Diwali Gift Offer Scam : ಶಿವಮೊಗ್ಗ: ದೀಪಾವಳಿ ಹಬ್ಬವೆಂದರೆ ಎಲ್ಲೆಡೆ ಸಡಗರ ಮತ್ತು ಸಂಭ್ರಮದ ವಾತಾವರಣ ನೆಲೆಸಿರುತ್ತದೆ. ಈ ಬಾರಿ ಅಕ್ಟೋಬರ್ 20 ರಂದು ದೇಶದಾದ್ಯಂತ ದೀಪಾವಳಿ ಆಚರಣೆ ನಡೆಯಲಿದೆ. ಹಬ್ಬದ ಪ್ರಯುಕ್ತ ಬಹುತೇಕ ಜನರು ಬಟ್ಟೆ ಮತ್ತು ಇತರೆ ವಸ್ತುಗಳ ಖರೀದಿಗಾಗಿ ಹೆಚ್ಚಿನ ಉತ್ಸಾಹದಿಂದ ಶಾಪಿಂಗ್ ಮಾಡುತ್ತಾರೆ. ಅದರಲ್ಲೂ ಆಕರ್ಷಕ ರಿಯಾಯಿತಿಗಳು ಲಭ್ಯವಿರುತ್ತವೆ ಎಂಬ ಕಾರಣಕ್ಕೆ ಅನೇಕರು ಆನ್‌ಲೈನ್ ಶಾಪಿಂಗ್ ಮೂಲಕ ವಸ್ತುಗಳನ್ನು ಖರೀದಿಸಲು ಮುಂದಾಗುತ್ತಾರೆ. ಆದರೆ, ಸಾರ್ವಜನಿಕರ ಈ ಉತ್ಸಾಹವನ್ನೇ ಬಂಡವಾಳ ಮಾಡಿಕೊಳ್ಳುವ ಸೈಬರ್ ವಂಚಕರು, ಆಕರ್ಷಕ ಲಿಂಕ್‌ಗಳನ್ನು ಕಳುಹಿಸಿ ಮೊಬೈಲ್‌ಗಳನ್ನು ಹ್ಯಾಕ್ ಮಾಡುವ ಮತ್ತು ಹಣಕಾಸಿನ ವಂಚನೆ ನಡೆಸುವ ಸಾಧ್ಯತೆಗಳು ಈ ಸಂದರ್ಭದಲ್ಲಿ ಹೆಚ್ಚಾಗಿರುತ್ತವೆ.
Diwali Gift Offer Scam ತಂತ್ರಜ್ಞಾನ ಮುಂದುವರಿದಿರುವ ಈ ಕಾಲದಲ್ಲಿ ಸೈಬರ್ ವಂಚನೆಗಳ ಹಾವಳಿ ಗಣನೀಯವಾಗಿ ಏರಿಕೆ ಕಂಡಿದೆ. ಬೆರಳು ಕೊಟ್ಟರೆ ಹಸ್ತ ನುಂಗುತ್ತಾರೆ ಎಂಬ ಗಾದೆಯಂತೆ, ನಿಮ್ಮ ಬ್ಯಾಂಕ್‌ಗೆ ಸಂಬಂಧಿಸಿದ ಸ್ವಲ್ಪವೇ ಮಾಹಿತಿ ಸಿಕ್ಕರೂ ಸಾಕು, ವಂಚಕರು ಕ್ಷಣಮಾತ್ರದಲ್ಲಿ ನಿಮ್ಮ ಖಾತೆಯಲ್ಲಿರುವ ಹಣವನ್ನು ಲಪಟಾಯಿಸಿ ಬಿಡುತ್ತಾರೆ. ಪ್ರಮುಖ ಹಬ್ಬಗಳ ಸಮಯದಲ್ಲಿ ಇಂತಹ ವಂಚನೆಗಳು ಹೆಚ್ಚಾಗಿಯೇ ನಡೆಯುತ್ತದೆ
ಸಾಮಾನ್ಯವಾಗಿ ದಸರಾ ಮತ್ತು ದೀಪಾವಳಿಯಂತಹ ಹಬ್ಬಗಳಲ್ಲಿ ಅಮೆಜಾನ್ ಸೇರಿದಂತೆ ಹಲವು ಇ-ಕಾಮರ್ಸ್ ಸಂಸ್ಥೆಗಳು ಉತ್ತಮ ರಿಯಾಯಿತಿಗಳನ್ನು ಘೋಷಿಸುತ್ತವೆ.ಇದನ್ನೇ ದುರುಪಯೋಗಪಡಿಸಿಕೊಳ್ಳುವ ವಂಚಕರು ಹೇಗೋ ನಿಮ್ಮ ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ, ಪ್ರತಿಷ್ಠಿತ ಮಾರಾಟ ಕಂಪನಿಗಳ ಹೆಸರನ್ನು ಬಳಸಿಕೊಂಡು, ದೀಪಾವಳಿ ವಿಶೇಷ ಉಡುಗೊರೆ ಅಥವಾ ಆಫರ್‌ನ ಲಿಂಕ್ ಅನ್ನು ಲಗತ್ತಿಸಿ ಅದನ್ನು ನಿಮಗೆ ಹಂಚಿಕೊಳ್ಳುತ್ತಾರೆ. ಇದರ ಸತ್ಯಾಂಶವನ್ನು ಅರಿಯದ ಅನೇಕರು, ಆ ಲಿಂಕ್‌ನಲ್ಲಿ ಏನಿರಬಹುದು ಎಂಬ ಕುತೂಹಲದಿಂದ ಅದನ್ನು ಕ್ಲಿಕ್ ಮಾಡುತ್ತಾರೆ.
Diwali Gift Offer Scam ಈ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಅದು ನೇರವಾಗಿ ಒಂದು ನಕಲಿ ಹೋಮ್‌ಪೇಜ್‌ಗೆ ಕರೆದೊಯ್ಯುತ್ತದೆ. ಅಲ್ಲಿ ತಿರುಗುವ ಚಕ್ರದಂತಹ (Spinning Wheel) ಆಟವನ್ನು ಇಟ್ಟಿರುತ್ತಾರೆ. ಆ ಚಕ್ರದಲ್ಲಿ ಐಫೋನ್, ಹಣ ಅಥವಾ ಇನ್ನಿತರೆ ದುಬಾರಿ ವಸ್ತುಗಳ ಚಿತ್ರಗಳನ್ನು ಹಾಕಿರುತ್ತಾರೆ. ಮೊದಲ ಬಾರಿ ಆ ಚಕ್ರವನ್ನು ತಿರುಗಿಸಿದಾಗ ನಿಮಗೆ ಬಹುಶಃ ಏನೂ ಸಿಗದಿರಬಹುದು. ಆದರೆ ಎರಡನೇ ಬಾರಿ ಪ್ರಯತ್ನಿಸಿದಾಗ ನೀವು ಐಫೋನ್ ಅಥವಾ ದೊಡ್ಡ ಮೊತ್ತದ ಹಣವನ್ನು ಗೆದ್ದಿದ್ದೀರಿ ಎಂಬ ಸಂದೇಶವನ್ನು ತೋರಿಸುತ್ತಾರೆ. ನಂತರ, ಈ ಬಹುಮಾನವನ್ನು ನಿಮ್ಮದಾಗಿಸಿಕೊಳ್ಳಲು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ನಮೂದಿಸುವಂತೆ ಕೇಳಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸುತ್ತಾರೆ. ಅಷ್ಟೇ ಅಲ್ಲದೆ, ಜನರನ್ನು ಸುಲಭವಾಗಿ ನಂಬಿಸಲು, ಆ ಪುಟದ ಕೆಳಭಾಗದಲ್ಲಿ ನಾವು ಐಫೋನ್ ಗೆದ್ದಿದ್ದೇವೆ, ಹಣ ಪಡೆದಿದ್ದೇವೆ ಎಂಬಂತಹ ನಕಲಿ ಕಾಮೆಂಟ್‌ಗಳನ್ನು ಸಹ ಪ್ರಕಟಿಸಿರುತ್ತಾರೆ. ಇದರಿಂದ ಸಾರ್ವಜನಿಕರ ನಂಬಿಕೆ ಗಳಿಸಿ ಅವರ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಾರೆ. ಅಂತಿಮವಾಗಿ, ಈ ಲಿಂಕ್ ಅನ್ನು ಇತರ 10 ಜನರಿಗೆ ಶೇರ್ ಮಾಡುವಂತೆ ಹೇಳುವ ಮೂಲಕ ವಂಚಕರು ಇತರೆ ಅಮಾಯಕರನ್ನೂ ತಮ್ಮ ಜಾಲಕ್ಕೆ ಬೀಳಿಸಿಕೊಳ್ಳುತ್ತಾರೆ.
ಈ ರೀತಿಯಾಗಿ ಹಬ್ಬದ ಸೀಸನ್‌ಗಳನ್ನು ಬಳಸಿಕೊಂಡು ಉಡುಗೊರೆಗಳ ಆಮಿಷ ತೋರಿಸಿ ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ಲಪಟಾಯಿಸುವ ದಂಧೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಈ ಕುರಿತು ಪೊಲೀಸ್ ಇಲಾಖೆಯು ಸಹ ಅನೇಕ ಬಾರಿ ಎಚ್ಚರಿಕೆಗಳನ್ನು ನೀಡಿದೆ. ಆದ್ದರಿಂದ, ಸಾರ್ವಜನಿಕರು ಹಬ್ಬದ ಸಂದರ್ಭದಲ್ಲಿ ಇಂತಹ ಉಚಿತ ಉಡುಗೊರೆಗಳ ಆಸೆಗೆ ಬಿದ್ದು ಸೈಬರ್ ವಂಚಕರ ಬಲೆಗೆ ಬೀಳದೆ ಎಚ್ಚರಿಕೆಯಿಂದ ಇರಬೇಕು ಎಂಬುವುದು ಮಲೆನಾಡು ಟುಡೆ ಸುದ್ದಿಯು ಕಳಕಳಿಯ ಮನವಿ.
ವರದಿ : ಪ್ರತಾಪ್ ತೀರ್ಥಹಳ್ಳಿ