Kuvempu University ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಕ್ರೀಡಾಕೂಟಗಳಲ್ಲಿ ಕರಾಟೆ ಕ್ರೀಡೆಯನ್ನು ಸೇರ್ಪಡೆಗೊಳಿಸಲು ವಿಶ್ವವಿದ್ಯಾಲಯವು ಕಾಲೇಜುಗಳಿಂದ ಮಾಹಿತಿ ಕೋರಿದ್ದು, ಕ್ರೀಡಾಪಟುಗಳು ತಮ್ಮ ಕಾಲೇಜುಗಳ ಮೂಲಕ ಮಾಹಿತಿ ನೀಡುವಂತೆ ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ಜಿಲ್ಲಾ ಗೌರವ ಅಧ್ಯಕ್ಷರಾದ ವಿನೋದ್ ಮನವಿ ಮಾಡಿದ್ದಾರೆ.
ನಗರದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿನೋದ್, ಕರಾಟೆ ಕ್ರೀಡೆಯು ಹಲವು ವರ್ಷಗಳಿಂದ ಅಖಿಲ ಭಾರತ ವಿಶ್ವವಿದ್ಯಾಲಯ ಕ್ರೀಡಾಕೂಟಗಳ ಪಟ್ಟಿಯಲ್ಲಿದೆ. ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ಈಗಾಗಲೇ ಕರಾಟೆ ತಂಡಗಳನ್ನು ಆಯ್ಕೆ ಮಾಡಿ ರಾಷ್ಟ್ರಮಟ್ಟದ ಸ್ಪರ್ಧೆಗಳಿಗೆ ಕಳುಹಿಸುತ್ತಿವೆ. ಆದರೆ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಇದುವರೆಗೂ ಈ ಪ್ರಕ್ರಿಯೆ ನಡೆಯುತ್ತಿರಲಿಲ್ಲ. ಇದರಿಂದಾಗಿ ಶಾಲಾ ಮತ್ತು ಪದವಿ ಪೂರ್ವ ಹಂತದಲ್ಲಿ ಕರಾಟೆಯಲ್ಲಿ ತೊಡಗಿಸಿಕೊಂಡಿದ್ದ ಕ್ರೀಡಾಪಟುಗಳಿಗೆ ಉನ್ನತ ಶಿಕ್ಷಣ ಹಂತದಲ್ಲಿ ಅವಕಾಶ ವಂಚಿತರಾಗುತ್ತಿದ್ದರು ಎಂದು ಅವರು ವಿಷಾದ ವ್ಯಕ್ತಪಡಿಸಿದರು.
Kuvempu University ದೀರ್ಘಕಾಲದ ಹೋರಾಟಕ್ಕೆ ಸಿಕ್ಕ ಫಲ
ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ 2019 ರಲ್ಲಿ ಮೊದಲ ಬಾರಿಗೆ ಕುವೆಂಪು ವಿಶ್ವವಿದ್ಯಾಲಯಕ್ಕೆ ಕರಾಟೆಯನ್ನು ಸೇರಿಸುವಂತೆ ಮನವಿ ಸಲ್ಲಿಸಿತ್ತು. ನಂತರ 2023 ರಲ್ಲಿ ಮತ್ತೊಮ್ಮೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿರಲಿಲ್ಲ. ಇತ್ತೀಚೆಗೆ, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಲಕ್ಷ್ಮಿಕಾಂತ ಚಿಮನೂರು ಅವರ ನೇತೃತ್ವದಲ್ಲಿ ಕುಲಪತಿಗಳು ಮತ್ತು ರಿಜಿಸ್ಟ್ರಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ, ಕರಾಟೆ ಕ್ರೀಡಾಪಟುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದಾಗ, ಕುಲಪತಿಗಳು ಮತ್ತು ರಿಜಿಸ್ಟ್ರಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವಿನೋದ್ ತಿಳಿಸಿದರು.


ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳಿಗೆ ಈ ವರ್ಷ ಸುತ್ತೋಲೆ ಕಳುಹಿಸಿ, ಕರಾಟೆ ಕ್ರೀಡಾಪಟುಗಳ ಮಾಹಿತಿಯನ್ನು ಪಡೆದುಕೊಂಡು, ನಿಯಮಿತ ಸಂಖ್ಯೆಯ ಕ್ರೀಡಾಪಟುಗಳಿದ್ದಲ್ಲಿ ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಯನ್ನು ಪ್ರಾರಂಭಿಸುವುದಾಗಿ ಕುಲಪತಿಗಳು ಭರವಸೆ ನೀಡಿದ್ದಾರೆ. ಈ ನಿರ್ಧಾರವು ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್‌ನ ನಿರಂತರ ಪ್ರಯತ್ನಕ್ಕೆ ದೊರೆತ ಪ್ರಮುಖ ಪ್ರತಿಫಲವಾಗಿದೆ. ಇದರಿಂದ ಕುವೆಂಪು ವಿವಿ ಅಡಿಯಲ್ಲಿ ಬರುವ ಕಾಲೇಜುಗಳ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಪದಕಗಳನ್ನು ಗಳಿಸಲು ಮತ್ತು ಸರ್ಕಾರದ ಕ್ರೀಡಾ ಕೋಟಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ವಿನೋದ್ ವಿಶ್ವಾಸ ವ್ಯಕ್ತಪಡಿಸಿದರು.
Kuvempu University ಅರ್ಜಿ ಸಲ್ಲಿಸುಲು ಬೇಕಾದ ಅಗತ್ಯ ದಾಖಲೆಗಳು
ಕುವೆಂಪು ವಿವಿ ಅಡಿಯಲ್ಲಿ ಬರುವ ಕಾಲೇಜುಗಳ ಕರಾಟೆ ಕ್ರೀಡಾಪಟುಗಳು ತಮ್ಮ ವಿವರಗಳನ್ನು ಕಾಲೇಜುಗಳ ಮೂಲಕ ವಿಶ್ವವಿದ್ಯಾಲಯಕ್ಕೆ ತಲುಪಿಸಬೇಕು. ಈ ಮಾಹಿತಿಯನ್ನು ತಲುಪಿಸಲು ಇಂದಿನಿಂದ ಒಂದು ತಿಂಗಳು ಕಾಲಾವಕಾಶ ಇದ್ದು ಅದರಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ, ಆಧಾರ್ ಸಂಖ್ಯೆ, ವ್ಯಾಸಂಗ ಮಾಡುತ್ತಿರುವ ಪದವಿ ವರ್ಷ, ಕರಾಟೆಯಲ್ಲಿ ಭಾಗವಹಿಸುವ ಕೆಟಗರಿ ಮತ್ತು ಈ ಹಿಂದಿನ ಕರಾಟೆ ಕ್ರೀಡೆಯಲ್ಲಿನ ಸಾಧನೆ ಕುರಿತಾಗಿರಬೇಕು ಎಂದು ವಿನೋದ್ ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ಜಿಲ್ಲಾದ್ಯಕ್ಷ ಮುಖೀಬ್ ಅಹಮದ್.ಶಿಕಾರಿಪುರ ತಾಲೂಕು ಅಧ್ಯಕ್ಷ ನರಸಿಂಹ ಸ್ವಾಮಿ ಖಜಾಂಚಿ ಇರ್ಫಾನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
