Francis Serrao is Bishop of Mysore Diocese ಶಿವಮೊಗ್ಗ, malenadu today news : August 18 2025: ಶಿವಮೊಗ್ಗ ಬಿಷಪ್ ಆಗಿ ಸೇವೆ ಸಲ್ಲಿಸುತ್ತಿರುವ ಫ್ರಾನ್ಸಿಸ್ ಸೆರಾವೋ ಇದೀಗ ಮೈಸೂರು ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಬೆಂಗಳೂರು ಆರ್ಚ್‌ಡಯೋಸಿಸ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಬಿದ್ದಿದೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ 1959 ರ ಆಗಸ್ಟ್ 15 ರಂದು ಜನಿಸಿದರು. ಪೀಡೇಡ್ ಸೆರಾವೋ ಮತ್ತು ಗ್ರೇಸಿ ಮೇರಿ ಸೆರಾವೋ ಅವರ 11 ಮಕ್ಕಳಲ್ಲಿ ಒಬ್ಬರಾಗಿದ್ದು, ಅವರ ಐವರು ಸಹೋದರರು ಪಾದ್ರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ 2014 ರಿಂದ ಶಿವಮೊಗ್ಗ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ಆಗಿ ಫ್ರಾನ್ಸಿಸ್ ಸೆರಾವೋ ಕೆಲಸ ಮಾಡುತ್ತಿದ್ದಾರೆ.

ತತ್ವಶಾಸ್ತ್ರ ಮತ್ತು ದೇವತಾಶಾಸ್ತ್ರ ಅಧ್ಯಯನ ಮಾಡಿರುವ ಫ್ರಾನ್ಸಿಸ್ ಸೆರಾವೋ ದೆಹಲಿಯ ವಿದ್ಯಾಜ್ಯೋತಿ ಕಾಲೇಜ್ ಆಫ್ ಥಿಯಾಲಜಿಯಲ್ಲಿ ದೇವತಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆರಂಭದಲ್ಲಿ ಮಂಗಳೂರಿನ ಬಿಷಪ್ ಬಾಸಿಲ್ ಡಿ’ಸೋಜಾ ಅವರಿಂದ 1992 ರ ಏಪ್ರಿಲ್ 30 ರಂದು ಪಾದ್ರಿಯಾಗಿ ನೇಮಕಗೊಂಡಿದ್ದರು. ಬಳಿಕ 1991-92 ಮತ್ತು 1994-97 ರ ಅವಧಿಯಲ್ಲಿ ಕಾರವಾರದಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಆನೇಕಲ್ ವಿಜಯಪುರದಲ್ಲಿ ಸೇವೆ ಸಲ್ಲಿಸಿದ ಫ್ರಾನ್ಸಿಸ್ ಸೆರಾವೋ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ರೆಕ್ಟರ್ ಆಗಿಯು ಕೆಲಸ ಮಾಡಿದ್ದಾರೆ. ತದನಂತರ ಕರ್ನಾಟಕ ಜೆಸ್ಯೂಟ್ ಪ್ರಾಂತ್ಯದ ಪ್ರಾವಿನ್ಷಿಯಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಮೈಸೂರು ಧರ್ಮಪ್ರಾಂತ್ಯ ಹಿಂದಿನ ಬಿಷಪ್ ಕೆ.ಎ. ವಿಲಿಯಂರವರ ರಾಜೀನಾಮೆ ಬಳಿಕ ಆರ್ಚ್‌ಬಿಷಪ್ ಎಮೆರಿಟಸ್ ಬರ್ನಾರ್ಡ್ ಮೋರಾಸ್ ಅವರನ್ನು ಅಪೋಸ್ಟೋಲಿಕ್ ಅಡ್ಮಿನಿಸ್ಟ್ರೇಟರ್ ಆಗಿ ನೇಮಿಸಲಾಗಿತ್ತು. ಈಗ ಮೈಸೂರು ಧರ್ಮಪ್ರಾಂತ್ಯಕ್ಕೆ ಫ್ರಾನ್ಸಿಸ್ ಸೆರಾವೋ ಅವರು ಹೊಸ ಬಿಷಪ್ ಆಗಿ ನೇಮಕಗೊಂಡಿದ್ದಾರೆ.
Francis Serrao is Bishop of Mysore Diocese
