Job Scam ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಹಿಳೆಯೊಬ್ಬರಿಗೆ ‘ವರ್ಕ್ ಫ್ರಂ ಹೋಮ್’ ಉದ್ಯೋಗ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ವರದಿಯಾಗಿದೆ.
ಮಹಿಳೆ ಇನ್‌ಸ್ಟಾಗ್ರಾಮ್ ನೋಡುತ್ತಿದ್ದಾಗ, ಅವರಿಗೆ ವರ್ಕ್ ಫ್ರಂ ಹೋಮ್ ಜಾಬ್‌ನ ಜಾಹೀರಾತು ಕಾಣಿಸಿದೆ. ಅದನ್ನು ಕ್ಲಿಕ್ ಮಾಡಿದಾಗ, ಅವರು ‘ಅನನ್ಯ’ ಎಂಬ ಖಾತೆಯೊಂದಿಗೆ ಜಾಯಿನ್ ಆಗಿದ್ದಾರೆ. ಆ ಖಾತೆಯಿಂದ ದೂರುದಾರ ಮಹಿಳೆಗೆ ಕೆಲಸದ ಕುರಿತು ಮಾಹಿತಿಯನ್ನು ನೀಡಲಾಗಿದೆ.ಇದನ್ನು ನಂಬಿದ ಮಹಿಳೆಗೆ, ವಂಚಕರು ಮತ್ತೊಂದು ಟೆಲಿಗ್ರಾಮ್ ಗ್ರೂಪ್‌ಗೆ ಸೇರುವಂತೆ ಸೂಚಿಸಿದ್ದಾರೆ. ಈ ಗುಂಪಿಗೆ ಸೇರಿದ ನಂತರ, ಕಂಪನಿಯಿಂದ ನೀಡುವ ಟಾಸ್ಕ್‌ಗಳನ್ನು ಪೂರ್ತಿಗೊಳಿಸಿದರೆ ಹೆಚ್ಚಿನ ಲಾಭಾಂಶ ಕೊಡುತ್ತೇವೆ” ಎಂದು ಆಮಿಷವೊಡ್ಡಿದ್ದಾರೆ.
ವಂಚಕರು ನೀಡಿದ ವಿವಿಧ ಟಾಸ್ಕ್‌ಗಳನ್ನು ಪೂರ್ತಿಗೊಳಿಸಲು, ಮೊದಲು ಹಣ ಹೂಡಿಕೆ ಮಾಡಬೇಕು ಎಂದು ತಿಳಿಸಿದ್ದಾರೆ. ಇದಕ್ಕಾಗಿ ವಿವಿಧ ಸ್ಕ್ಯಾನರ್‌ಗಳನ್ನು ಕಳುಹಿಸಿ, ದೂರುದಾರ ಮಹಿಳೆಯ ಬ್ಯಾಂಕ್ ಖಾತೆಯಿಂದ ಒಟ್ಟು 2,45,700 ಹಣವನ್ನು ಹಂತ ಹಂತವಾಗಿ ವರ್ಗಾಯಿಸಿಕೊಂಡಿದ್ದಾರೆ.
ನಂತರ, ಹೂಡಿಕೆ ಮಾಡಿದ ಹಣ ಮತ್ತು ಲಾಭಾಂಶವನ್ನು ಹಿಂಪಡೆಯಲು ಮಹಿಳೆ ಕೇಳಿದಾಗ, ನಿಮ್ಮ ಅಕೌಂಟ್ ಫ್ರೀಜ್ ಆಗಿದೆ, ಅದನ್ನು ಅನ್‌ಫ್ರೀಜ್ ಮಾಡಲು 1,43,000 ಹಣವನ್ನು ಕಟ್ಟಬೇಕು ಎಂದು ತಿಳಿಸಿದ್ದಾರೆ. ಆಗ ಮಹಿಳೆಗೆ ಅನುಮಾನ ಬಂದಿದೆ. ಪರಿಚಯದವರಲ್ಲಿ ವಿಚಾರಿಸಿದಾಗ, ತಾವು ಮೋಸ ಹೋಗಿರುವುದು ತಿಳಿದುಬಂದಿದೆ..
ತಮ್ಮಿಂದ ವಂಚನೆಯ ಮೂಲಕ ಪಡೆದಿರುವ 2,45,700 ಹಣವನ್ನು ವಾಪಸ್ ಕೊಡಿಸುವಂತೆ ಮತ್ತು ವಂಚಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆ ಶಿವಮೊಗ್ಗದ ಸಿಇಎನ್ (CEN) ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Job Scam