Kantara Shooting complete ಬೆಂಗಳೂರು: ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಸಾಕಷ್ಟು ಸವಾಲುಗಳು ಮತ್ತು ಅವಘಡಗಳ ನಡುವೆಯೂ ಸತತ ಮೂರು ವರ್ಷಗಳಲ್ಲಿ 250 ದಿನಗಳ ಕಾಲ ನಡೆದ ಶೂಟಿಂಗ್ ಕಾರ್ಯಾಚರಣೆಗೆ ಇದೀಗ ತೆರೆ ಬಿದ್ದಿದೆ. ಚಿತ್ರತಂಡ ಕುಂಬಳಕಾಯಿ ಒಡೆದು ವಿಜಯೋತ್ಸವ ಆಚರಿಸಿದೆ.
ಹೊಂಬಾಳೆ ಫಿಲಂಸ್ ಸಂಸ್ಥೆಯು ‘ಕಾಂತಾರ ಚಾಪ್ಟರ್ 1’ ನ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಚಿತ್ರತಂಡದ ಅಸಾಧಾರಣ ಶ್ರಮವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದೆ. ಬೃಹದಾಕಾರದ ಸೆಟ್‌ಗಳು, ನೂರಾರು ಜೂನಿಯರ್ ಆರ್ಟಿಸ್ಟ್‌ಗಳು, ಡ್ರೋನ್ ಕ್ಯಾಮೆರಾಗಳ ಬಳಕೆ ಮತ್ತು ಅದ್ಭುತ ವಿಸ್ಯುಯಲ್ಸ್‌ಗಳೊಂದಿಗೆ ರಿಷಬ್ ಶೆಟ್ಟಿ ಅವರ ಸಮರ್ಪಣೆ ಎದ್ದು ಕಾಣುತ್ತಿದೆ. ‘ಕಾಂತಾರ’ದ ಮೂಲಕ ತಮ್ಮ ಮಣ್ಣಿನ ಕಥೆಯನ್ನು ಹೇಳಲು ಹೊರಟಿದ್ದ ರಿಷಬ್, ‘ಕಾಂತಾರ ಚಾಪ್ಟರ್ 1’ ನಲ್ಲಿ ಆ ಕಥೆಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ. ಮೊದಲ ಭಾಗಕ್ಕಿಂತ ಹತ್ತು ಪಟ್ಟು ಹೆಚ್ಚು ಶ್ರಮ ಈ ಸಿನಿಮಾದಲ್ಲಿ ಅಡಗಿದೆ ಎಂಬುದು ಮೇಕಿಂಗ್ ವಿಡಿಯೋದಲ್ಲಿ ಸ್ಪಷ್ಟವಾಗಿದೆ.
Kantara Shooting complete : ದೈವ ನನ್ನ ಕೈಬಿಡಲಿಲ್ಲ ಎಂದ ರಿಷಬ್
ಮೇಕಿಂಗ್ ವಿಡಿಯೋದಲ್ಲಿ ಕಟ್ಟುಮಸ್ತಾದ ದೇಹದಲ್ಲಿ ರಿಷಬ್ ಶೆಟ್ಟಿ ಕಳರಿಪಯಟ್ಟು ಕುಸ್ತಿ ಅಭ್ಯಾಸ ಮಾಡುತ್ತಿರುವುದು ಗಮನ ಸೆಳೆದಿದೆ. ಚಿತ್ರೀಕರಣದ ಅನುಭವಗಳನ್ನು ಹಂಚಿಕೊಳ್ಳುತ್ತಾ “ದೈವ ನನ್ನ ಕೈ ಬಿಡಲಿಲ್ಲ” ಎಂದು ರಿಷಬ್ ಶೆಟ್ಟಿ ಧ್ವನಿ ನೀಡಿರುವುದು ಸಿನಿಮಾದ ಆಳವಾದ ಅನುಭವವನ್ನು ಸೂಚಿಸುತ್ತದೆ. ಉತ್ತಮ ಹಿನ್ನೆಲೆ ಸಂಗೀತ ಮತ್ತು ಆಕರ್ಷಕ ವಿಸ್ಯುಯಲ್ಸ್‌ಗಳು ನಮ್ಮನ್ನು ಕಾಂತಾರ ಪ್ರಪಂಚಕ್ಕೆ ಕರೆದುಕೊಂಡು ಹೋಗುವಲ್ಲಿ ಯಾವುದೇ ಸಂಶಯವಿಲ್ಲ. ಮೇಕಿಂಗ್ ವಿಡಿಯೋವನ್ನೇ ಇಷ್ಟು ಉತ್ತಮವಾಗಿ ಸಿದ್ಧಪಡಿಸಿರುವ ರಿಷಬ್, ಟೀಸರ್ ಅನ್ನು ಯಾವ ರೀತಿ ಸಿದ್ಧಪಡಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು. ಚಿತ್ರತಂಡ ಈ ಹಿಂದೆಯೇ ಘೋಷಿಸಿದಂತೆ, ‘ಕಾಂತಾರ ಚಾಪ್ಟರ್ 1’ ಅಕ್ಟೋಬರ್ 02 ರಂದು ವಿಶ್ವದಾದ್ಯಂತ ತೆರೆಕಾಣಲಿದೆ.
