Elephant news : ಪಳಗಿಸುವ ಭರದಲ್ಲಿ ಆನೆಗೆ ನೀಡಲಾಯಿತೇ ಚಿತ್ರಹಿಂಸೆ.
ಕಾಡಿನಲ್ಲಿ ರಾಜನಂತಿದ್ದ ವಿಕ್ರಾಂತ್ ಖೆಡ್ಡಾದಲ್ಲಿ ಬಳಲಿದ್ದೇ ವಿಪರ್ಯಾಸ.
Elephant news : ಸಕ್ರೆಬೈಲು ಆನೆ ಬಿಡಾರದ ಇತಿಹಾಸದಲ್ಲಿಯೇ ಇಂತಹದ್ದೊಂದು ಘಟನೆ ನಡೆದಿರಲಿಲ್ಲ. ಕಾಡಿನಲ್ಲಿ ಸೆರೆಹಿಡಿದ ಆನೆಗಳನ್ನು ಖೆಡ್ಡಾಗೆ ತಂದು ಸಾಂಪ್ರದಾಯಕವಾಗಿ ಪಳಗಿಸುವಾಗ ಆನೆಗೆ ಹಿಂಸೆ ನೀಡಲಾಯಿತೇ ಎಂಬ ಅನುಮಾನ ಕಾಡತೊಡಗಿದೆ. ಮಾರ್ಚ್ 18 ರಂದು ಸಕಲೇಶಪುರದಲ್ಲಿ ಸೆರೆಸಿಕ್ಕ ವಿಕ್ರಾಂತ್ ಆನೆಯನ್ನು ಸಕ್ರೆಬೈಲಿಗೆ ತರುವಾಗ ತುಂಬಾ ಆರೋಗ್ಯವಾಗಿ ಸದೃಢವಾಗಿತ್ತು. ಆದರೆ ಕ್ರಾಲ್ ಗೆ ಹಾಕಿದ ನಂತರ ವಿಕ್ರಾಂತ್ ಮುಂಭಾಗದ ಕಾಲಿನಲ್ಲಿ ಆಳವಾದ ಗಾಯವಾಗಿದೆ.
ಕ್ರಾಲ್ ನಿಂದ ಹೊರಗಿರುವ ವಿಕ್ರಾಂತ್ ಜಂಪ್ ಮಾಡುತ್ತಾ ಸಾಗುತ್ತಿರುವುದನ್ನು ನೋಡಿದರೆ, ಅದಕ್ಕೆ ನೆಕ್ರೊಝ್ ಅಥವಾ ಗ್ಯಾಂಗ್ರಿನ್ ಆದ ರೀತಿಯಲ್ಲಿ ಭಾಸವಾಗುತ್ತದೆ. ಇದನ್ನು ವನ್ಯಜೀವಿ ವೈದ್ಯರು ಧೃಡೀಕರಿಸಬೇಕು. ಸಾಮಾನ್ಯವಾಗಿ ಆನೆ ಕಾಲಿಗೆ ಗಾಯವಾದರೂ ಕಾಲನ್ನು ನೆಲಕ್ಕೆ ಊರಿ ಸಾಗುತ್ತದೆ. ಅದೇನೆ ಇರಲಿ ವಿಕ್ರಾಂತ್ ಕಾಲಿನ ಸ್ಥಿತಿ ಹದಗೆಡಲು ಕಾರಣರಾದವರು ಯಾರು ಎಂಬುದು ಈಗ ಪ್ರಶ್ನೆಯಾಗಿ ಉಳಿದಿದೆ. ವಿಕ್ರಾಂತ್ ಸ್ಥಿತಿ ಕಂಡು ಅರಣ್ಯಾಧಿಕಾರಿಗಳು ಕಂಗಾಲಾಗಿದ್ದಾರೆ. ಕಾಡಾನೆ ಪಳಗಿಸಿ ತರಬೇತಿ ನೀಡುವಾಗ ಹಿಂಸೆ ಅನ್ನುವುದು ಇಲ್ಲಿ ಪ್ರಧಾನವಾಗಿ ಪರಿಗಣಿಸಲು ಸಾಧ್ಯವಿಲ್ಲ. ಆದರೆ ವಿಕ್ರಾಂತ್ ಮುಂಗಾಲಿಗೆ ಆಗಿರುವ ಗಾಯವನ್ನು ನೋಡಿದಾಗ ಈ ಪರಿಸರದಲ್ಲಿ ಗುಟ್ಟಾಗಿ ಏನೋ ನಡೆದಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕಾಡಾನೆ ತರಬೇತಿ ಸಂದರ್ಭದಲ್ಲಿ ವನ್ಯಜೀವಿ ವೈದ್ಯರ ಉಪಸ್ಥಿತಿ ಹೆಚ್ಚು ಕೆಲಸ ಮಾಡುತ್ತದೆ. ಆನೆಗೆ ಗಾಯಗಳಾದಾಗ ಸ್ಥಳದಲ್ಲೇ ಚಿಕಿತ್ಸೆ ನೀಡುತ್ತಾರೆ.
ಆನೆಗಳನ್ನು ಸೆರೆಹಿಡಿಯುವುದು ಮತ್ತು ಪಳಗಿಸುವುದು ಪೂರ್ವಜರು ಹಾಕಿಕೊಟ್ಟ ಸಾಂಪ್ರಾದಾಯಕ ಕಲೆ. ಅದು ಈಗಲೂ ಹೆಚ್ಚು ವಿಜೃಂಭಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಕಾಡಾನೆ ಸೆರೆಹಿಡಿಯುವುದು ತಲಾತಲಾಂತರಗಳಿಂದ ಬಂದ ವಿದ್ಯೆ. ಈ ಸಂಪ್ರದಾಯದ ತಳಹದಿ ಮೇಲೆಯೇ ಆನೆ ಸೆರೆಹಿಡಿಯಲಾಗುತ್ತೆ. ಪಳಗಿಸಲಾಗುತ್ತೆ. ಈ ಹಿಂದೆ ಆನೆಯನ್ನು ಖೆಡ್ಡಾಗೆ ಬೀಳಿಸಿ ಹಿಡಿಯುತ್ತಿದ್ದರು. ಆದ್ರೆ ಈಗ ಟ್ರಾಂಕ್ಯುಲೈಸರ್ ಗನ್ ಬಳಸಿ ಡಾರ್ಟ್ ಮಾಡಿ ಸೆರೆ ಹಿಡಿಯಲಾಗ್ತಿದೆ. ಇದೊಂದನ್ನು ಹೊರತು ಪಡಿಸಿದರೆ,,ಆನೆ ಸೆರೆಹಿಡಿಯಲು ಮಾವುತ ಕಾವಾಡಿಗಳ ಪಾರಂಪಾರಿಕ ಕಲೆಯೇ ಹೆಚ್ಚು ಕೆಲಸ ಮಾಡುತ್ತೆ. ಈ ರೀತಿಯ ಪಾರಂಪಾರಿಕ ಕಲೆಯಲ್ಲಿ ಹಿಂಸೆಯೂ ಇರುತ್ತದೆ. ಪ್ರೀತಿ ವಿಶ್ವಾಸ ಎಂಬುದು ಇರುತ್ತದೆ.
Elephant news ಮರದ ದಿಣ್ಣೆಯ ಖೆಡ್ಡಾದಲ್ಲಿ ಎಡವಟ್ಟಾಗಲು ಸಾಧ್ಯವಿಲ್ಲ
ಸಾಂಪ್ರದಾಯಿಕವಾಗಿ ಖೆಡ್ಡಾಗಳನ್ನು ಮರದ ದಿಣ್ಣೆಗಳಿಂದ ಮಾಡಲಾಗುತ್ತದೆ. ಆನೆಯನ್ನು ಖೆಡ್ಡಾಗೆ ಹಾಕಿದಾಗ ಅದು ಗುದ್ದಿ ಗಾಯಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ಮರ ಬಳಸಲಾಗುತ್ತದೆ. ಆನೆಗೆ ಖೆಡ್ಡಾಗೆ ಹಾಕುತ್ತಿದ್ದಂತೆ ಅದು ಮರದ ದಿಣ್ಣೆಗೆ ಗುದ್ದಿ.ಹಿಂದೆ ಮುಂದೆ ಸರಿದಾಡಿ ಗಾಯ ಮಾಡಿಕೊಳ್ಳುತ್ತದೆ .ಆನೆ ಪಳಗಿಸುವಾಗ ಉದ್ದನೆಯ ಕೊಲು ಬಳಸಿ ಆನೆ ದೇಹಕ್ಕೆ ತಿವಿಯಲಾಗುತ್ತದೆ. ಆನೆ ನಿಯಂತ್ರಣಕ್ಕೆ ಬಂದ ನಂತರವೇ ಮಾವುತ ಕಾವಾಡಿ ಅದರ ಮೇಲೆ ಹತ್ತಿ ತರಬೇತಿ ನೀಡಲು ಆರಂಭಿಸುತ್ತಾನೆ. ಪ್ರೀತಿ ವಿಶ್ವಾಸ ತೋರುತ್ತಾನೆ. ಮಾವುತ ಆನೆ ನಡುವೆ ಭಾಂದವ್ಯ ಗಟ್ಟಿಯಾಗುತ್ತದೆ.
ಅನುಭವಿ ವೈದ್ಯರ ಕೊರತೆ ಎದ್ದು ಕಾಣುತ್ತದೆ.
ಖೆಡ್ಡಾದಲ್ಲಿ ಗಾಯಗೊಂಡ ಆನೆಗೆ ಕೇವಲ ಒಬ್ಬ ವೈದ್ಯರಿಂದ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಹಿಂದೆಲ್ಲಾ ಇಲ್ಲಿ ಕರ್ತವ್ಯ ನಿರ್ವಹಿಸಿದ ವನ್ಯಜೀವಿ ವೈದ್ಯರು ಆನೆ ಚಿಕಿತ್ಸೆ ಸಂದರ್ಭದಲ್ಲಿ ಎಳೆಂಟು ಮಾವುತ ಕಾವಾಡಿಗಳನ್ನು ಬಳಸಿಕೊಳ್ಳುತ್ತಿದ್ದರು. ಇವರ ಸಹಾಯದಿಂದ ಖೆಡ್ಡಾದ ಒಂದು ದಿಕ್ಕಿಗೆ ಆನೆಯನ್ನು ಗಟ್ಟಿಯಾಗಿ ನಿಲ್ಲುವಂತೆ ಮಾಡಲಾಗುತ್ತಿತ್ತು. ನಂತರ ಮಾವುತ ಕಾವಾಡಿಗಳ ಸಹಕಾರದಿಂದಲೇ ವೈದ್ಯರು ಗಾಯಗೊಂಡ ಆನೆಗೆ ಚಿಕಿತ್ಸೆ ನೀಡುತ್ತಿದ್ದರು. ಗಂಡಾನೆಯಾದರೆ..ಬಿಡಾರದ ಎರಡು ಕುಮ್ಕಿ ಹೆಣ್ಣಾನೆಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಈ ಚಿಕಿತ್ಸಾ ವಿಧಾನ ವಿಕ್ರಾಂತ್ ಆನೆಗೆ ಸಿಕ್ಕಿದಂತಿಲ್ಲ.
Elephant news ಮೇಲ್ನೋಟಕ್ಕೆ ಕಂಡು ಬರುವ ದೋಷಗಳು
ವಿಕ್ರಾಂತ್ ಆನೆಗೆ ಚೂಪಾದ ವಸ್ತುವಿನಿಂದ ಪದೇ ಪದೇ ತಿವಿದ ಕಾರಣ ಈ ಗಾಯವಾಗಿದೆ. ಆರಂಭದಲ್ಲಿ ಆನೆಯ ಮಾವುತ ಮತ್ತು ಕಾವಾಡಿ ಗಾಯವನ್ನು ನಿರ್ವಹಿಸಿದರೂ, ಅದಕ್ಕೆ ಸರಿಯಾದ ಸಮಯದಲ್ಲಿ ಅಗತ್ಯ ವೈದ್ಯರ ಚಿಕಿತ್ಸೆ ದೊರೆತಿಲ್ಲ. ಸಕ್ರೆಬೈಲಿನಲ್ಲಿ ಈಗ ನುರಿತ ವೈದ್ಯರಿಲ್ಲ.ಇದ್ದ ವೈದ್ಯರ ಬಗ್ಗೆ ಸಾಕಷ್ಟು ಇಲ್ಲಸಲ್ಲದ ಆರೋಪಗಳನ್ನು ಮಾಡಿ ವರ್ಗಾವಣೆ ಮಾಡಲಾಯಿತು. ಈಗ ನಿವೃತ್ತ ವೈದ್ಯರನ್ನು ನೇಮಿಸಿಕೊಂಡು, ಅರಣ್ಯಾಧಿಕಾರಿಗಳು, ಆನೆಗಳ ರಥ ಎಳೆಯಲು ಹೊರಟಿದ್ದಾರೆ. ಹೀಗಾಗಿ ವಿಕ್ರಾಂತ್ ಆನೆಯ ದೈಹಿಕ ಶಕ್ತಿ ಬಹಳ ಕ್ಷೀಣಿಸಿದೆ. ಕಾಡಿನಲ್ಲಿ ಇದ್ದಾಗ ಇದ್ದ ತೂಕದಲ್ಲಿ ಅರ್ಧದಷ್ಟು ಕಳೆದುಕೊಂಡಿದೆ. ತೀವ್ರ ಗಾಯ, ತಡವಾದ ಚಿಕಿತ್ಸೆ ಮತ್ತು ನಿರಂತರ, ಗುಣಮಟ್ಟದ ವೈದ್ಯಕೀಯ ಮೇಲ್ವಿಚಾರಣೆಯ ಕೊರತೆಯು ಆನೆಯ ಜೀವಕ್ಕೆ ಅಪಾಯ ತಂದೊಡ್ಡಿದೆ. ಈ ಪರಿಸ್ಥಿತಿಯು ಶಿಬಿರದ ಆನೆಗಳ ಆರೋಗ್ಯ ನಿರ್ವಹಣೆಯಲ್ಲಿನ ಗಂಭೀರ ನ್ಯೂನತೆಯನ್ನು ಎತ್ತಿ ತೋರಿಸುತ್ತದೆ, ಮತ್ತು ಈ ಆನೆಗಳ ಯೋಗಕ್ಷೇಮದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Elephant news ನಿವೃತ್ತ ಮಾವುತ ಕಾವಾಡಿ ಜಮೇದಾರಗಳ ಬಳಕೆ ಅನಿವಾರ್ಯ-ವೈಲ್ಡ್ ಟಸ್ಕರ್ ಸಂಸ್ಥೆ ಆಗ್ರಹ
ಆನೆಗಳ ಲಾಲನೆ ಪಾಲನೆ ಪಳಗಿಸುವಲ್ಲಿ ಅನುಭವ ಹೊಂದಿರುವ ಜಮೇದಾರ್ ಮಾವುತ ಕಾವಾಡಿಗಳಲ್ಲಿ ಬಹಳಷ್ಟು ಮಂದಿ ನಿವೃತ್ತಿಯಾಗಿದ್ದಾರೆ. ಇವರುಗಳ ಅನುಭವ ಅವರ ನಿವೃತ್ತಿಯಲ್ಲಿಯೇ ಅಳಿಸಿ ಹೋಗುತ್ತಿದೆ. ಇಂತಹ ಮಾವುತರ ಅನುಭವ ತಿಳುವಳಿಕೆ ಪ್ರಸ್ಥುತ ದಿನಮಾನಗಳಲ್ಲಿ ಅತ್ಯಗತ್ಯವಾಗಿದೆ. ಅಂತಹ ನಿವೃತ್ತ ಮಾವುತ ಕಾವಾಡಿಗಳ ಅನುಭವವನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಂಡರೆ, ಸಾಂಪ್ರಾದಾಯಿಕವಾಗಿ ಸೆರೆ ಹಿಡಿಯುವ ಪದ್ಧತಿಗೆ ಮೆರಗು ನೀಡಿದಂತಾಗುತ್ತದೆ. ಶಿವಮೊಗ್ಗ ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಹನುಮಂತಪ್ಪನವರು, ಬಿಡಾರಕ್ಕೆ ನುರಿತ ವೈದ್ಯರನ್ನು ನೇಮಕ ಮಾಡಬೇಕಿದೆ. ಅಲ್ಲದೆ ವಿಕ್ರಾಂತ್ ಗೆ ಅಗತ್ಯ ತುರ್ತು ಚಿಕಿತ್ಸೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕಿದೆ.
