ವಶೀಕರಣ ಪೂಜೆ ಮಾಡಲು 61 ಗ್ರಾಂ ಬಂಗಾರ ಕೊಟ್ಟ ಮಹಿಳೆ, ನಂತರ ನಡೆದಿದ್ದೇನು ಗೊತ್ತಾ.

prathapa thirthahalli
Prathapa thirthahalli - content producer

Gold Robbery Scam ಶಿವಮೊಗ್ಗ: ವಶೀಕರಣ ಪೂಜೆ ಮಾಡಿ ಸಮಸ್ಯೆಯನ್ನು ಬಗೆಹರಿಸುವುದಾಗಿ ನಂಬಿಸಿ ಸ್ವಾಮೀಜಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಮಹಿಳೆಯೊಬ್ಬರಿಂದ ಬರೋಬ್ಬರಿ 61 ಗ್ರಾಂ ಚಿನ್ನವನ್ನು ಪಡೆದು ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಗಂಡನ ಸಮಸ್ಯೆಯಿಂದ ಕಂಗೆಟ್ಟಿದ್ದ ಶಿವಮೊಗ್ಗದ ನಿವಾಸಿಯೊಬ್ಬರು ಪರಿಹಾರ ಕಂಡುಕೊಳ್ಳಲು ಜ್ಯೋತಿಷ್ಯಾಲಯವೊಂದಕ್ಕೆ ಹೋಗಿದ್ದಾರೆ. ಅಲ್ಲಿನ ವ್ಯಕ್ತಿಯೊಬ್ಬರ ಬಳಿ ತಮ್ಮ ಸಂಕಷ್ಟವನ್ನು ಹೇಳಿಕೊಂಡಾಗ, ಆತನು ವಶೀಕರಣ ಪೂಜೆಯನ್ನು ಮಾಡಲು ಹೇಳಿ, ಪ್ರಥಮವಾಗಿ ರೂ. 3,500 ಗಳನ್ನು ಫೋನ್‌ಪೇ ಮೂಲಕ ಪಡೆದಿದ್ದಾನೆ.

- Advertisement -

ಮಾರನೇ ದಿನ, ಆತ ಪೂಜೆಗಾಗಿ ದಂಪತಿಯ ಜೋಡಿ ಫೋಟೋದೊಂದಿಗೆ 61 ಗ್ರಾಂ ಬಂಗಾರವನ್ನು ತರುವಂತೆ ಮಹಿಳೆಗೆ ಸೂಚಿಸಿದ್ದಾನೆ. ಮಹಿಳೆ ತನ್ನ ಬಳಿ 51 ಗ್ರಾಂ ಚಿನ್ನ, ಮಾಂಗಲ್ಯ ಸರ ಮತ್ತು ಎರಡು ಉಂಗುರ ಮಾತ್ರ ಇರುವುದಾಗಿ ತಿಳಿಸಿದಾಗ, ಇನ್ನೂ 10 ಗ್ರಾಂ ಚಿನ್ನವನ್ನು ತರುವಂತೆ ಆತ ಒತ್ತಾಯಿಸಿದ್ದಾನೆ. ಅದರಂತೆ ಮಹಿಳೆ ತಮ್ಮ ಸ್ನೇಹಿತೆಯೊಬ್ಬರಿಂದ 10 ಗ್ರಾಂ ಗೋಲ್ಡ್ ಪಡೆದು ಒಟ್ಟು 61 ಗ್ರಾಂ ಚಿನ್ನಾಭರಣಗಳನ್ನು  ಅಕ್ಟೋಬರ್​ 23 ರಂದು ಮಧ್ಯಾಹ್ನ ತಂದು ಕೊಟ್ಟಿದ್ದಾರೆ.ವಂಚಕ ವ್ಯಕ್ತಿಯು ಈ ಎಲ್ಲಾ ಆಭರಣಗಳು ಮತ್ತು ಜೋಡಿ ಫೋಟೋವನ್ನು ಒಂದು ಮಡಿಕೆಯಲ್ಲಿ ಇಟ್ಟು, ಕೆಂಪು ದಾರದಿಂದ ಕಟ್ಟಿ, ಮಂತ್ರ ಪಠಿಸಿ ಮುಚ್ಚಿಟ್ಟಿದ್ದಾನೆ. ಈ ಮಡಕೆಯನ್ನು ರಹಸ್ಯವಾದ ಜಾಗದಲ್ಲಿ ಇಡುವಂತೆ ಹಾಗೂ ಈ ವಿಚಾರವನ್ನು ಪತಿಗೆ ತಿಳಿಸಬಾರದೆಂದು, ತಿಳಿಸಿದರೆ ಪೂಜೆಯ ಶಕ್ತಿ ಫಲಿಸುವುದಿಲ್ಲವೆಂದು ಹೇಳಿರುತ್ತಾನೆ. ಅಲ್ಲದೆ, ಐದು ದಿನಗಳ ಕಾಲ ಪೂಜೆ ಮಾಡಿದ ನಂತರ ಅಂದರೆ ಅಕ್ಟೋಬರ್​ 28 ರಂದು ಮಡಿಕೆಯನ್ನು ತೆಗೆದರೆ ಕೆಲಸ ಖಚಿತವಾಗಿ ಆಗುತ್ತದೆ ಎಂದು ನಂಬಿಸಿದ್ದಾನೆ.

ಅದೇ ರೀತಿ ಮಹಿಳೆ ಮಡಿಕೆಯನ್ನು ಮನೆಗೆ ತೆಗೆದುಕೊಂಡು ಹೋಗಿರುತ್ತಾರೆ. ಆದರೆ, ಅಕ್ಟೋಬರ್​ 25  ರಂದು ಮಹಿಳೆಗೆ ಅನುಮಾನ ಬಂದು ಗೆ ಮಡಿಕೆಯನ್ನು ತೆಗೆದು ನೋಡಿದಾಗ, ಒಳಗಡೆ ಚಿನ್ನಾಭರಣದ ಬದಲಿಗೆ ಮಣ್ಣಿನ ಪೀಸ್‌ಗಳು ಇರುವುದು ಕಂಡುಬಂದಿದೆ. ಇದರಿಂದ ಗಾಬರಿಗೊಂಡ ಮಹಿಳೆ ತಕ್ಷಣ  ಜ್ಯೋತಿಷ್ಯಾಲಯಕ್ಕೆ ಪೋನ್​ ಮಾಡಿದ್ದಾರೆ ಆದರೆ ಆಗ ಪೋನ್​ ಸ್ವಿಚ್​ ಆಫ್​ ಬಂದಿದೆ.

ಮಾಟ, ಮಂತ್ರ, ಮಕ್ಕಳಿಲ್ಲದಿರುವ ಸಮಸ್ಯೆ, ಶತ್ರುಗಳಿಂದ ತೊಂದರೆ, ಗಂಡ-ಹೆಂಡತಿ ಕಲಹ, ವಶೀಕರಣ ಇತ್ಯಾದಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವುದಾಗಿ ಸಾರ್ವಜನಿಕರನ್ನು ನಂಬಿಸಿ ಈ ವ್ಯಕ್ತಿ ಹಣ ಮತ್ತು ಒಡವೆಗಳನ್ನು ಪಡೆದು ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ತಡವಾಗಿ ಎಚ್ಚೆತ್ತ ಮಹಿಳೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Gold Robbery Scam

Share This Article
Leave a Comment

Leave a Reply

Your email address will not be published. Required fields are marked *