Dharmasthala : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಗಂಭೀರ ಅಪರಾಧ ಕೃತ್ಯಗಳು ನಡೆದಿವೆ ಎಂದು ವಕೀಲರ ಮೂಲಕ ಪೊಲೀಸರಿಗೆ ದೂರು ನೀಡಿದ್ದ ಅಜ್ಞಾತ ವ್ಯಕ್ತಿಯೊಬ್ಬರು ಶುಕ್ರವಾರ ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್ ಕೆ. ಅವರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.
Dharmasthala: ಬಿಗಿ ಭದ್ರತೆಯಲ್ಲಿ ಹೇಳಿಕೆ
ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಅವರೊಂದಿಗೆ ಕಾರಿನಲ್ಲಿ ನ್ಯಾಯಾಲಯಕ್ಕೆ ಬಂದ ದೂರುದಾರರು, ತಮ್ಮ ಗುರುತು ಬಹಿರಂಗವಾಗದಂತೆ ತಲೆಯಿಂದ ಕಾಲಿನವರೆಗೆ ಕಪ್ಪು ಬಣ್ಣದ ಮುಸುಕು ಧರಿಸಿದ್ದರು. ನ್ಯಾಯಾಲಯದ ಆವರಣದಲ್ಲಿ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದರು. ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ನಂತರ, ಈ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಹೆಚ್ಚಿನ ಹೇಳಿಕೆ ಪಡೆಯಲಾಯಿತು ಎಂದು ಮೂಲಗಳು ತಿಳಿಸಿವೆ.
Dharmasthala: ನ್ಯಾಯಾಲಯದಲ್ಲಿ ದೂರು ದಾಖಲು:
ಬೆಳ್ತಂಗಡಿ ನ್ಯಾಯಾಲಯಕ್ಕೆ ಬಂದಿದ್ದ ದೂರುದಾರರ ದೂರನ್ನು, ಬಿಎನ್‌ಎಸ್ ಸೆಕ್ಷನ್ 183ರ ಅಡಿಯಲ್ಲಿ ನ್ಯಾಯಾಲಯ ದಾಖಲಿಸಿಕೊಂಡಿದೆ” ಎಂದು ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಜಂಟಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Dharmasthala: ವಕೀಲರ ವಾದ ಮತ್ತು ನ್ಯಾಯಾಲಯದ ನಿಲುವು
ದೂರುದಾರರು ಅನಕ್ಷರಸ್ಥರಾಗಿದ್ದು, ಈ ಹಿಂದೆ ಯಾವುದೇ ನ್ಯಾಯಾಲಯಕ್ಕೆ ಹೋಗಿಲ್ಲ ಎಂದು ತಿಳಿಸಿದ್ದರು. ಆದ್ದರಿಂದ ಹೇಳಿಕೆ ನೀಡುವಾಗ ತಮ್ಮಿಬ್ಬರಲ್ಲಿ ಒಬ್ಬ ವಕೀಲರು ಜೊತೆಗಿರುವಂತೆ ಕೋರಿದ್ದರು. ಈ ಅಂಶವನ್ನು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ, ನ್ಯಾಯಾಲಯವು ಹೇಳಿಕೆ ಪಡೆಯುವ ವೇಳೆ ವಕೀಲರು ಹಾಜರಿರುವುದನ್ನು ಒಪ್ಪಲಿಲ್ಲ ಎಂದು ವಕೀಲರು ತಿಳಿಸಿದ್ದಾರೆ.
ದೂರುದಾರರಿಗೆ ಸಾಕ್ಷಿ ರಕ್ಷಣಾ ಯೋಜನೆ 2018ರ ಅಡಿಯಲ್ಲಿ ಸೂಕ್ತ ರಕ್ಷಣೆ ಒದಗಿಸಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಜುಲೈ 10ರಂದು ನಮಗೆ ತಿಳಿಸಿದ್ದರು. ಈ ಕಾರಣಕ್ಕೆ ದೂರುದಾರರು ನ್ಯಾಯಾಲಯ, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಕರ್ನಾಟಕ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ” ಎಂದು ವಕೀಲರು ಹೇಳಿದ್ದಾರೆ.
ಮುಂದಿನ ತನಿಖೆ ಮತ್ತು ಸಾಕ್ಷ್ಯಗಳ ರಕ್ಷಣೆ:
ಈಗಾಗಲೇ ತೆಗೆದಿರುವ ಒಂದು ತಲೆ ಬುರುಡೆಯನ್ನು ಹಸ್ತಾಂತರಿಸುವ ಕಾರ್ಯ ನಡೆಯುತ್ತಿದೆ. ಎಫ್.ಎಸ್.ಎಲ್. ತಂಡದವರು ಸ್ಥಳದಲ್ಲಿದ್ದಾರೆ. ಉಳಿದ ಹೂತು ಹಾಕಿರುವ ದೇಹಗಳನ್ನು ದೂರುದಾರ ವ್ಯಕ್ತಿ ಈಗಲೂ ತೋರಿಸಲು ಸಿದ್ಧ ಇದ್ದಾರೆ. ಅದರ ಹಿಂದಿರುವ ಸಾಕ್ಷ್ಯ ನಾಶವಾಗುವ ಮೊದಲು ಆದಷ್ಟು ಬೇಗ ತನಿಖೆ ಆಗಬೇಕು” ಎಂದು ವಕೀಲರು ಒತ್ತಾಯಿಸಿದ್ದಾರೆ. ದೂರುದಾರ ವ್ಯಕ್ತಿಗೆ ಕಸ್ಟಡಿ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಅವರು ನಮ್ಮ ಜತೆಯೇ ಇರುತ್ತಾರೆ” ಎಂದರು.
ಜುಲೈ 3ರಂದು ನೀಡಿದ್ದ ದೂರಿನಲ್ಲಿ, “ನನಗೆ ಜೀವಬೆದರಿಕೆ ಒಡ್ಡಿ, ಅಪರಾಧ ಕೃತ್ಯಗಳ ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿಸಿದ್ದಾರೆ. ಹಲವಾರು ಮೃತದೇಹಗಳ ವಿಲೇವಾರಿ ಮಾಡಿದ್ದು, ಈ ಬಗ್ಗೆ ಪಾಪಪ್ರಜ್ಞೆ ಕಾಡುತ್ತಿದೆ. ನನಗೆ ಹಾಗೂ ನನ್ನ ಕುಟುಂಬದವರಿಗೆ ಕಾನೂನಾತ್ಮಕ ರಕ್ಷಣೆ ದೊರೆತರೆ ಕೃತ್ಯ ನಡೆಸಿದವರ ಮಾಹಿತಿ ಹಾಗೂ ನಾನು ಮೃತದೇಹ ವಿಲೇವಾರಿ ಮಾಡಿದ ಸ್ಥಳಗಳನ್ನು ತಿಳಿಸಲು ಸಿದ್ಧನಿದ್ದೇನೆ” ಎಂದು ಆ ವ್ಯಕ್ತಿ ತಿಳಿಸಿದ್ದರು.
ಪೊಲೀಸ್ ಇಲಾಖೆಯ ಪ್ರತಿಕ್ರಿಯೆ
ದೂರಿನ ಬಗ್ಗೆ ಕೋರ್ಟ್ ಅನುಮತಿ ಪಡೆದು ಪ್ರಕರಣ ದಾಖಲಿಸಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದರು. ದೂರುದಾರರು ತಮ್ಮ ಹೆಸರು ಮತ್ತು ಮಾಹಿತಿಯನ್ನು ಗೋಪ್ಯವಾಗಿ ಇಡುವಂತೆ ವಿನಂತಿಸಿಕೊಂಡ ಕಾರಣ, ಪೊಲೀಸರು ಅವರ ವಿವರಗಳನ್ನು ಬಹಿರಂಗಪಡಿಸಿಲ್ಲ ಮತ್ತು ಯಾವುದೇ ಹೆಚ್ಚುವರಿ ಮಾಹಿತಿ ನೀಡಿಲ್ಲ.
