crime news : ಕಾರವಾರ: ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸಿದ್ದ ಭಟ್ಕಳ ತಾಲೂಕಿನ ಹಾಡವಳ್ಳಿ ಗ್ರಾಮದಲ್ಲಿ ನಡೆದಿದ್ದ ನಾಲ್ವರ ಕೊಲೆ ಪ್ರಕರಣದ ಆರೋಪಿಗಳಿಗೆ ಉತ್ತರ ಕನ್ನಡ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದ್ದಾರೆ. ಪ್ರಕರಣದ ಮೊದಲ ಆರೋಪಿಯಾಗಿದ್ದ ಶ್ರೀಧರ್ ಭಟ್ ಗೆ ಜೀವಾವಾಧಿ ಶಿಕ್ಷೆ ಹಾಗೂ ಎರಡನೇ ಆರೋಪಿಯಾಗಿದ್ದ ವಿನಯ್ ಭಟ್ ಗೆ ಮರಣ ದಂಡನೆ ಶಿಕ್ಷೆ ನೀಡಿ ನ್ಯಾಯಾಧೀಶರಾದ ಡಿ.ಎಸ್ ವಿಜಯ ಕುಮಾರ್ ತೀರ್ಪು ನೀಡಿದ್ದಾರೆ.
ಭಟ್ಕಳ ತಾಲೂಕಿನ ಹಾಡವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ಕಳೆದ 2023 ರ ಫೆಬ್ರವರಿ 24 ರಂದು ಭೀಕರ ಕೊಲೆ ಘಟನೆಯೊಂದು ನಡೆದಿತ್ತು. ತೋಟದ ಮನೆಯೊಂದರಲ್ಲಿ ವಾಸವಿದ್ದ ಶಂಭು ಭಟ್, ಆತನ ಪತ್ನಿ ಮಾದೇವಿ ಭಟ್, ಮಗ ರಾಘು ಭಟ್ ಹಾಗೂ ಸೊಸೆ ಕುಸುಮಾ ಭಟ್ ಎನ್ನುವವರನ್ನ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಒಂದೇ ಕುಟುಂಬದ ನಾಲ್ವರ ಹತ್ಯೆ ಇಡೀ ಉತ್ತರ ಕನ್ನಡ ಜಿಲ್ಲೆಯನ್ನ ಬೆಚ್ಚಿ ಬೀಳಿಸಿದ್ದು, ತನಿಖೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಭಟ್ಕಳ ಡಿ.ವೈ.ಎಸ್.ಪಿ ನೇತೃತ್ವದಲ್ಲಿ ಮೂರು ತಂಡಗಳನ್ನ ಮಾಡಿ ಹತ್ಯೆ ಆರೋಪಿಗಳನ್ನ ಬಂಧಿಸಲು ಕಾರ್ಯಾಚರಣೆಗೆ ಇಳಿದಿದ್ದರು.
ಇನ್ನು ತನಿಖೆಗೆ ಇಳಿದ ಪೊಲೀಸರು ಮನೆಯ ಸೊಸೆಯಾಗಿದ್ದ ವಿದ್ಯಾ ಭಟ್ ಎನ್ನುವರರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಸ್ತಿ ವಿಚಾರದಲ್ಲಿ ತನ್ನ ಸಹೋದರ ವಿನಯ ಭಟ್ ಹಾಗೂ ತಂದೆ ಶ್ರೀಧರ್ ಭಟ್ ಎನ್ನುವವರು ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದರು. ಇನ್ನು ಸಾಗರ ತಾಲೂಕಿನಲ್ಲಿ ಪೊಲೀಸರು ಇಬ್ಬರನ್ನ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದು ಅಂದಿನಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು.

ಭಟ್ಕಳ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಚಂದನ ಗೋಪಾಲ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು ನ್ಯಾಯಾಲಯದಲ್ಲಿ ತ್ವರಿತವಾಗಿ ವಿಚಾರಣೆ ನಡೆದಿದ್ದು ಸುಮಾರು 71 ಸಾಕ್ಷಿಗಳ ವಿಚಾರಣೆಯನ್ನ ನಡೆಸಿದ್ದರು. ಅಂತಿಮವಾಗಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ.ಎಸ್ ವಿಜಯ್ ಕುಮಾರ್ ಪ್ರಕರಣದ ಎರಡನೇ ಆರೋಪಿ ವಿನಯ್ ಭಟ್ ಗೆ ಸಿ.ಆರ್.ಪಿ.ಸಿ 354(5) ರಂತೆ ಮರಣ ದಂಡನೆ ವಿಧಿಸಿದ್ದಾರೆ. ಆತನ ತಂದೆ ಶ್ರೀಧರ್ ಭಟ್ ಎಂಬಾತನಿಗೆ ಭಾರತೀಯ ದಂಡ ಸಂಹಿತೆ 302ರಡಿಯಲ್ಲಿ ಜೀವಾವಾಧಿ ಶಿಕ್ಷೆ ನೀಡಿ ಆದೇಶಿಸಿದ್ದಾರೆ.
crime news : ಘಟನೆಗೆ ಕಾರಣ
ಕೊಲೆಯಾದ ಶಂಭು ಭಟ್ಟರ ಹಿರಿಯ ಮಗನ ಜೊತೆ ವಿದ್ಯಾಭಟ್ ಎಂಬಾಕೆ ಮದುವೆಯಾಗಿದ್ದಳು. ಶಂಭು ಭಟ್ಟರ ಮೊದಲ ಮಗ 2022ರಲ್ಲಿ ಕ್ಯಾನ್ಸರ್ ನಿಂದ ಮೃತಪಟ್ಟಿದ್ದನು. ಇದಾದ ನಂತರ ತನ್ನ ಪಾಲಿಗೆ ಗಂಡನಿಂದ ಬರಬೇಕಾಗಿದ್ದ ಆಸ್ತಿ ಕೊಡುವಂತೆ ವಿದ್ಯಾ ಭಟ್ ತನ್ನ ಮಾವ ಕೊಲೆಯಾದ ಶಂಭು ಭಟ್ ಗೆ ಒತ್ತಾಯ ಮಾಡಲು ಮುಂದಾಗಿರುತ್ತಾಳೆ. ಶಂಭು ಭಟ್ ಬಳಿ ಸುಮಾರು 6 ಎಕರೆ ಅಡಿಕೆ ತೋಟವಿದ್ದು, ತೋಟದಲ್ಲಿ ಪಾಲು ಕೊಡುವ ವಿಚಾರದಲ್ಲಿ ವಿದ್ಯಾ ಭಟ್ ಕುಟುಂಬ ಹಾಗೂ ಶಂಭು ಭಟ್ ಕುಟುಂಬದ ನಡುವೆ ಗಲಾಟೆ ನಡೆಯುತ್ತಿತ್ತು. ಕೊಲೆಯಾದ ಶಂಭು ಭಟ್ ಅಂತಿಮವಾಗಿ 1.9 ಎಕರೆ ತೋಟವನ್ನ ವಿದ್ಯಾ ಭಟ್ ಗೆ ನೀಡಿದ್ದರು ಗಲಾಟೆ ಮಾತ್ರ ಮುಂದುವರೆದಿತ್ತು. ಶಂಭು ಭಟ್ ತನ್ನ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಪಾಲನ್ನ ಕೊಟ್ಟಿದ್ದು ಇದು ವಿದ್ಯಾ ಭಟ್ ಹಾಗೂ ಶಂಭು ಭಟ್ ಜೊತೆ ಜಗಳಕ್ಕೆ ಕಾರಣವಾಗಿತ್ತು ಎನ್ನಲಾಗಿತ್ತು.
ಇನ್ನು ವಿದ್ಯಾ ಭಟ್ ಗೆ ನೀಡಿದ್ದ ತೋಟವನ್ನ ಸಹೋದರ ವಿನಯ್ ಭಟ್ ನೋಡಿಕೊಳ್ಳುತ್ತಿದ್ದ. 2023ರ ಫೆಬ್ರವರಿ 24 ರ ಮಧ್ಯಾಹ್ನ ತಂದೆ ಶ್ರೀಧರ್ ಭಟ್ ಜೊತೆ ತೋಟಕ್ಕೆ ಆಗಮಿಸಿದ ವೇಳೆಯಲ್ಲಿ ಮತ್ತೆ ಗಲಾಟೆ ನಡೆದಿತ್ತು. ಈ ಗಲಾಟೆ ತಾರಕಕ್ಕೆ ಏರಿ ಮನೆಯಲ್ಲಿದ್ದ ನಾಲ್ವರನ್ನ ವಿನಯ್ ಭಟ್ ಹಾಗೂ ಆತನ ತಂದೆ ಶ್ರೀಧರ್ ಭಟ್ ಕೊಚ್ಚಿ ಕೊಲೆ ಮಾಡಿದ್ದರು. ವಿನಯ್ ಭಟ್ ಮೂವರನ್ನ ಕೊಲೆ ಮಾಡಿದ್ದರೆ ಆತನ ತಂದೆ ಶ್ರೀಧರ್ ಭಟ್ ಒಬ್ಬರನ್ನ ಕಡಿದು ಕ್ರೂರವಾಗಿ ಕೊಲೆ ಮಾಡಿದ್ದನು.
crime news : ಬಚಾವಾಗಿದ್ದ ಮಕ್ಕಳು
ಕೊಲೆ ಸಂದರ್ಭದಲ್ಲಿ ಕೊಲೆಯಾಗಿದ್ದ ರಾಘು ಭಟ್ ಹಾಗೂ ಕುಸುಮಾ ಭಟ್ ಅವರ ಇಬ್ಬರು ಮಕ್ಕಳು ಬಚಾವ್ ಆಗಿದ್ದರು. ಕೊಲೆ ಮಾಡುವ ಸಂದರ್ಭದಲ್ಲಿ ಪುಟ್ಟ ಮಗ ಕಾಲಿಗೆ ಹೊಡೆತ ಬಿದ್ದಿದ್ದರಿಂದ ಮನೆಯ ಒಳಗೆ ಮಲಗಿದ್ದು ಇದು ಕೊಲೆ ಮಾಡಿದ್ದ ವಿನಯ್ ಭಟ್ ಗೆ ತಿಳಿದಿರಲಿಲ್ಲ. ಇನ್ನು ಮಗಳು ಶಾಲೆಗೆ ತೆರಳಿದ್ದು ಆಕೆ ಶಾಲೆಯಿಂದ ಮನೆಗೆ ವಾಪಾಸ್ ಆದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿತ್ತು.
crime news ಭಟ್ಕಳದಲ್ಲಿ ನಡೆದಿದ್ದ ಈ ಘಟನೆ ಇಡೀ ಜಿಲ್ಲೆಯಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಸದ್ಯ ನ್ಯಾಯಾಲಯ ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನ ವಿಧಿಸಿದೆ. ಸಿಟ್ಟಿನ ಕೈಗೆ ಬುದ್ದಿ ಕೊಟ್ಟ ತಂದೆ ಮಗನಿಗೆ ನ್ಯಾಯಾಲಯ ತಕ್ಕ ಶಿಕ್ಷೆಯೇ ನೀಡಿದ್ದು ಅಪರಾದ ಪ್ರಕರಣದಲ್ಲಿ ತೊಡಗುವವರಿಗೆ ಎಚ್ಚರಿಕೆ ಕೊಟ್ಟಂತಾಗಿದೆ.