Kumsi Railway Station : ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಬೆಂಗಳೂರು – ತಾಳಗುಪ್ಪ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ: 20651 / 20652) ನಿಲುಗಡೆಗೆ ಸೌಲಭ್ಯ ಒದಗಿಸಲು ತಾತ್ಕಾಲಿಕವಾಗಿ ಆದೇಶ ಹೊರಡಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.
ಈ ನಿಲುಗಡೆ ಸೌಲಭ್ಯವನ್ನು 2025ರ ಅಕ್ಟೋಬರ್ 6 ರಿಂದ 2026ರ ಜನವರಿ 5 ರವರೆಗೆ ಪ್ರಾಯೋಗಿಕ ಆಧಾರದ ಮೇಲೆ ಜಾರಿಗೊಳಿಸಿ ರೈಲ್ವೆ ಇಲಾಖೆಯು ಆದೇಶ ನೀಡಿದೆ.
ಈ ಹಿಂದೆ, ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ಇರಲಿಲ್ಲ. ಇದರಿಂದಾಗಿ ಈ ಪ್ರದೇಶಗಳ ಸಾರ್ವಜನಿಕ ಪ್ರಯಾಣಿಕರಿಂದ ರೈಲು ನಿಲುಗಡೆಗಾಗಿ ಬಹುದಿನಗಳಿಂದ ಬಲವಾದ ಬೇಡಿಕೆ ಮತ್ತು ಒತ್ತಡವಿತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ, ಸಂಸದ ಬಿ.ವೈ. ರಾಘವೇಂದ್ರ ಅವರು ಕಳೆದ ವಾರ ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಮುಕುಲ್ ಸರಣ್ ಮಾಥುರ್ ಅವರನ್ನು ಭೇಟಿ ಮಾಡಿ ಈ ಕುರಿತು ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಟ್ಟಿದ್ದರು. ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಇಂಟರ್‌ಸಿಟಿ ರೈಲನ್ನು ನಿಲ್ಲಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವಂತೆ ಸಂಸದರು ಮನವಿ ಮಾಡಿಕೊಂಡಿದ್ದರು.ಸಂಸದರ ನಿರಂತರ ಪ್ರಯತ್ನದ ಫಲವಾಗಿ ನೈರುತ್ಯ ರೈಲ್ವೆ ವಲಯದಿಂದ ಇದೀಗ ಅನುಮತಿ ದೊರೆತಿದೆ.
Kumsi Railway Station : ರೈಲು ನಿಲುಗಡೆ ವಿವರಗಳು ಹೀಗಿವೆ:
ರೈಲು ಸಂಖ್ಯೆ: 20651 (ಬೆಂಗಳೂರು-ತಾಳಗುಪ್ಪ):
ಶಿವಮೊಗ್ಗದಿಂದ ಹೊರಡುವ ಈ ರೈಲು ಕುಂಸಿ ರೈಲ್ವೆ ನಿಲ್ದಾಣಕ್ಕೆ ರಾತ್ರಿ 8:05ಕ್ಕೆ ಆಗಮಿಸಿ, 8:06ಕ್ಕೆ ಹೊರಡಲಿದೆ.
ನಂತರ ಅರಸಾಳು ರೈಲು ನಿಲ್ದಾಣವನ್ನು ರಾತ್ರಿ 8:20ಕ್ಕೆ ತಲುಪಿ, 8:21ಕ್ಕೆ ನಿಲ್ದಾಣವನ್ನು ಬಿಡಲಿದೆ.
ರೈಲು ಸಂಖ್ಯೆ: 20652 (ತಾಳಗುಪ್ಪ-ಬೆಂಗಳೂರು):
ತಾಳಗುಪ್ಪದಿಂದ ಹೊರಡುವ ಈ ರೈಲು ಅರಸಾಳು ರೈಲ್ವೆ ನಿಲ್ದಾಣಕ್ಕೆ ಬೆಳಿಗ್ಗೆ 6:19ಕ್ಕೆ ತಲುಪಲಿದೆ. 6:20ಕ್ಕೆ ಅರಸಾಳಿನಿಂದ ಹೊರಟು, ಕುಂಸಿ ರೈಲ್ವೆ ನಿಲ್ದಾಣಕ್ಕೆ ಬೆಳಿಗ್ಗೆ 6:33ಕ್ಕೆ ತಲುಪಿ, 6:34ಕ್ಕೆ ನಿಲ್ದಾಣವನ್ನು ಬಿಡಲಿದೆ.
Kumsi Railway Station ಈ ಹೊಸ ಸೌಲಭ್ಯವು ಆಯನೂರು, ಕುಂಸಿ, ಶಿಕಾರಿಪುರ ತಾಲ್ಲೂಕಿನ ಗಾಮ, ಕಲ್ಮನೆ, ಹಿತ್ತಲ, ಚುರ್ಚಿಗುಂಡಿ ಭಾಗದ ಸಾರ್ವಜನಿಕರಿಗೆ ಹಾಗೂ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ, ಕೋಡೂರು, ಬಾಳೂರು, ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು, ಹುಂಚ, ಅಮೃತ ಗ್ರಾಮದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಈ ಭಾಗದ ಸಾರ್ವಜನಿಕರು ಈ ಹೊಸ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಂಸದರು ಮನವಿ ಮಾಡಿದ್ದಾರೆ.