ಶಿವಮೊಗ್ಗ: ಮತೀಯವಾಗಿ ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲ್ಪಟ್ಟಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ದಿಟ್ಟತನವನ್ನು ಪ್ರದರ್ಶಿಸಿದ್ದಾರೆ. ನಿರ್ದಿಷ್ಟವಾಗಿ, ಗೌರಿ-ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಜಿಲ್ಲಾ ಎಸ್ಪಿ ಮಿಥುನ್ ಕುಮಾರ್ ಅವರು ಎರಡೂ ಕೋಮುಗಳ ಮುಖಂಡರೊಂದಿಗೆ ಸಭೆ ನಡೆಸಿ, ಅವರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೌರಿ-ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಶಿವಮೊಗ್ಗದ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ಸ್‌ಪೆಕ್ಟರ್ ಗುರುರಾಜ್ ಅವರು ಹಗಲು-ರಾತ್ರಿ ಎನ್ನದೆ ಬಂದೋಬಸ್ತ್ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಸಣ್ಣ ಗಲ್ಲಿಗಳಲ್ಲಿ ನಡೆಯುವ ಗಣೇಶ ವಿಸರ್ಜನೆಯ ಮೆರವಣಿಗೆಗಳನ್ನು ಸಹ ನಿರ್ಲಕ್ಷಿಸದೆ, ಎಲ್ಲಾ ಕಡೆಗಳಲ್ಲಿ ಸೂಕ್ತ ಭದ್ರತೆಯನ್ನು ಒದಗಿಸಲಾಗಿತ್ತು.ಯಾವುದೇ ಪ್ಲೆಕ್ಸ್, ಬ್ಯಾನರ್ ಅಥವಾ ಬಂಟಿಂಗ್ಸ್‌ಗಳ ಮೇಲೆ ಘೋಷಣೆಯ ಮಾತುಗಳನ್ನು ಪ್ರಕಟಿಸುವ ಮೊದಲು ಪೊಲೀಸರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಿತ್ತು. ಪೊಲೀಸರು ಒಪ್ಪಿಗೆ ನೀಡಿದ ನಂತರವೇ ಅವುಗಳನ್ನು ಮುದ್ರಣ ಮಾಡಲು ಅವಕಾಶ ನೀಡಲಾಗಿತ್ತು. ಈ ಕಠಿಣ ಕ್ರಮವು ಜನರ ನಡುವೆ ಪ್ರಚೋದನೆ ಉಂಟಾಗುವುದನ್ನು ತಡೆಯುವಲ್ಲಿ ಸಹಾಯಕವಾಯಿತು. ಇದರ ಜೊತೆಗೆ, ಪ್ರಮುಖ ವೃತ್ತಗಳಲ್ಲಿ ಸ್ಥಾಪಿಸಲಾದ ಕಟೌಟ್‌ಗಳ ಮೇಲೆಯೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು.

ಮುಸ್ಲಿಂ ಸಮುದಾಯದ ಸಂಖ್ಯೆ ಹೆಚ್ಚಿರುವ ತುಂಗಾ ನಗರ ವ್ಯಾಪ್ತಿಯಲ್ಲಿ, ಇನ್ಸ್‌ಪೆಕ್ಟರ್ ಗುರುರಾಜ್ ಅವರ ವಿಶೇಷ ಪ್ರಯತ್ನದ ಫಲವಾಗಿ, ಗಣೇಶ ಹಬ್ಬದ ಆಚರಣೆಯಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸಿ, ಗಣೇಶನಿಗೆ ಹಾರ ಹಾಕಿ ಭಾವೈಕ್ಯತೆಯನ್ನು ಮೆರೆದರು. ಈ ಮೂಲಕ ಅವರು ಹಿಂದೂ-ಮುಸ್ಲಿಂ ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಪ್ರಾಮಾಣಿಕವಾಗಿ ಶ್ರಮಿಸಿದರು. ನೆನ್ನೆ ನಡೆದ ಸಂತೆ ಮೈದಾನ ಗಣೇಶ ವಿಸರ್ಜನೆ ಮೆರವಣಿಗೆಯಲ್ಲೂ ಮುಸ್ಲಿಂ ಬಾಂಧವರು ಗಣೇಶ ಮೂರ್ತಿಗೆ ಹಾರ ಹಾಕಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ಶಿವಮೊಗ್ಗ ಜಿಲ್ಲೆಯ ದೃಷ್ಟಿಯಿಂದ ಈ ಬೆಳವಣಿಗೆಯು ಉತ್ತಮ ಸೌಹಾರ್ದತೆಯ ಸಂಕೇತವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.