶದಿಂದ ಸಂತೋಷಗೊಂಡ ಮಹಿಳೆ ಆತನ ಮಾತನ್ನು ಸಂಪೂರ್ಣವಾಗಿ ನಂಬಿದ್ದಾರೆ. ತದನಂತರ, ಆ ಅಪರಿಚಿತ ವ್ಯಕ್ತಿ “ನಿಮ್ಮ ಖಾತೆಗೆ ಬಹುಮಾನದ ಹಣವನ್ನು ವರ್ಗಾಯಿಸಲು ಖಾತೆ ಸಂಖ್ಯೆಯನ್ನು ನೀಡಿ” ಎಂದು ಹೇಳಿ ಮಹಿಳೆಯನ್ನು ನಂಬುವಂತೆ ಮಾಡಿದ್ದಾನೆ. ಆತನ ಮಾತನ್ನು ನಂಬಿದ ಮಹಿಳೆ ತಮ್ಮ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಆತನಿಗೆ ನೀಡಿದ್ದಾರೆ.
ನಂತರ, ಆ ವಂಚಕನು ಮಹಿಳೆಗೆ, “ನಿಮ್ಮ ಖಾತೆಗೆ ಲಾಟರಿ ಹಣವನ್ನು ವರ್ಗಾವಣೆ ಮಾಡಬೇಕಾದರೆ, ಅದಕ್ಕೆ ಸರ್ವಿಸ್ ಶುಲ್ಕ (ಸರ್ವರ್ ಚಾರ್ಜ್), ತೆರಿಗೆ (ಟ್ಯಾಕ್ಸ್) ಮತ್ತು ಇತರೆ ಕಾರಣಗಳನ್ನು ನೀಡಿ” ಒಟ್ಟು 3,71,400 ರೂಪಾಯಿಗಳ ಹಣವನ್ನು ಹಂತ ಹಂತವಾಗಿ ತನ್ನ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ಈ ವಂಚನೆಗೆ ಒಳಗಾದ ಮಹಿಳೆ ತಡಮಾಡದೆ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

