Hori Habba Shivamogga : ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ರಾಮೇನಕೊಪ್ಪ ಗ್ರಾಮದಲ್ಲಿ ಹೋರಿ ಹಬ್ಬ ವೀಕ್ಷಿಸಲು ಬಂದಿದ್ದ ಯುವಕನೊಬ್ಬನಿಗೆ ಹೋರಿಯು ಮುಖಕ್ಕೆ ತಿವಿದು ಗಂಭೀರವಾಗಿ ಗಾಯಗೊಳಿಸಿದೆ. ಗಾಯಗೊಂಡ ಯುವಕನನ್ನು ಕುಮಾರ್ ಎಂದು ಗುರುತಿಸಲಾಗಿದೆ.
ಕಳೆದ ಒಂದು ವಾರದಿಂದ ಶಿವಮೊಗ್ಗ ಜಿಲ್ಲೆಯ ಹಲವು ಕಡೆಗಳಲ್ಲಿ ಹೋರಿ ಸ್ಪರ್ಧೆಗಳು ನಡೆಯುತ್ತಿದ್ದು, ರಾಮೇನಕೊಪ್ಪದಲ್ಲೂ ಈ ಹಬ್ಬವನ್ನು ಆಯೋಜಿಸಲಾಗಿತ್ತು. ಹಬ್ಬ ವೀಕ್ಷಣೆಗಾಗಿ ಬಂದಿದ್ದ ಕುಮಾರ್ ಅವರ ಮೇಲೆ ಓಡುತ್ತಿದ್ದ ಹೋರಿಯೊಂದು ಏಕಾಏಕಿ ದಾಳಿ ನಡೆಸಿದೆ.
ದಾಳಿಯ ತೀವ್ರತೆಗೆ ಯುವಕನ ದವಡೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು, ಕೆಲ ಹಲ್ಲುಗಳು ಉದುರಿ ಹೋಗಿವೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಮುಖದ ಭಾಗದಲ್ಲಿ ಏಳು ಹೊಲಿಗೆಗಳನ್ನು ಹಾಕಲಾಗಿದೆ.
ನಾಲ್ಕು ದಿನಗಳ ಹಿಂದೆ ಶಿಕಾರಿಪುರದಲ್ಲಿ ನಡೆದ ಸ್ಪರ್ಧೆಯಲ್ಲಿ ಮಾಜಿ ಶಾಸಕ ಮಹಾಲಿಂಗಪ್ಪ ಅವರಿಗೆ ಹೋರಿ ತಿವಿದು ಗಾಯಗೊಂಡಿದ್ದರು. ಈ ಸರಣಿ ಘಟನೆಗಳಲ್ಲಿ ಇದುವರೆಗೆ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿರುವುದು ವರದಿಯಾಗಿದೆ.
Hori Habba Shivamogga


