Cylinder blast in shivamogga ಶಿವಮೊಗ್ಗ: ಗ್ಯಾಸ್ ಸಿಲಿಂಡರ್ ಸ್ಫೋಟ, ಮೂವರಿಗೆ ಗಾಯ
ಶಿವಮೊಗ್ಗದ ಶರಾವತಿ ನಗರದಲ್ಲಿ ನಿನ್ನೆ ಸಂಜೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂವರು ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಮನೆಯ ಛಾವಣಿ ಹಾರಿ ಹೋಗಿದ್ದು, ಒಳಗಿದ್ದ ವಸ್ತುಗಳಿಗೂ ಹಾನಿಯಾಗಿದೆ.
ಶರಾವತಿ ನಗರದ 1ನೇ ಅಡ್ಡರಸ್ತೆಯ ಸುನ್ನಿ ಮಾಸ್ಜಿದ್ ಏ ಶೆಹ್‌ಜಾದಿ ಅಸ್ಗರ್ ಮಸೀದಿ ಪಕ್ಕದ ಓಣಿಯಲ್ಲಿದ್ದ ಎಂ.ಬಿ.ಪೀರಾನ್ ಸಾಬ್ (48) ಎಂಬುವವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಸ್ಫೋಟ ಸಂಭವಿಸಿದಾಗ ಮನೆಯ ಮುಂದೆ ಕುಳಿತಿದ್ದ ಪೀರಾನ್ ಸಾಬ್, ಅವರ ಪತ್ನಿ ಸಾಹೇರಾ (40) ಮತ್ತು ಸೊಸೆ ಜಯೇಬಾ (22) ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೀರಾನ್ ಸಾಬ್ ಅವರಿಗೆ ಮೈತುಂಬಾ ಗಾಯಗಳಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್‌ಗೆ ಸಾಗಿಸುವ ಸಾಧ್ಯತೆಯಿದೆ. ಸ್ಫೋಟದ ಶಬ್ದಕ್ಕೆ ನೆರೆಹೊರೆಯ ನಿವಾಸಿಗಳು ತೀವ್ರ ಆತಂಕಕ್ಕೊಳಗಾಗಿದ್ದಾರೆ.


ಘಟನೆ ನಡೆದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
