Malegaon Blast Case ಶಿವಮೊಗ್ಗ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಹಿಂದೂ ಧರ್ಮಕ್ಕೆ ಕಳಂಕ ಹಚ್ಚುವ ಪ್ರಯತ್ನ ನಡೆದಿತ್ತು, ಆದರೆ ನ್ಯಾಯಾಲಯದ ತೀರ್ಪಿನಿಂದ ಆ ಕಳಂಕ ತೊಲಗಿ ಹಿಂದೂಗಳ ಸಹನೆ ಮತ್ತು ಅಹಿಂಸಾತತ್ವ ಜಗತ್ತಿಗೆ ಗೊತ್ತಾಗಿದೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಹಿಂದೂ ಮುಖಂಡರನ್ನು ಬಂಧಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಭಯೋತ್ಪಾದಕರು ಎಂದು ಬಿಂಬಿಸುವ ಪ್ರಯತ್ನ ಮಾಡಿತ್ತು. ಆದರೆ ಹಿಂದೂ ಎಂದಿಗೂ ಭಯೋತ್ಪಾದಕ ಆಗಲು ಸಾಧ್ಯವಿಲ್ಲ. ಹಿಂದೂಗಳಿಗೆ ಸಹನೆ ಮತ್ತು ಅಹಿಂಸಾತತ್ವ ರಕ್ತಗತವಾಗಿ ಬಂದಿದೆ” ಎಂದು ಜ್ಞಾನೇಂದ್ರ ಹೇಳಿದರು.
ಮಾಲೆಗಾಂವ್ ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಏಳು ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಮುಸ್ಲಿಂ ಭಯೋತ್ಪಾದನೆಯನ್ನು ಸಹಿಸಿಕೊಂಡಿದೆ ಮತ್ತು ದೇಶದ ಮಾನವನ್ನು ಅಡವಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Malegaon Blast Case ಧರ್ಮಸ್ಥಳ ವಿಚಾರದಲ್ಲಿ ಅಧಿಕಾರಿಗಳು ಯಾರ ನಾಟಕಕ್ಕೂ ಬಲಿ ಆಗಬೇಡಿ
ಇದೇ ವೇಳೆ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಬಗ್ಗೆಯೂ ಮಾತನಾಡಿದ ಜ್ಞಾನೇಂದ್ರ, ರಾಜ್ಯ ಸರ್ಕಾರದ ಎಸ್ಐಟಿ ತನಿಖೆಯನ್ನು ಸ್ವಾಗತಿಸಿದರು. “ಯಾರು ನಕ್ಸಲರ ಪರ ಇದ್ದರು, ನಗರ ನಕ್ಸಲರು ಆಗಿದ್ದರೋ ಅವರು ಈ ಪ್ರಕರಣದಲ್ಲಿ ಭಾಗಿಯಾಗಿ ಮ್ಯಾನೇಜ್ ಮಾಡಲು ಯತ್ನಿಸುತ್ತಿದ್ದಾರೆ. ಎಸ್ಐಟಿಯಲ್ಲಿರುವ ಪೊಲೀಸ್ ಅಧಿಕಾರಿಗಳು ಒಳ್ಳೆಯವರು. ಅವರು ಈ ನಾಟಕಕ್ಕೆ ಬಲಿಯಾಗದೆ, ಪ್ರಾಮಾಣಿಕವಾಗಿ ತನಿಖೆ ನಡೆಸಿ ಸತ್ಯವನ್ನು ಹೊರಗೆ ತರಬೇಕು” ಎಂದು ಒತ್ತಾಯಿಸಿದರು.
ಧರ್ಮಸ್ಥಳ ಹಿಂದೂಗಳ ದೊಡ್ಡ ಶ್ರದ್ಧಾಕೇಂದ್ರವಾಗಿದ್ದು, ಅದಕ್ಕೆ ಕೆಟ್ಟ ಹೆಸರು ತರುವ ಕುತಂತ್ರ ನಡೆಯುತ್ತಿದೆ. ಹಿಂದೂಗಳ ಭಾವನೆ ಅಳಿಸಲು ಈ ಪ್ರಯತ್ನಗಳು ವಿಫಲವಾಗುತ್ತವೆ. ತನಿಖೆಯಿಂದ ಸತ್ಯ ಹೊರಬರಲಿ, ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಅವರು ಹೇಳಿದರು.
Malegaon Blast Case ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಆರೋಪ:
ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಜ್ಞಾನೇಂದ್ರ, ಕಾಂಗ್ರೆಸ್ ತನ್ನ ಸೋಲಿಗೆ ನಿಖರ ಕಾರಣಗಳನ್ನು ಹುಡುಕುವ ಬದಲು, ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುತ್ತದೆ ಎಂದರು.
ಕಾಂಗ್ರೆಸ್ ಸೋತರೆ ಚುನಾವಣಾ ಆಯೋಗ ತಪ್ಪು ಮಾಡಿದೆ, ಗೆದ್ದರೆ ಏನೂ ಹೇಳಲ್ಲ. ಕಾಂಗ್ರೆಸ್ ಪಕ್ಷ ಹೀಗೆ ವರ್ತಿಸುತ್ತಾ ಹೋದರೆ ಜನರಿಂದ ಮತ್ತಷ್ಟು ದೂರವಾಗುತ್ತದೆ” ಎಂದು ಹೇಳಿದರು. ಟ್ರಂಪ್ ಹೇಳಿಕೆಯನ್ನು ರಾಹುಲ್ ಗಾಂಧಿ ಸಮರ್ಥಿಸಿಕೊಂಡಿರುವುದು ವಿಚಿತ್ರ. ರಾಹುಲ್ ಗಾಂಧಿ ದೇಶ ವಿರೋಧಿ ರೀತಿಯಲ್ಲಿಯೇ ಮಾತನಾಡುತ್ತಾರೆ. ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಮತ್ತಷ್ಟು ದುರ್ಬಲಗೊಳ್ಳುತ್ತದೆ ಎಂದು ಟೀಕಿಸಿದರು.
