ac minimum temperature setting ಹೊಸ AC ಗಳಲ್ಲಿ ಕನಿಷ್ಠ 20°C ತಾಪಮಾನ ಸೆಟ್ಟಿಂಗ್ ಕಡ್ಡಾಯ: ವಿದ್ಯುತ್ ಉಳಿತಾಯಕ್ಕೆ ಸರ್ಕಾರದ ಕ್ರಮ
ac minimum temperature setting ನವದೆಹಲಿ: ದೇಶದಲ್ಲಿ ವಿದ್ಯುತ್ ಉಳಿತಾಯ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಮಾರಾಟವಾಗುವ ಎಲ್ಲಾ ಹೊಸ ಏರ್-ಕಂಡಿಷನರ್‌ಗಳು (ACs) ಕನಿಷ್ಠ 20°C ತಾಪಮಾನ ಸೆಟ್ಟಿಂಗ್‌ನೊಂದಿಗೆ ಬರಲಿವೆ. ಪ್ರಸ್ತುತ 16°C ಅಥವಾ 18°C ಕನಿಷ್ಠ ಸೆಟ್ಟಿಂಗ್ ಇದ್ದು, ಗರಿಷ್ಠ ತಾಪಮಾನವನ್ನು 30°C ನಿಂದ 28°C ಗೆ ಇಳಿಸಲಾಗುತ್ತದೆ.
ವಿದ್ಯುತ್ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ಮಂಗಳವಾರ ಈ ಘೋಷಣೆ ಮಾಡಿದ್ದು, 30 ಗಿಗಾ ವ್ಯಾಟ್ ಬ್ಯಾಟರಿ ಸಂಗ್ರಹ ಯೋಜನೆಗಳಿಗೆ ₹5,400 ಕೋಟಿ ವಿಜಿಎಫ್ (VGF) ನಿಧಿಯನ್ನೂ ಪ್ರಕಟಿಸಿದ್ದಾರೆ. ಖಟ್ಟರ್ ಅವರು ಈ ಕ್ರಮವನ್ನು ಅನನ್ಯ ಪ್ರಯೋಗ ಎಂದು ಬಣ್ಣಿಸಿದ್ದು, ಎಸಿ ತಯಾರಕರಿಗೆ ಹೊಸ ಆದೇಶವು ಕೂಲಿಂಗ್ ಕಾರ್ಯಾಚರಣೆಗಳಲ್ಲಿ ದಕ್ಷತೆಯನ್ನು ಸುಧಾರಿಸುತ್ತದೆ, ವಿದ್ಯುತ್ ಬೇಡಿಕೆಯಲ್ಲಿನ ಏರಿಕೆಯನ್ನು ಮತ್ತು ಬೇಸಿಗೆಯಲ್ಲಿ ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು. ಹೊಸ ಮಾನದಂಡಗಳನ್ನು ಅಧಿಸೂಚನೆ ಮಾಡಿದ ನಂತರ, ಅವುಗಳು ವಸತಿ ಸ್ಥಳಗಳಿಂದ ಹಿಡಿದು ಕಚೇರಿ ಬ್ಲಾಕ್‌ಗಳು, ಮಾಲ್‌ಗಳು, ಹೋಟೆಲ್‌ಗಳು ಮತ್ತು ಚಲನಚಿತ್ರ ಮಂದಿರಗಳಂತಹ ವಾಣಿಜ್ಯ ಸಂಸ್ಥೆಗಳವರೆಗೆ ಎಲ್ಲಾ ವಲಯಗಳಲ್ಲಿ ಬಳಸುವ AC ಗಳಿಗೆ ಅನ್ವಯಿಸುತ್ತವೆ ಎಂದರು. ಅಂದಹಾಗೆ ಈ ಪ್ರಯೋಗ ಇಟಲಿ ಮತ್ತು ಜಪಾನ್‌ನಲ್ಲಿನ ಇದೇ ರೀತಿಯ ಕ್ರಮಗಳಿಂದ ಪ್ರೇರಿತವಾಗಿದೆ. ರೋಮ್ ನಲ್ಲಿ ಸಾರ್ವಜನಿಕ ಕಟ್ಟಡಗಳಿಗೆ ಕನಿಷ್ಠ ತಾಪಮಾನ ಸೆಟ್ಟಿಂಗ್ ಅನ್ನು 23°C ಗೆ ನಿಗದಿಪಡಿಸಿದ್ದರೆ, ಜಪಾನ್ 27°C ನ ನಿಶ್ಚಿತ ತಾಪಮಾನದ ನೀತಿಯನ್ನು ಅನುಸರಿಸುತ್ತದೆ.
ಎಸಿ ಸೆಟ್ಟಿಂಗ್ನಲ್ಲಿ ಪ್ರತಿ 1°C ಹೆಚ್ಚಳವು ವಿದ್ಯುತ್ ಬಳಕೆಯನ್ನು 6% ರಷ್ಟು ಕಡಿಮೆ ಮಾಡುತ್ತದೆ. ನಗರ ಪ್ರದೇಶದ 6 ಕೋಟಿ ಕುಟುಂಬಗಳು ಮತ್ತು 12 ಲಕ್ಷ ವಾಣಿಜ್ಯ ಸಂಸ್ಥೆಗಳು ತಮ್ಮ AC ಸೆಟ್ಟಿಂಗ್ ಅನ್ನು 22 ರಿಂದ 24°C ನಡುವೆ ಇಟ್ಟುಕೊಂಡರೆ, ಅದು ವಾರ್ಷಿಕವಾಗಿ 12-15 ಶತಕೋಟಿ ಯೂನಿಟ್‌ಗಳ ವಿದ್ಯುತ್ ಉಳಿತಾಯಕ್ಕೆ ಕಾರಣವಾಗುತ್ತದೆ. ಅಲ್ಲದೆ ಇಂಗಾಲದ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
