Ayanur manjunath : ಶಿವಮೊಗ್ಗ: ಧರ್ಮಸ್ಥಳದ ಮೇಲಿನ ಆರೋಪಗಳ ಕುರಿತು ಕಾಂಗ್ರೆಸ್ ಸರ್ಕಾರ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಿದ ನಂತರವೇ ಸತ್ಯಗಳು ಹೊರಬರಲಾರಂಭಿಸಿವೆ. ಇದರಿಂದಾಗಿ ಧರ್ಮಸ್ಥಳದ ಗೌರವ ಹೆಚ್ಚಾಗಿದೆಯೇ ಹೊರತು, ಬಿಜೆಪಿಯ ಹೋರಾಟದಿಂದಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಧರ್ಮಸ್ಥಳದ ವಿರುದ್ಧ ಷಡ್ಯಂತರ ನಡೆದಿದೆ ಎಂದು ಹೇಳಿಕೆ ನೀಡಿದ ನಂತರವೇ ಬಿಜೆಪಿ ಹೋರಾಟಕ್ಕೆ ಮುಂದಾಗಿದೆ. ಕಳೆದ 12 ವರ್ಷಗಳಿಂದ ಈ ಕಳಂಕ ಇದ್ದರೂ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಯಾವುದೇ ಧ್ವನಿ ಎತ್ತಿರಲಿಲ್ಲ. ನಮ್ಮ ಸರ್ಕಾರ ಎಸ್ಐಟಿ ರಚನೆ ಮಾಡಿದ ನಂತರವೇ ಒಂದೊಂದೇ ಸತ್ಯ ಹೊರಬರುತ್ತಿದೆ. ಜೊತೆಗೆ, ನಮ್ಮ ಸರ್ಕಾರದ ಶಕ್ತಿ ಯೋಜನೆಯಿಂದ ಕೋಟ್ಯಂತರ ಮಹಿಳೆಯರು ಉಚಿತವಾಗಿ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಕಾರ್ಯಗಳಿಂದ ಧರ್ಮಸ್ಥಳಕ್ಕೆ ಇದ್ದ ಕಳಂಕ ದೂರವಾಗಿದೆ ಎಂದು ಅವರು ತಿಳಿಸಿದರು.
Ayanur manjunath : ಹಾಸನಕ್ಕೂ ಪಾದಯಾತ್ರೆ ಮಾಡಿ
ಧರ್ಮಸ್ಥಳದ ಪರವಾಗಿ ಪಾದಯಾತ್ರೆ ಮಾಡಿದವರು ರಾಜ್ಯದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಹಿಂದೆ ಹಾಸನದಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ನಡೆದಾಗ, ಅದನ್ನು ಖಂಡಿಸಿ ಬಿಜೆಪಿ ನಾಯಕರು ಪಾದಯಾತ್ರೆ ಮಾಡಲಿಲ್ಲ ಅಥವಾ ನ್ಯಾಯಾಲಯದ ತೀರ್ಪನ್ನು ಬೆಂಬಲಿಸಿ ಮಾತನಾಡಲಿಲ್ಲ. ಈ ನಡೆಗಳಿಂದ, ಬಿಜೆಪಿ ಧರ್ಮದ ಹಾದಿಯಲ್ಲಿ ಅಲ್ಲ, ರಾಜಕೀಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ರಾಜಕೀಯ ಲಾಭ ಪಡೆಯುವ ಬಿಜೆಪಿಯ ನಿಲುವನ್ನು ಅವರು ಖಂಡಿಸಿದ ಅವರು ತಪ್ಪು ಮಾಡಿದವರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.