Mane Manege Police ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 :ವಿವಿದ ಹಬ್ಬಗಳ ಹಿನ್ನೆಲೆಯಲ್ಲಿ ಭದ್ರತಾ ಡ್ಯೂಟಿ ಬಗ್ಗೆ ಗಮನ ಹರಿಸಿದ್ದ ಶಿವಮೊಗ್ಗ ಪೊಲೀಸ್ ಇಲಾಖೆ ಇದೀಗ ಮತ್ತೊಮ್ಮೆ ಮನೆಮನೆಗೆ ಪೊಲೀಸ್ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಭಾಗಗಳಲ್ಲಿ ಖುದ್ದು ಮನೆಗಳಿಗೆ ವಿಸಿಟ್ ನೀಡಿದ ಎಸ್ಪಿ ಮಿಥುನ್ ಕುಮಾರ್ ಸಾರ್ವಜನಿಕ ಸಭೆ ನಡೆಸಿ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ

sp mithun kumar shivamogga : ಎಸ್ಪಿ ಮಿಥುನ್ ಕುಮಾರ್ ಸೇರಿ 3 ಅಧಿಕಾರಿಗಳಿಗೆ ಬಿಗ್ ಅವಾರ್ಡ್!
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುರಲೆ ಸಿದ್ದೇಶ್ವರ ಸಮುದಾಯ ಭವನದಲ್ಲಿ ‘ಮನೆ ಮನೆಗೆ ಪೊಲೀಸ್’ ಯೋಜನೆಯಡಿ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಪಾಲ್ಗೊಂಡ ಎಸ್ಪಿ ಮಿಥುನ್ ಕುಮಾರ್, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಾಗರಿಕರ ಪಾತ್ರದ ವಿವರಿಸಿದರು.

112 ಗೆ ಮಾಹಿತಿ ಕೊಡಿ
ಗ್ರಾಮಗಳಲ್ಲಿ ಅಥವಾ ಸುತ್ತಮುತ್ತ ಯಾವುದೇ ಕಾನೂನುಬಾಹಿರ ಕೃತ್ಯಗಳು ನಡೆಯುತ್ತಿದ್ದಲ್ಲಿ, ಅಂತಹ ವಿಷಯಗಳನ್ನು ಹತ್ತಿರದ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವುದು ಪ್ರತಿಯೊಬ್ಬರ ಪ್ರಾಥಮಿಕ ಜವಾಬ್ದಾರಿ. ಮಾಹಿತಿ ನೀಡಿದವರ ವಿವರವನ್ನು ಪೊಲೀಸ್ ಇಲಾಖೆಯು ಗೌಪ್ಯವಾಗಿ ಇರಿಸಲಾಗುತ್ತದೆ.. ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಈಗಾಗಲೇ ಅಬಕಾರಿ ಕಾಯ್ದೆಯಡಿ ಅಗತ್ಯ ಕ್ರಮಗಳನ್ನು ಮತ್ತು ಪ್ರಕರಣಗಳನ್ನು ದಾಖಲಿಸಿದೆ. ಸಾರ್ವಜನಿಕ ಹಿತಾಸಕ್ತಿಯಲ್ಲಿ ಕೈಗೊಳ್ಳಬೇಕಾಗುವ ಎಲ್ಲಾ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಗಳ ಸಹಯೋಗದೊಂದಿಗೆ ಕಾನೂನಿನ ರೀತಿ ಜಾರಿಗೆ ತರಲಾಗಿದೆ ಎಂದರು.

- ಸಂಚಾರ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ಗ್ರಾಮಗಳಲ್ಲಿ ಹೆದ್ದಾರಿ ಹಾದು ಹೋಗಿರುವುದರಿಂದ ವಾಹನಗಳ ದಟ್ಟಣೆ ಹೆಚ್ಚಿದ್ದು, ಕೆಲವೊಮ್ಮೆ ಪಾದಚಾರಿಗಳ ನಿರ್ಲಕ್ಷ್ಯ ಮತ್ತು ರಸ್ತೆ ದಾಟುವಾಗ ಎಚ್ಚರಿಕೆ ವಹಿಸದಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು.
- ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಸ್ತೆಯಲ್ಲಿ ಸೂಚನಾ ಫಲಕ ಹಾಗೂ ವೈಜ್ಞಾನಿಕ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆ.
- ಸಂಚಾರ ಸುರಕ್ಷತೆಯ ಸಂಬಂಧ ಕೈಗೊಳ್ಳಲಾಗುವ ಎಲ್ಲಾ ಮುನ್ನೆಚ್ಚರಿಕಾ ಕಾರ್ಯಕ್ರಮಗಳು ಹಾಗೂ ಉಪಕರಣಗಳ ಅಳವಡಿಕೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- ಸಾರ್ವಜನಿಕರ ಹಿತದೃಷ್ಟಿಯಲ್ಲಿ ಅವಶ್ಯಕ ಮತ್ತು ಅಗತ್ಯವೆನಿಸುವಂತಹ ಎಲ್ಲಾ ರೀತಿಯ ಕ್ರಮಗಳನ್ನು ಚರ್ಚಿಸಿ ಕೈಗೊಳ್ಳಲಾಗುತ್ತದೆ.
- ರಸ್ತೆಯ ಬದಿಗಳಲ್ಲಿ ಅಳವಡಿಸಲಾಗುವ ಸೂಚನಾ ಫಲಕಗಳು ಮತ್ತು ಇತರೆ ಉಪಕರಣಗಳಲ್ಲಿ ರಿಫ್ಲೆಕ್ಟಿವ್ ಸ್ಟಿಕ್ಕರ್‌ಗಳನ್ನು ಅಳವಡಿಸಲಾಗಿದ್ದು, ಕಾಲಕಾಲಕ್ಕೆ ಹಾಳಾದ ಸ್ಟಿಕ್ಕರ್‌ಗಳನ್ನು ಬದಲಾಯಿಸಿ ಹೊಸದಾದ ಮತ್ತು ಹೆಚ್ಚಿನ ಗೋಚರತೆ ಉಳ್ಳಂತಹ ರಿಫ್ಲೆಕ್ಟಿವ್ ಸ್ಟಿಕ್ಕರ್‌ಗಳನ್ನು ಅಳವಡಿಸಲಾಗುತ್ತದೆ.
- ಹಾಗೆಯೇ, ಹೆದ್ದಾರಿ ಪ್ರಾಧಿಕಾರ ಮತ್ತು ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಸೇರಿ ಗ್ರಾಮಗಳಲ್ಲಿ ಹಾದು ಹೋಗಿರುವ ರಸ್ತೆಯನ್ನು ಪುನಃ ಪರಿಶೀಲಿಸಲಾಗುತ್ತದೆ. ಅವಶ್ಯಕತೆ ಇದ್ದರೆ ಕ್ಯಾಟ್ ಐಸ್, ರಿಫ್ಲೆಕ್ಟರ್ಸ್, ಬ್ಲಿಂಕರ್ಸ್ ಮತ್ತು ಸೂಚನಾ ಫಲಕಗಳನ್ನು ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
- ರಸ್ತೆಗಳು ಕೂಡುವ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಮುಂಜಾಗ್ರತಾ ಮತ್ತು ಸೂಚನಾ ಫಲಕಗಳನ್ನು ಅಳವಡಿಸುವುದರಿಂದ ರಸ್ತೆ ಅಪಘಾತಗಳನ್ನು ಬಹುತೇಕ ಕಡಿಮೆ ಮಾಡಲು ಸಾಧ್ಯವಿರುವುದರಿಂದ ಪೊಲೀಸ್ ಇಲಾಖೆಯು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು

ಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ ನಡೆಯಿತು, ಇ-ಪೇಪರ್ ಓದಿ
ಸಿಸಿ ಕ್ಯಾಮರಾ ಅಳವಡಿಸಿ
ಯಾವುದೇ ಅಪರಾಧಗಳು ಜರುಗದಂತೆ ತಡೆಯಲು ಮತ್ತು ಒಂದು ವೇಳೆ ಅಪರಾಧ ಕೃತ್ಯಗಳು ನಡೆದರೆ ಕೂಡಲೇ ಪತ್ತೆ ಹಚ್ಚುವ ಸಂಬಂಧ ಸಾರ್ವಜನಿಕರು ತಮ್ಮ ಅಂಗಡಿ-ಮುಂಗಟ್ಟು ಹಾಗೂ ಮನೆಗಳಲ್ಲಿ ರಸ್ತೆ ಕಾಣುವ ರೀತಿಯಲ್ಲಿ, ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದ ಎಸ್ಪಿ, ಗ್ರಾಮದ ಸೂಕ್ಷ್ಮ ಮತ್ತು ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ನಿಮ್ಮ ಹಂತದಲ್ಲಿ ಅಳವಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಂಡರೆ, ಈ ಕಾರ್ಯದಲ್ಲಿ ಪೊಲೀಸ್ ಇಲಾಖೆಯು ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ ಎಂದು ತಿಳಿಸಿದರು.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಪ್ರಮುಖ ಆದ್ಯತೆಯನ್ನು ನೀಡಲಿದ್ದು, ಯಾರೇ ಆಗಲಿ ಹೆಣ್ಣುಮಕ್ಕಳನ್ನು ಚುಡಾಯಿಸುವುದು ಅಥವಾ ಸಾರ್ವಜನಿಕವಾಗಿ ತೊಂದರೆ ನೀಡುವುದು ಕಂಡುಬಂದಲ್ಲಿ ಕೂಡಲೇ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಆ ಕೂಡಲೇ ಇ.ಆರ್.ವಿ. ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಸಾರ್ವಜನಿಕರೆಲ್ಲರೂ ಯಾವುದೇ ತುರ್ತು ಸಂದರ್ಭದಲ್ಲಿ 112 ಸಹಾಯವಾಣಿಗೆ ಕರೆ ಮಾಡಿ ಸಹಾಯವನ್ನು ಪಡೆಯಬಹುದಾಗಿರುತ್ತದೆ. ಈ ಬಗ್ಗೆ ನಿಮ್ಮ ಕುಟುಂಬಸ್ಥರಿಗೆ, ಸುತ್ತಮುತ್ತಲಿನ ಹೆಣ್ಣುಮಕ್ಕಳಿಗೆ, ವಿಶೇಷವಾಗಿ ಕಲಿಕೆಗಾಗಿ ಹೋಗುವಂತಹ ಶಾಲಾ-ಕಾಲೇಜು ಮಕ್ಕಳಿಗೆ ತಿಳಿಸಿಕೊಡಿ ಎಂದು ಅವರು ವಿನಂತಿಸಿದರು.
ಯುವಕರಲ್ಲಿ ಅರಿವು ಮೂಡಿಸುವ ಸಂಬಂಧ ಮತ್ತು ಕಾನೂನಿನ ಬಗ್ಗೆ ತಿಳುವಳಿಕೆಯನ್ನು ಹೆಚ್ಚಿಸುವ ಸಂಬಂಧ ಪೊಲೀಸ್ ಇಲಾಖೆಯು ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಸಂಬಂಧಪಟ್ಟ ಠಾಣಾ ವ್ಯಾಪ್ತಿಗೆ ಒಳಪಡುವಂತಹ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಾನೂನಿನಲ್ಲಿ ಅವರಿಗಿರುವ ಹಕ್ಕು ಮತ್ತು ರಕ್ಷಣೆಗಳು, ಕಾಯ್ದೆಗಳು, ಸ್ವಯಂ ರಕ್ಷಣಾ ವಿಧಾನಗಳು, ಸೈಬರ್ ಕ್ರೈಂ ಕುರಿತು ಅರಿವು, ಮಾದಕ ದ್ರವ್ಯದ ದುಷ್ಪರಿಣಾಮಗಳು ಹಾಗೂ ಇತರ ವಿಚಾರಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆಯು ನಿರಂತರವಾಗಿ ಕೈಗೊಳ್ಳುತ್ತಿದ್ದು, ಮುಗ್ಧ ಜನರಿಗೆ ಹಾಗೂ ಸಹಾಯ ಅವಶ್ಯಕ ಇರುವಂತಹ ಜನರಿಗೆ ಮಾಹಿತಿಯನ್ನು ತಿಳಿಸಿಕೊಡುವ ಜವಾಬ್ದಾರಿಯು ಪೊಲೀಸ್ ಇಲಾಖೆಯ ಜೊತೆ ಜೊತೆಗೆ ತಿಳಿದಂತಹ ನಿಮ್ಮ ಮತ್ತು ಪೋಷಕರ ಮೇಲೂ ಇರುತ್ತದೆ ಎಂದು ತಿಳಿಸಿದರು.

ಸಾಗರ ಬಸ್ ನಿಲ್ದಾಣದ ಬಳಿ ಬ್ರೇಕ್ ಫೇಲ್! ಬೈಕ್ಗಳ ಮೇಲೆ ಹರಿದ ಖಾಸಗಿ ಬಸ್
ಸುಮ್ಮನಿರಬೇಡಿ
ಯಾವುದೇ ಮುಗ್ಧ ಜನರಿಗೆ ಅಥವಾ ಅಸಹಾಯಕ ಜನರಿಗೆ ಅಥವಾ ಹೆಣ್ಣುಮಕ್ಕಳಿಗೆ ಯಾರೇ ಆಗಲಿ ತೊಂದರೆ, ಕಿರುಕುಳ, ಉಪಟಳ ನೀಡುತ್ತಿರುವಂತಹ ಪ್ರಸಂಗಗಳು ಕಂಡು ಬಂದಲ್ಲಿ, ಈ ವಿಚಾರವು ನಮಗೆ ಸಂಬಂಧಪಟ್ಟದ್ದಲ್ಲ ಎಂದು ಸುಮ್ಮನಿರಬೇಡಿ, ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. ಮುಗ್ಧ ಜನರ ರಕ್ಷಣೆಯು ನಮ್ಮೆಲ್ಲರ ಹೊಣೆಗಾರಿಕೆಯಾಗಿದ್ದು, ನಾವೆಲ್ಲರೂ ಜಾಗರೂಕರಾದಾಗ ಮಾತ್ರವೇ ಒಂದು ಸದೃಢ ಹಾಗೂ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿರುತ್ತದೆ ಎಂದು ಹೇಳಿದರು. ನೊಂದವರು ಧೈರ್ಯವಾಗಿ ಮುಂದೆ ಬಂದು ತಮ್ಮ ಸಮಸ್ಯೆಯನ್ನು ಪೊಲೀಸ್ ಇಲಾಖೆಗೆ ತಿಳಿಸಿದಾಗ ಮಾತ್ರ ಸಹಾಯ ಮಾಡಲು ಸಾಧ್ಯವಿರುತ್ತದೆ. ಸಮಸ್ಯೆಯನ್ನು ಹೇಳಿಕೊಳ್ಳಲು ಯಾವುದೇ ಮುಜುಗರ ಅಥವಾ ಭಯ ಬೇಡ. ಹಿಂಜರಿಕೆ ಇಲ್ಲದೆ ಮುಕ್ತ ಮನಸ್ಸಿನಿಂದ ನಿಮ್ಮ ಸಮಸ್ಯೆಗಳ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೆ ತನ್ನಿ. ಕಾನೂನು ವ್ಯಾಪ್ತಿಯಲ್ಲಿ ಆಗಬಹುದಾದಂತಹ ಎಲ್ಲಾ ರೀತಿಯ ಸಹಕಾರವನ್ನು ಪೊಲೀಸ್ ಇಲಾಖೆಯು ನಿಮಗೆ ನೀಡಲಿದೆ ಎಂದು ಅವರು ಅಭಯ ನೀಡಿದರು.

ನಾವೆಲ್ಲರೂ ಒಂದಾಗಿ ಮುನ್ನಡೆದಾಗ ಮಾತ್ರ ಅಪರಾಧ ಮುಕ್ತ ಸಮಾಜ ನಿರ್ಮಿಸಲು ಸಾಧ್ಯವಿರುತ್ತದೆ. ನ್ಯಾಯ ಪಡೆಯುವುದು ಎಲ್ಲಾ ಸಾರ್ವಜನಿಕರ ಹಕ್ಕಾಗಿರುತ್ತದೆ. ನೀವುಗಳು ಯಾವುದೇ ಹಿಂಜರಿಕೆ ಇಲ್ಲದೆ ಮುಂದೆ ಬಂದಾಗ ಮಾತ್ರ ನಿಮಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತದೆ. ಆದ್ದರಿಂದ ಯಾವುದೇ ಹಿಂಜರಿಕೆ ಇಲ್ಲದೆ, ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಎಂದು ಎಸ್.ಪಿ. ಕರೆ ನೀಡಿದರು.
ಇವರೇ ನೋಡಿ ನಮ್ಮ ಮಲೆನಾಡ ಚಾಮುಂಡಿ & ತುಂಗಾ!
ಮನೆ ಮನೆಗೆ ಪೊಲೀಸ್/ Mane Manege Police
‘ಮನೆ ಮನೆಗೆ ಪೊಲೀಸ್’ ಎಂಬುದು ಕರ್ನಾಟಕ ರಾಜ್ಯ ಸರ್ಕಾರದ ಒಂದು ಮುಖ್ಯವಾದ ಯೋಜನೆಯಾಗಿರುತ್ತದೆ. ಈ ಹಿಂದೆ ಬೀಟ್ ವ್ಯವಸ್ಥೆಯ ಮೂಲಕ ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ ಈಗ ಮುಂದುವರೆದು ಪ್ರತಿ ಸಾರ್ವಜನಿಕರ ಮನೆ ಮನೆಗೆ ಪೊಲೀಸ್ ಇಲಾಖೆಯು ತಲುಪಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳುತ್ತದೆ. ಈ ಕಾರ್ಯಕ್ರಮದ ಭಾಗವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ನಿಮ್ಮ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ನಿಮ್ಮ ಮನೆಗಳಿಗೆ ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣಾಧಿಕಾರಿಗಳು, ಬೀಟ್ ಸಿಬ್ಬಂದಿಗಳು (ಅವರ ಹೆಸರು ಮತ್ತು ಫೋನ್ ನಂಬರ್), ಸೈಬರ್ ಸಹಾಯವಾಣಿ, ಮಕ್ಕಳ ಸಹಾಯವಾಣಿ, ತುರ್ತು ಸಹಾಯವಾಣಿ ಹಾಗೂ ಪೊಲೀಸ್ ಉಪ ವಿಭಾಗಾಧಿಕಾರಿಗಳ ಫೋನ್ ನಂಬರ್‌ಗಳನ್ನು ಒಳಗೊಂಡ ವಿವರವನ್ನು ಮುದ್ರಿಸಿರುವ ಸ್ಟಿಕ್ಕರ್‌ಗಳನ್ನು ಅಂಟಿಸುತ್ತಾರೆ. ಮಾಹಿತಿಯನ್ನು ಮುದ್ರಿಸಿರುವ ಸ್ಟಿಕ್ಕರ್‌ಗಳನ್ನು ಸೂಕ್ತವೆನಿಸಿದ ಜಾಗದಲ್ಲಿ ನೀವೇ ಅಂಟಿಸಿ, ಸದರಿ ಸ್ಟಿಕ್ಕರ್‌ಗಳನ್ನು ಯಾವುದೇ ಕಾರಣಕ್ಕೂ ಕಿತ್ತು ಹಾಕಬೇಡಿ. ಯಾವುದೋ ತುರ್ತು ಸಂದರ್ಭದಲ್ಲಿ ಇವು ನಿಮಗೆ ಸಹಾಯಕ್ಕೆ ಬರುತ್ತವೆ. ಪೊಲೀಸ್ ಇಲಾಖೆಯು ಸದಾ ನಿಮ್ಮ ಸೇವೆಗೆ ಸಿದ್ಧವಿದ್ದು, ನಿಮಗೆ ಅವಶ್ಯಕತೆ ಇರುವಂತಹ ಎಲ್ಲಾ ರೀತಿಯ ಸಹಕಾರವನ್ನು ಕಾನೂನಿನ ಚೌಕಟ್ಟಿಗೆ ಒಳಪಟ್ಟು ನೀಡಲಿದೆ ಎಂದರು. Mane Manege Police
ಎ. ಜಿ. ಕಾರ್ಯಪ್ಪ (ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ),ಸಂಜೀವ್ ಕುಮಾರ್ (ಡಿವೈಎಸ್‌ಪಿ, ಶಿವಮೊಗ್ಗ ಬಿ ಉಪ ವಿಭಾಗ), ಸತ್ಯನಾರಾಯಣ (ಪೊಲೀಸ್ ನಿರೀಕ್ಷಕರು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ) ಹಾಗೂ ಪುರಲೆ, ಚಿಕ್ಕಲ್, ಗುರುಪುರ, ಸಿದ್ದೇಶ್ವರ ನಗರ, ವೆಂಕಟೇಶ ನಗರ, ಹೊಳೆಬೆನವಳ್ಳಿ ಗ್ರಾಮಗಳ ಮುಖಂಡರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
