Cyber crime news :ಶಿವಮೊಗ್ಗ: ಗೋಲ್ಡ್ ಮತ್ತು ಸಿಲ್ವರ್‌ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಸಿಗುತ್ತದೆ ಎಂದು ನಂಬಿಸಿ ಸೈಬರ್ ವಂಚಕರು ಹೊಸನಗರದ ನಿವಾಸಿಯೊಬ್ಬರಿಗೆ 18,27,731 ರೂಪಾಯಿಗಳನ್ನು ವಂಚಿಸಿದ್ದಾರೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಕಂಪನಿಯ ಹೆಸರು ಹೇಳಿ ಆರೋಪಿಗಳು, ದೂರುದಾರರನ್ನು ಸಂಪರ್ಕಿಸಿ ಗೋಲ್ಡ್ ಮತ್ತು ಸಿಲ್ವರ್ ಮೇಲೆ ಇನ್ವೆಸ್ಟ್ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ಭರವಸೆ ನೀಡಿದ್ದಾರೆ. ಹಾಗೆಯೇ 3 ಲಕ್ಷ ಹಣವನ್ನು ಇನ್ವೆಸ್ಟ್ ಮಾಡಿದರೆ ಅಷ್ಟೇ ಹಣ ಲಾಭಾಂಶದ ರೂಪದಲ್ಲಿ ಸಿಗುತ್ತದೆ ಎಂದು ತಿಳಿಸಿ ಹೂಡಿಕೆಗೆ ಆಫರ್ ಇದೆ ಎಂದು ನಂಬಿಸಿದ್ದಾರೆ. ಅವರ ಮಾತನ್ನು ನಂಬಿದ ದೂರುದಾರರು, ಅಪರಿಚಿತರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ RTGS ಮೂಲಕ ಹಣವನ್ನು ಹೂಡಿಕೆ ಮಾಡಿದ್ದಾರೆ.
ಆದರೆ, ಹೂಡಿಕೆ ಮಾಡಿದ ನಂತರ ವಂಚಕರ ನಿಜಬಣ್ಣ ಬಯಲಾಗಿದೆ. ಮೊದಲು, ‘ಸೇಲ್ ಮತ್ತು ಬೈಯಿಂಗ್’ ಮಾಡಲು ನಿಮ್ಮ ಖಾತೆಯಲ್ಲಿ ಹಣವಿರುವುದಿಲ್ಲವೆಂದು ತಿಳಿಸಿದ್ದಾರೆ. ನಂತರ, ಹೂಡಿಕೆ ಮಾಡಿದ ಹಣವು ಡಬಲ್ ಆಗಿದೆ, ಆದರೆ ಆ ಹಣವನ್ನು ವಿತ್‌ಡ್ರಾ ಮಾಡಲು ಮತ್ತಷ್ಟು ಹಣವನ್ನು ಕಟ್ಟಬೇಕು ಎಂದು ತಿಳಿಸಿದ್ದಾರೆ. ದೂರುದಾರರು ಹಣ ವಿತ್‌ಡ್ರಾ ಮಾಡಲು ಹೋದಾಗ ಅವರ ಅಕೌಂಟ್‌ಗೆ ಹಣ ವರ್ಗಾವಣೆಯಾಗಿಲ್ಲ. ಆಗ, ಹಣ ವಿತ್‌ಡ್ರಾ ಆಗಬೇಕಾದರೆ ಮೊದಲು ಸೆಕ್ಯೂರಿಟಿ ಡೆಪಾಸಿಟ್ ಹಣವನ್ನು ಅಪರಿಚಿತರು ಹೇಳಿದ ಬ್ಯಾಂಕ್ ಅಕೌಂಟ್‌ಗೆ ಹಾಕಬೇಕು ಎಂದು ವಂಚಕರು ಒತ್ತಾಯಿಸಿದ್ದಾರೆ.
ಈ ರೀತಿ ಅಪರಿಚಿತರು ವಿವಿಧ ಕಾರಣಗಳನ್ನು ನೀಡಿ, ದೂರುದಾರರು ಮತ್ತು ಅವರ ಪತ್ನಿಯವರ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಹಣವನ್ನು ಹಾಕಿಸಿಕೊಂಡಿದ್ದಾರೆ. ಆನ್‌ಲೈನ್ ಮೂಲಕ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಕೊಡುತ್ತೇವೆ ಎಂದು ನಂಬಿಸಿ, ವಿವಿಧ ಬ್ಯಾಂಕ್ ಖಾತೆಗಳನ್ನು ನೀಡಿ, ದೂರುದಾರರ ಬ್ಯಾಂಕ್ ಖಾತೆಯಿಂದ ಒಟ್ಟು 18,27, 731ರೂಪಾಯಿ ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಎಂದು ದೂರುದಾರರು ಆರೋಪಿಸಿದ್ದಾರೆ.