Shivamogga Cyber Crime ಸೈಬರ್ ಕ್ರೈಂ ಅನ್ನೋದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾಗಿದೆ. ಸೈಬರ್ ಕಳ್ಳರು ಕೆಲವೊಮ್ಮೆ ಮೊಬೈಲ್ನ್ನು ಹ್ಯಾಕ್ ಮಾಡುವ ಮೂಲಕ ಹಣ ಎಗರಿಸಿದರೆ. ಇನ್ನು ಕೆಲವರು ಜನರಿಗೆ ಸ್ಮೂತ್ ಆಗಿ ಮಾರ್ಕೆಟಿಂಗ್ ಮಾಡಿ ಹಣ ಹಾಕಿಸಿಕೊಳ್ಳುತ್ತಾರೆ. ಅದರಂತೆ ಶಿವಮೊಗ್ಗದಲ್ಲಿಯೂ ಸಹ ವಂಚಕರು ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 11,35,900 ಹಣವನ್ನು ವಂಚಿಸಿದ್ದಾರೆ.
ಶಿವಮೊಗ್ಗದ ಓರ್ವ ವ್ಯಕ್ತಿಯ ವಾಟ್ಸಾಪ್‌ಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಒಂದು ಲಿಂಕ್ ಕಳುಹಿಸಲಾಗಿದೆ. ಆ ಲಿಂಕ್ ಬಳಸಿ ಅವರು ಟೆಲಿಗ್ರಾಂ ಗುಂಪಿಗೆ ಸೇರಿಕೊಂಡಿದ್ದಾರೆ. ಅಲ್ಲಿ ವಂಚಕರು ದೂರುದಾರರೊಂದಿಗೆ ಮಾತನಾಡಲು ಆರಂಭಿಸಿದ್ದಾರೆ. ನಂತರ ವಂಚಕರು, ಅವರಿಗೆ ಆನ್‌ಲೈನ್‌ನಲ್ಲಿ ಹೋಟೆಲ್ ರಿವ್ಯೂ (ವಿಮರ್ಶೆ) ನೀಡುವ ಟಾಸ್ಕ್‌ಗಳನ್ನು ಕಳುಹಿಸಿದ್ದಾರೆ.ಈ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಹಂತ ಹಂತವಾಗಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸುವಂತೆ ಕೇಳಿದ್ದಾರೆ. ದೂರುದಾರರು ವಂಚಕರ ಮಾತನ್ನು ನಂಬಿ, ಐ.ಎಂ.ಪಿ.ಎಸ್., ಆರ್.ಟಿ.ಜಿ.ಎಸ್. ಮತ್ತು ಯು.ಪಿ.ಐ. ಮೂಲಕ ಹಣವನ್ನು ಹಂತ ಹಂತವಾಗಿ ವರ್ಗಾಯಿಸಿದ್ದಾರೆ.
ಹಣವನ್ನು ವರ್ಗಾವಣೆ ಮಾಡಿದ ನಂತರ, ವಂಚಕರು “ಇದು ಲಾರ್ಜರ್ ಸ್ಕೇಲ್ ಅಮೌಂಟ್ಆಗಿರುವುದರಿಂದ ಹಣವನ್ನು ವಿಥ್‌ಡ್ರಾ ಮಾಡಲು ಹೆಚ್ಚುವರಿಯಾಗಿ 6,00,000 ನೀಡಬೇಕು, ಇದಕ್ಕೆ ಒಂದು ದಿನದವರೆಗೆ ಸಮಯ ನೀಡುತ್ತೇವೆ” ಎಂದಿದ್ದಾರೆ. ಈ ರೀತಿ ಹಂತ ಹಂತವಾಗಿ ವಂಚಕರು ದೂರುದಾರರಿಂದ ಒಟ್ಟು 11,35,900 ಹಣವನ್ನು ಮೋಸದಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಆದರೆ, ಅವರಿಗೆ ಯಾವುದೇ ಲಾಭಾಂಶವನ್ನೂ ನೀಡದೆ ವಂಚಿಸಿದ್ದಾರೆ. ಎಂದು ಆರೋಪಿಸಿ ದೂರುದಾರರು ಶಿವಮೊಗ್ಗದ ಸೈಬರ್ ಸಿಇಎನ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.