Biofuel Sector ಶಿವಮೊಗ್ಗ: ಜೈವಿಕ ಇಂಧನ ಕ್ಷೇತ್ರದಲ್ಲಿ ಸಮಗ್ರ ಮತ್ತು ಸುಸ್ಥಿರ ಬೆಳವಣಿಗೆಯನ್ನು ಸಾಧಿಸಲು ಸಂಶೋಧನೆ ಮತ್ತು ತಾಂತ್ರಿಕ ಸಂಸ್ಥೆಗಳ ಸಹಕಾರ ಅನಿವಾರ್ಯ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಇ. ಸುಧೀಂದ್ರ ಹೇಳಿದರು. ಅವರು ಆಗಸ್ಟ್ 2, 2025 ರಂದು ಜವಹರಲಾಲ್ ನೆಹರು ಕಾಲೇಜ್ ಆಫ್ ಇಂಜಿನಿಯರಿಂಗ್ (ಜೆಎನ್‌ಸಿಇ), ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (KSCST) ಹಾಗೂ ಭಾರತೀಯ ವಿಜ್ಞಾನ ಮಂದಿರ ಸಹಯೋಗದಲ್ಲಿ ಆಯೋಜಿಸಿದ್ದ 48ನೇ ವಿದ್ಯಾರ್ಥಿ ಯೋಜನಾ ಕಾರ್ಯಕ್ರಮ (SPP) ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
Biofuel Sector ಜೈವಿಕ ಇಂಧನ ದಿನಾಚರಣೆ ಮತ್ತು ಕಾಲೇಜಿಗೆ ಪ್ರಶಂಸೆ
ಈ ಸಂದರ್ಭದಲ್ಲಿ ಮಾತನಾಡಿದ ಸುಧೀಂದ್ರ, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಕ್ಕೆ ಮತ್ತು ಇದೇ ಸಂದರ್ಭದಲ್ಲಿ ಜೈವಿಕ ಇಂಧನ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಯನ್ನು ಜೈವಿಕ ಇಂಧನ ಸಸಿಗಳನ್ನು ನೀಡುವ ಮೂಲಕ ಹಾಗೂ ವಾಹನಗಳಿಗೆ ಬಯೋಡೀಸೆಲ್ ಹಾಕುವ ಮೂಲಕ ಆಚರಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು. ಜೆಎನ್‌ಸಿಇ ಕಾಲೇಜು 1946ರಲ್ಲಿ ಪ್ರಾರಂಭವಾಗಿ 44 ವರ್ಷಗಳ ಇತಿಹಾಸವನ್ನು ಹೊಂದಿದೆ ಮತ್ತು ಬೆಳಗಾವಿ ತಾಂತ್ರಿಕ ವಿಶ್ವವಿದ್ಯಾಲಯದ 233 ಕಾಲೇಜುಗಳಲ್ಲಿ 5ನೇ ಸ್ಥಾನದಲ್ಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
Biofuel Sector ಹೊಸ ನೀತಿಯಿಂದ 1 ಲಕ್ಷ ಕೋಟಿ ಬಂಡವಾಳ ನಿರೀಕ್ಷೆ
ಜೈವಿಕ ಇಂಧನ ಕ್ಷೇತ್ರದ ಕುರಿತು ಮಾತನಾಡಿದ ಸುಧೀಂದ್ರ, ಹೊಸ ಜೈವಿಕ ಇಂಧನ ನೀತಿಯ ರಚನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಾರ್ಗದರ್ಶನವಿದೆ. ಈ ನೀತಿಯ ಮುಖ್ಯ ಉದ್ದೇಶವು ಕೈಗಾರಿಕೀಕರಣಕ್ಕೆ ಒತ್ತು ನೀಡುವುದು ಮತ್ತು ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಜೈವಿಕ ಇಂಧನ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದು. ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆ, 3 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ, ಮತ್ತು ರೈತರ ಆದಾಯ ಹೆಚ್ಚಳದ ನಿರೀಕ್ಷೆಯಿದೆ ಎಂದು ತಿಳಿಸಿದರು. ಈ ಎಲ್ಲಾ ಕಾರ್ಯಕ್ರಮಗಳು ಕರ್ನಾಟಕವನ್ನು ಜೈವಿಕ ಇಂಧನ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಮಾದರಿಯಾಗಲು ಸಹಾಯ ಮಾಡಲಿವೆ ಎಂದು ಅವರು ಆಶಿಸಿದರು.
KSCST ಸಹಯೋಗಕ್ಕೆ ಮೆಚ್ಚುಗೆ
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ (KSBD) 2010-11 ರಿಂದ KSCST ಜೊತೆ ಕೈಜೋಡಿಸಿದ್ದು, 1.50 ಕೋಟಿಗೂ ಹೆಚ್ಚು ಅನುದಾನ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದರು. ತುಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ, ಜಿಕೆವಿಕೆಯಲ್ಲಿರುವ ಪ್ರಯೋಗಾಲಯ, ಮತ್ತು ಶಿವಮೊಗ್ಗದ ಜೈವಿಕ ಇಂಧನ ಕೇಂದ್ರಗಳ ಯಶಸ್ಸನ್ನು ಶ್ಲಾಘಿಸಿದರು.