Darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಡೆವಿಲ್‘ ಚಿತ್ರದ ಮೊದಲ ಹಾಡು ಬಿಡುಗಡೆಗೆ ಸಿದ್ಧವಾಗಿದೆ. “ಇದ್ರೆ ನೆಮ್ದಿಯಾಗಿ ಇರ್ಬೇಕು” ಎಂಬ ಶೀರ್ಷಿಕೆಯ ಈ ಹಾಡು ಇದೇ ಆಗಸ್ಟ್ 24 ರಂದು ಬೆಳಿಗ್ಗೆ 10:05 ಗಂಟೆಗೆ ಸರಿಗಮಪ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15 ರಂದು ಈ ಹಾಡು ಬಿಡುಗಡೆಯಾಗಬೇಕಿತ್ತು, ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ ಹಿನ್ನೆಲೆಯಲ್ಲಿ ಹಾಡಿನ ಬಿಡುಗಡೆಯನ್ನು ಮುಂದೂಡಲಾಗಿತ್ತು. ಈ ಘಟನೆಯ ನಂತರ, ದರ್ಶನ್ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಅವರ ಪತ್ನಿ ವಿಜಯಲಕ್ಷ್ಮಿ ಅವರು ನಿರ್ವಹಿಸುತ್ತಿದ್ದಾರೆ.
ವಿಜಯಲಕ್ಷ್ಮಿ ಅವರ ಮೂಲಕ, ದರ್ಶನ್ ತಮ್ಮ ಅಭಿಮಾನಿಗಳಿಗೆ ಸಂದೇಶ ಕಳುಹಿಸಿ, “ನನ್ನನ್ನು ನಂಬಿ ಕನಸು ಕಂಡಿರುವ ನಿರ್ದೇಶಕರ ಹಾಗೂ ನನ್ನ ಮೇಲೆ ಕೋಟಿಗಟ್ಟಲೆ ಹಣ ಹೂಡಿರುವ ನಿರ್ಮಾಪಕರ ಬೆಂಬಲವಾಗಿ ನಿಲ್ಲುವುದು ನನ್ನ ಆದ್ಯ ಕರ್ತವ್ಯ. ಹಾಗಾಗಿ ನನ್ನ ‘ದಿ ಡೆವಿಲ್’ ಚಿತ್ರದ ಎಲ್ಲ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ಸಾಗಲಿ ಎಂಬುದು ನನ್ನ ಆಶಯ. ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ” ಎಂದು ತಿಳಿಸಿದ್ದರು. ಅಲ್ಲದೆ, “ಸಿನಿಮಾ ಒಂದು ಮನರಂಜನೆಯ ಮಾಧ್ಯಮ, ಅದನ್ನು ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರ ನೋಡಬೇಕು” ಎಂದು ಅಭಿಮನಾನಿಗಳಲ್ಲಿ ಮನವಿ ಮಾಡಿದ್ದರು.
Darshan ಇದಾದ ನಂತರ ದರ್ಶನ್ ಅವರ ಅಭಿಮಾನಿಗಳು ನೆಚ್ಚಿನ ನಟ ಇಲ್ಲದೆಯೂ ಸಹ ಸಿನಿಮಾವನ್ನು ಅದ್ದೂರಿಯಾಗಿ ಪ್ರಚಾರಮಾಡಿ ರಿಲೀಸ್ ಮಾಡಬೇಕು ಎಂದು #StandingStrongWithDevil ಮತ್ತು #ForeverWithDBoss ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದರು.
ಇದಾದ ನಂತರ ಚಿತ್ರತಂಡ ಇದೀಗ ಹಾಡಿನ ಹೊಸ ದಿನಾಂಕವನ್ನು ಘೋಷಿಸಿದೆ. ಈಗಾಗಲೇ ಫರ್ಸ್ಟ್ ಸಿಂಗಲ್ ನಾ ಗ್ಲಿಂಪ್ಸ್ ಒಂದನ್ನು ಬಿಟ್ಟಿದ್ದು. ಇದರ ಪೂರ್ಣ ಪ್ರಮಾಣದ ಹಾಡು ಆಗಸ್ಟ್ 24 ರಂದು ಬೆಳಿಗ್ಗೆ ಬಿಡುಗಡೆಯಾಗಲಿದೆ.