SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 22, 2024 shivamogga news
ಪತ್ರಕರ್ತರಿಗೆ ಸರ್ಕಾರದ ವತಿಯಿಂದ ನೀಡಲಾಗುವ ಮೊಹರೆ ಹಣಮಂತರಾಯ’ ಪ್ರಶಸ್ತಿಯು ಶಿವಮೊಗ್ಗದ ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಎನ್ ಮಂಜುನಾಥ್ ರವರಿಗೆ ಲಭಿಸಿದೆ. ಶಿವಾಜಿ ಗಣೇಶನ್,ಪದ್ಮರಾಜ ದಂಡಾವತಿ, ಪೂರ್ಣಿಮಾ, ಕಾಟ್ಕರ್ ಸೇರಿ 5 ಜನ ಪತ್ರಕರ್ತರಿಗೆ ಟಿಎಸ್ಆರ್ ಹೊನ್ನಾಪುರ, ಪಾಲೆತ್ತಾಡಿ, ಕ್ರಾಂತಿದೀಪ ಮಂಜುನಾಥ ಸೇರಿ ಐವರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ ಲಭಿಸಿದೆ. ಒಟ್ಟು 2019 ರಿಂದ 2023 ರವರೆಗಿನ ಟಿಎಸ್ಆರ್ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ ಮಾಡಲಾಗಿದೆ.
ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ನೀಡುವ ಟಿ.ಎಸ್.ರಾಮಚಂದ್ರರಾವ್ (ಟಿಎಸ್ಆರ್)ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಕನ್ನಡ ಪತ್ರಿಕೆ ಅಥವಾ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಪತ್ರಕರ್ತರ ಸಾಧನೆ ಗುರುತಿಸಿ ನೀಡುವ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಕಟಿಸಿದೆ.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅಧ್ಯಕ್ಷತೆಯ ರಚಿತವಾದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತರಾದ ಡಾ.ಈಶ್ವರ ದೈತೋಟ, ಶಾಂತಲಾ ಧರ್ಮರಾಜ್, ಎಂ.ಎಸ್.ಮಣಿ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಅವರಿದ್ದರು. ಈ ಸಮಿತಿಯ ಶಿಫಾರಸ್ಸುಗಳನ್ನು ಸರಕಾರ ಅನುಮೋದಿಸಿ ಪ್ರಶಸ್ತಿ ಘೋಷಿಸಿದೆ.
ಟಿ.ಎಸ್. ರಾಮಚಂದ್ರರಾವ್ (ಟಿಯೆಸ್ಸಾರ್) ಪತ್ರಿಕೋದ್ಯಮ ಪ್ರಶಸ್ತಿ
ಕನ್ನಡ ಪತ್ರಿಕೋದ್ಯಮವನ್ನು ಹೊಸ ಎತ್ತರಕ್ಕೊಯ್ದ ದಿಗ್ಗಜ ದಿ. ಶ್ರೀ ಟಿ.ಎಸ್. ರಾಮಚಂದ್ರರಾವ್. ಸಮಾಜ, ರಾಜಕಾರಣದ ಓರೆ ಕೋರೆಗಳಿಗೆ ಇವರ ‘ಛೂ ಬಾಣ’ದ ಮೂಲಕ ಪತ್ರಿಕಾ ಭಾಷೆಗೆ ಹೊಸ ರೂಪ ನೀಡಿದವರು. ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸುವ ಪತ್ರಕರ್ತರೊಬ್ಬರಿಗೆ ಅವರ ನೆನಪಿನಲ್ಲಿ 1993ರಿಂದ ಕರ್ನಾಟಕ ಸರ್ಕಾರ ಪ್ರತಿ ವರ್ಷ “ಟಿಯೆಸ್ಸಾರ್ ಪತ್ರಿಕೋದ್ಯಮ ಪ್ರಶಸ್ತಿ’ ನೀಡುತ್ತದೆ. ಈ ಪ್ರಶಸ್ತಿ ಮೊತ್ತ 2 ಲಕ್ಷ ರೂಪಾಯಿಗಳು ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ.
2018 ರವರೆಗೆ 26 ಜನ ಹಿರಿಯ ಪತ್ರಕರ್ತರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2019 ರಿಂದ 2023 ರವರೆಗಿನ 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಇದೀಗ ಸರ್ಕಾರ ಪ್ರಕಟಿಸಿದೆ. 2019ನೇ ಸಾಲಿಗೆ ಶಿವಾಜಿ ಎಸ್ ಗಣೇಶನ್. 2020ನೇ ಸಾಲಿಗೆ ಶ್ರೀಕಾಂತಾಚಾರ್ಯ.ಆರ್.ಮಣೂರ , 2021ನೇ ಸಾಲಿಗೆ ಡಾ.ಆರ್.ಪೂರ್ಣಿಮಾ , 2022ನೇ ಸಾಲಿಗೆ ಡಾ.ಪದ್ಮರಾಜ ದಂಡಾವತಿ, 2023ನೇ ಸಾಲಿಗೆ ಡಾ.ಸರಜೂ ಕಾಟ್ಕರ್ ರವರಿಗೆ ನೀಡಲಾಗಿದೆ.
ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ:
ಕನ್ನಡ ಪತ್ರಿಕಾ ರಂಗದ ಭೀಷ್ಮ ಎಂದೇ ಹೆಸರಾದ ಮೊಹರೆ ಹಣಮಂತರಾಯರು 1892 ರ ನವೆಂಬರ್ 12 ರಂದು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ಜನಿಸಿದರು. ವಿಜಯಪುರದಲ್ಲೇ ಶಿಕ್ಷಣ ಪೂರೈಸಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆಮನೆವಾಸವನ್ನೂ ಅನುಭವಿಸಿದವರು. ನಿಷ್ಠುರ ಪತ್ರಿಕೋದ್ಯಮಕ್ಕೆ ಹೆಸರಾದವರು. ಕನ್ನಡ ಪತ್ರಿಕೆ ಅಥವಾ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಪತ್ರಕರ್ತರ ಸಾಧನೆಯನ್ನು ಗುರುತಿಸಿ. ಇವರ ಸ್ಮರಣಾರ್ಥ ‘ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ’ಯನ್ನು ಕರ್ನಾಟಕ ಸರ್ಕಾರವು 2010ರಿಂದ ಪ್ರತಿ ವರ್ಷ ನೀಡುತ್ತಿದೆ. ಈ ಪ್ರಶಸ್ತಿಯು 2 ಲಕ್ಷ ರೂ. ನಗದು ಪುರಸ್ಕಾರವನ್ನು ಒಳಗೊಂಡಿದೆ. ಈ ವರೆಗೆ 09 ಪತ್ರಕರ್ತರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2019 ರಿಂದ 2023 ರವರೆಗಿನ 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಇದೀಗ ಸರ್ಕಾರ ಪ್ರಕಟಿಸಿದೆ.
2019ನೇ ಸಾಲಿಗೆ ರಾಜೀವ್ ಕಿದಿಯೂರ , 2020ನೇ ಸಾಲಿಗೆ ಇಂದೂಧರ ಹೊನ್ನಾಪುರ, 2021ನೇ ಸಾಲಿಗೆ ಎನ್.ಮಂಜುನಾಥ್, 2022ನೇ ಸಾಲಿಗೆ ಚಂದ್ರಶೇಖರ್ ಪಾಲೆತ್ತಾಡಿ, 2023ನೇ ಸಾಲಿಗೆ ಶಿವಲಿಂಗಪ್ಪ ದೊಡ್ಡಮನಿ ಯವರಿಗೆ ಈ ಪ್ರಶಸ್ತಿಯನ್ನ ನೀಡಲಾಗಿದೆ.
ಕ್ರಾಂತಿದೀಪ ಎನ್ ಮಂಜುನಾಥ್
ಶಿವಮೊಗ್ಗದ ಕ್ರಾಂತಿದೀಪ ಕನ್ನಡ ದಿನಪತ್ರಿಕೆಯನ್ನು ಕಳೆದ 1985 ಆಗಸ್ಟ್ 15 ರಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅಚ್ಚುಮೊಳೆಯ ಮುದ್ರಣದಲ್ಲಿ ಪತ್ರಿಕೆಯನ್ನು ಪ್ರಾರಂಭಿಸಿದ ಇವರು ಕಾಲಕ್ಕನುಗುಣವಾಗಿ ಹೊಸಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮಲೆನಾಡು-ಬಯಲುಸೀಮೆ ಜಿಲ್ಲೆಗಳಲ್ಲಿ ಪತ್ರಿಕೆಯನ್ನು ಜನಪ್ರಿಯಗೊಳಿಸಿದ್ದಾರೆ. ಹೊಸ ಪತ್ರಕರ್ತರಿಗೆ ಇವರ ದಿನಪತ್ರಿಕೆಯು ತರಬೇತಿ ಶಾಲೆಯಂತೆ ಕೆಲಸ ಮಾಡಿದೆ ಈ ಪತ್ರಿಕೆಯಲ್ಲಿ ವೃತ್ತಿ ಅನುಭವ ಹೊಂದಿದ ಯುವಕರು ನಾಡಿನ ಪ್ರಮುಖ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
2022ನೇ ಸಾಲಿಗೆ ಚಂದ್ರಶೇಖರ್ ಪಾಲೆತ್ತಾಡಿ:
ದಕ್ಷಿಣ ಕನ್ನಡ ಜಿಲ್ಲೆಯ ಪಾಲೆತ್ತಾಡಿಯವರಾದ ಚಂದ್ರಶೇಖರ ಇವರು ಮುಂಬೈಯಲ್ಲಿ ನೆಲೆಸಿದ್ದು,1992ರಿಂದ ಅನೇಕ ಸವಾಲುಗಳ ಮಧ್ಯೆಯೂ ಕರ್ನಾಟಕ ಮಲ್ಲ ಕನ್ನಡ ದಿನಪತ್ರಿಕೆಯನ್ನು ಹೊರನಾಡಿನಿಂದ ಪ್ರಕಟಿಸುತ್ತಿರುವುದು ವಿಶೇಷ.
ಮುಂಬೈಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಗೆ ಇವರ ಕೊಡುಗೆ ಅಮೂಲ್ಯವಾಗಿದೆ.