Cyber crime : ಒಂದು ಫೋನ್ ಕಾಲ್. ನಂಬಿದ ಶಿವಮೊಗ್ಗದ ವ್ಯಕ್ತಿ ಕಳೆದುಕೊಂಡಿದ್ದು ಎಷ್ಟು ಕೋಟಿ ಗೊತ್ತಾ..
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂಗಳು ಹೆಚ್ಚಾಗಿದ್ದು, ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳು ಸಹ ಸೈಬರ್ ವಂಚಕರ ಖೆಡ್ಡಾಕ್ಕೆ ಬೀಳುತ್ತಿದ್ದಾರೆ. ವಂಚಕರು ಅಪರಿಚಿತ ಲಿಂಕ್‌ಗಳನ್ನು ಕಳುಹಿಸಿ ಹಣ ಹೂಡಿಕೆ ಮಾಡಲು ಪ್ರೇರೇಪಿಸಿ ಕೋಟ್ಯಂತರ ರೂಪಾಯಿ ಲಪಟಾಯಿಸುತ್ತಿದ್ದಾರೆ. ಅದಕ್ಕೆ ನಿದರ್ಶನ ಎಂಬಂತೆ ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರು ವಂಚಕರ ಬಲೆಗೆ ಬಿದ್ದು 1,06,49,500 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
Cyber crime ಘಟನೆ ವಿವರ:
ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಸೆಪ್ಟೆಂಬರ್ 11, 2025 ರಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಅಪರಿಚಿತರು ವ್ಯಕ್ತಿಗೆ ಟ್ರೇಡಿಂಗ್ ಮಾಡುತ್ತೀರಾ ಎಂದು ಕರೆ ಮಾಡಿದವರು ಕೇಳಿದ್ದರು. ಅದಕ್ಕೆ, ತಾವು ಟ್ರೇಡಿಂಗ್‌ನಲ್ಲಿ ಆಸಕ್ತಿ ಹೊಂದಿರುವುದಾಗಿ ವ್ಯಕ್ತಿ ತಿಳಿಸಿದ್ದರು. ಆ ಬಳಿಕ, ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಲು ಒಂದು ಲಿಂಕ್ ಕಳುಹಿಸಿದ್ದರು. ಅದೇ ದಿನ, ವ್ಯಕ್ತಿ ಆ ಗ್ರೂಪ್‌ಗೆ ಸೇರಿಕೊಂಡು, ಅಲ್ಲಿ ಸೂಚಿಸಿದಂತೆ ಒಂದು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡರು.
ಆ ಗ್ರೂಪ್‌ನಲ್ಲಿ, ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದರು. ಹೂಡಿಕೆ ಮಾಡಿದ ಹಣದ ಮೇಲೆ 10%, 50%, ಮತ್ತು 200% ಲಾಭಾಂಶ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ, ವ್ಯಕ್ತಿ ವಿವಿಧ ಬ್ಯಾಂಕ್ ಖಾತೆಗಳಿಗೆ IMPS ಮತ್ತು RTGS ಮೂಲಕ ಹಣ ವರ್ಗಾವಣೆ ಮಾಡಿದ್ದರು.
ಸೆಪ್ಟೆಂಬರ್ 8, 2025 ರಂದು ಹಣವನ್ನು ಹಿಂಪಡೆಯಲು ಹೋದಾಗ, 200% ಕ್ಕಿಂತ ಹೆಚ್ಚಿನ ಲಾಭಾಂಶಕ್ಕೆ 20% ತೆರಿಗೆ ಮತ್ತು ಸೇವಾ ಶುಲ್ಕ ಪಾವತಿಸಬೇಕು ಎಂದು ತಿಳಿಸಿದರು. ಇಲ್ಲದಿದ್ದರೆ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಬಳಿಕ, ವ್ಯಕ್ತಿ ಈ ಹಣವನ್ನು ಪಾವತಿಸಲು ಹಿಂದೇಟು ಹಾಕಿದಾಗ, ಕಡಿಮೆ ಹಣ ಕಟ್ಟುವಂತೆ ಸಲಹೆ ನೀಡಿದರು.
Cyber crime ಇದರಿಂದ ಸಂಶಯಗೊಂಡು, ವ್ಯಕ್ತಿ ಇಂಟರ್ನೆಟ್‌ನಲ್ಲಿ ಹುಡುಕಿ, ಪರಿಚಿತರು ಮತ್ತು ಕುಟುಂಬದವರೊಂದಿಗೆ ವಿಚಾರಿಸಿದಾಗ, ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಈ ರೀತಿಯಾಗಿ, ಅಪರಿಚಿತ ವ್ಯಕ್ತಿಗಳು ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ, ವಿವಿಧ ಬ್ಯಾಂಕ್ ಖಾತೆಗಳಿಗೆ 1,06,49,500 ರೂಪಾಯಿಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಬಗ್ಗೆ ಶಿವಮೊಗ್ಗದ ಸಿಇಎನ್ (CEN) ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.